ಗುರುವಾರ , ಜೂನ್ 24, 2021
28 °C

ದೇವದಾಸಿ ಪದ್ಧತಿ: ಗ್ರಾಮದಲ್ಲೇ ಕಣ್ಗಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆಕೆ ಇನ್ನೂ ಪುಟ್ಟ ಬಾಲಕಿ. ಶಾಲೆಗೆ ಹೋಗಬೇಕಾದವಳನ್ನು ದೇವದಾಸಿಯನ್ನಾಗಿಸಲು ಹೆತ್ತವರೇ `ಹುನ್ನಾರ~ ನಡೆಸಿದ್ದರು. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತೆರಳಿ ಅವಳನ್ನು ರಕ್ಷಿಸಿದರು.ಈ ಪ್ರಸಂಗ ನಡೆದದ್ದು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ. ಧಾರವಾಡ ತಾಲ್ಲೂಕಿನ ಜೋಗ ಯಲ್ಲಾಪುರದ ಬಾಲಕಿಯನ್ನು ಯಲ್ಲಮ್ಮನ ಗುಡ್ಡದ ಬಳಿ ಮುತ್ತು ಕಟ್ಟಲು ಕರೆದುಕೊಂಡು ಹೋಗಿದ್ದಾಗ ರಕ್ಷಿಸಲಾಯಿತು. ಆಕೆ ಈಗ ಹುಬ್ಬಳ್ಳಿಯ ಬಾಲಕಿಯರ ಬಾಲಮಂದಿರದಲ್ಲಿದ್ದಾಳೆ.

 

ಇಂಥ ಪ್ರಯತ್ನಗಳನ್ನು ತಡೆಯಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಗ್ರಾಮ ಮಟ್ಟದಲ್ಲೇ ಕಣ್ಗಾವಲಿಗೆ ಯೋಜನೆ ಸಿದ್ಧಪಡಿಸುವ ಯತ್ನದಲ್ಲಿದೆ. ಈ ಪದ್ಧತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಾಮಾಜಿಕ ನ್ಯಾಯ ಸಮಿತಿಗಳನ್ನು ರಚಿಸುವ ಚಿಂತನೆ ನಡೆದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.`ರಾಜ್ಯದ 14 ಜಿಲ್ಲೆಗಳಲ್ಲಿ ದೇವದಾಸಿಯರನ್ನು ಪತ್ತೆ ಮಾಡಲಾಗಿದೆ. ಈ ಪದ್ಧತಿಗೆ ಹೊಸಬರು ಸೇರ್ಪಡೆಯಾಗದಂತೆ ಎಚ್ಚರವಹಿಸಲು ಸ್ಥಳೀಯ ಆಡಳಿತ ಸಂಸ್ಥೆಗಳ ಜೊತೆಗೂಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ಸರ್ಕಾರ 14 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಚೆಗೆ ಪತ್ರ ಬರೆದಿದೆ~ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಸುಬ್ಬಯ್ಯ `ಪ್ರಜಾವಾಣಿ~ಗೆ ತಿಳಿಸಿದರು.`ದೇವದಾಸಿ ಪದ್ಧತಿಗೆ ಸಂಬಂಧಿಸಿದ ಯಾವುದೇ ಪತ್ರ ಇನ್ನೂ ಕೈಸೇರಿಲ್ಲ. ಜಿಲ್ಲೆಯಲ್ಲಿ ಪತ್ತೆ ಮಾಡಲಾದ ದೇವದಾಸಿಯರ ಪುನರ್ವಸತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿವೆ~ ಎಂದು ಧಾರವಾಡ ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು.`ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯ ಮಂಡಳಿ ರಚನೆ ಮುಂದಿನ ಹಣಕಾಸು ವರ್ಷದಲ್ಲಿ ಕಾರ್ಯಗತವಾಗುವ ಸಾಧ್ಯತೆ ಇದೆ~ ಎಂದು ಮಹಿಳಾ ಅಭಿವೃದ್ಧಿ ನಿಗಮದ ಧಾರವಾಡ ಜಿಲ್ಲಾ ಯೋಜನಾಧಿಕಾರಿ ಮಧುಸೂದನ ತಿಳಿಸಿದರು.

 

46 ಪ್ರಕರಣ, ಒಬ್ಬರಿಗೆ ಶಿಕ್ಷೆ!

ದೇವದಾಸಿ ಪದ್ಧತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಣೆ ನೀಡುವುದು ದಂಡನಾರ್ಹ ಅಪರಾಧ. ಆರೋಪಿಗಳಿಗೆ 3,000 ರೂಪಾಯಿ ದಂಡ ಹಾಗೂ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ರಾಜ್ಯದಲ್ಲಿ ಈ ವರೆಗೆ ಸುಮಾರು 46 ಪ್ರಕರಣಗಳು ದಾಖಲಾಗಿದ್ದರೆ ಕೇವಲ ಒಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.