ದೇವದುರ್ಗ: ಕುಡಿಯುವ ನೀರಿಗಾಗಿ ಪ್ರತಿಭಟನೆ

7

ದೇವದುರ್ಗ: ಕುಡಿಯುವ ನೀರಿಗಾಗಿ ಪ್ರತಿಭಟನೆ

Published:
Updated:

ದೇವದುರ್ಗ: ನಗರದ ಪುರಸಭೆ ವ್ಯಾಪ್ತಿಯ ಶಾಂತಿನಗರ ವಾರ್ಡ್‌ಗೆ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿ ಬುಧವಾರ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ವಾರ್ಡ್ ನಾಗಕರಿಕರು ಮುಖ್ಯಾಧಿಕಾರಿಯನ್ನು ಭೇಟಿಯಾಗಲು ನೇರವಾಗಿ ಪುರಸಭೆಗೆ ಆಗಮಿಸಿದಾಗ , ಕಚೇರಿಯಲ್ಲಿ ಮುಖ್ಯಾಧಿಕಾರಿ ಇಲ್ಲ ಎಂಬ ಸುದ್ದಿ ತಿಳಿದ ನಂತರ ಮಿನಿ ವಿಧಾನಸೌಧಕ್ಕೆ ಆಗಮಿಸಿ ಕೆಲವು ಕಾಲ ಪ್ರತಿಭಟಿಸಿದ ನಂತರ ತಹಸೀಲ್ದಾರ್ ಹಬೀಬುರ್ ರಹಮಾನ ಅವರಿಗೆ ಮನವಿ ಸಲ್ಲಿಸಿದರು.ವಾರ್ಡ್‌ಗೆ ಅಗತ್ಯ ಮೂಲಸೌಕರ್ಯಗಳು ಇಲ್ಲದೆ ಬೆಳಗಾದರೆ ಜನರು ತೊಂದರೆಯಲ್ಲಿ ಕಾಲಕಳಿಯುವಂತಾಗಿದೆ. ಅಗತ್ಯವಾಗಿರುವ ಕುಡಿಯುವ ನೀರು, ರಸ್ತೆ,ಚರಂಡಿ ಮತ್ತು ಬೀದಿದೀಪ ಇಲ್ಲದೆ ಇರುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಪುರಸಭೆಗೆ ಮನವಿ ಪತ್ರ ಸಲ್ಲಿಸಲಾಗಿದ್ದರೂ ಅಧಿಕಾರಿಗಳು ಸೌಜನ್ಯಕ್ಕಾದರೂ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದ ಉದಾಹರಣೆ ಇಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.ಪಕ್ಕದ ಕೃಷ್ಣಾ ನದಿಯಿಂದ ಪ್ರತಿನಿತ್ಯ ಕುಡಿಯುವ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿಯೇ ವರ್ಷಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಲಾಗುತ್ತಿದ್ದರೂ ಶಾಂತಿನಗರಕ್ಕೆ ಹನಿ ನೀರಲ್ಲದೆ ಜನರು ಪಕ್ಕದ ವಾರ್ಡ್ ಅಥವಾ ದೂರದ ಬೋರ್‌ವೆಲ್‌ಗಳಿಂದ ನೀರು ತರಬೇಕಾದ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.ಬೇಡಿಕೆ: ಕೂಡಲೇ ಶಾಂತಿ ನಗರಕ್ಕೆ ಸರಬರಾಜು ಮಾಡಲಾಗುವ ಪೈಪ್‌ಲೈನ್‌ನ್ನು ಸಪಪಾತದ ಸ್ಥಿತಿಯಲ್ಲಿ ಹಾಕಬೇಕು ಮತ್ತು ಎಲ್ಲ ಮನೆಗಳಿಗೆ ನೀರು ಬರುವಂತೆ ಕ್ರಮಕೈಗೊಳ್ಳಬೇಕು, ಅವ್ಯವಸ್ಥೆಯಲ್ಲಿ ಇರುವ ಚರಂಡಿಗಳನ್ನು ಸರಿಪಡಿಸಬೇಕು ಮತ್ತು ರಸ್ತೆ ಸೇರಿದಂತೆ ಬೀದಿ ದೀಪಗಳ ದುರಸ್ತಿ ಸೀಘ್ರದಲ್ಲಿಯೇ ಆಗಬೇಕು ಇದಕ್ಕೆ ನಿರ್ಲಕ್ಷ್ಯ ಕಂಡು ಬಂದರೆ ಪುರಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ವಾರ್ಡ್ ಮುಖಂಡರಾದ ಭೀಮಣ್ಣ ಗೋಸಲ, ವಿಜಯಕುಮಾರ ಯಾದವ್, ಶರಣಬಸವ ಮಜಿಗಿ, ಸಂಗಪ್ಪ, ಮಾನಶಯ್ಯ, ವಿನೋದಕುಮಾರ, ಬಾಲಪ್ಪ, ರಾಮಯ್ಯ ತಳವಾರ, ರಾಮಚಂದ್ರಪ್ಪ, ಪಂಪುಕುಮಾರ ಯಾದವ್, ಎಂ.ಡಿ. ಲತೀಫ್, ಉಮೇಶ ರಾಠೋಡ್, ಸುಧೀರ್ ಗೋಪಾಳಪೂರ, ಖಲೀಲುದ್ದೀನ್ ಹಾಗೂ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry