ದೇವದುರ್ಗ: ವೈಭವ ಸಿದ್ರಾಮೇಶ್ವರ ರಥೋತ್ಸವ

7

ದೇವದುರ್ಗ: ವೈಭವ ಸಿದ್ರಾಮೇಶ್ವರ ರಥೋತ್ಸವ

Published:
Updated:

ದೇವದುರ್ಗ: ಗೌರಿ ಹುಣ್ಣಿಮೆಯ ನಂತರ ಐದು ದಿನಕ್ಕೆ ನಡೆಯುವ ಪಟ್ಟಣದ ಪ್ರಸಿದ್ಧ ಶಿಖರ ಮಠದ ಸಿದ್ರಾಮೇಶ್ವರ ದಿವ್ಯ ರಥೋತ್ಸವ ಮಂಗಳವಾರ ಸಂಜೆ 5.30ಕ್ಕೆ ಮಠದ ಕಪಿಲ ಸಿದ್ರಾಮೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಾವಿರಾರೂ ಭಕ್ತರ ಮಧ್ಯೆ ವೈಭವದಿಂದ ಜರುಗಿತು.ಮಠದಲ್ಲಿ ಗೌರಿ ಹುಣ್ಣಿಮೆಯ ದಿನದಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಮಂಗಳವಾರ ಮಧ್ಯಾಹ್ನದಿಂದಲೇ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಬಂದಿದ್ದ ಸಾವಿರಾರೂ ಜನರು ಪಟ್ಟಣದ ಸಿದ್ರಾಮೇಶ್ವರ ಕಾಲೊನಿಯಲ್ಲಿ ಬರುವ ಶಿಖರ ಮಠಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದ ನಂತರ ಸಂಜೆ ನಡೆದ ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು.ಮುಂಜಾನೆ ದೇವಸ್ಥಾನದಲ್ಲಿ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಮಠದ ಕಪಿಲ ಸಿದ್ರಾಮೇಶ್ವರ ಸ್ವಾಮೀಜಿ ಅವರು ನೇತೃತ್ವ ವಹಿಸಿದ್ದರು. ಸಾಂಪ್ರದಾಯದಂತೆ ಸಂಜೆ ದೇವಸ್ಥಾನದಿಂದ ಕರಡಿಗುಡ್ಡ ಮಠದವರೆಗೂ ಮಂಗಳ ವಾದ್ಯಗಳೊಂದಿಗೆ ರಥವನ್ನು ಪಟ್ಟಣದ ಬಜಾರ್ ಮುಖ್ಯ ರಸ್ತೆಯಲ್ಲಿ ಸಾವಿರಾರೂ ಜನ ಭಕ್ತರು ತಮ್ಮ ಆರಾಧ್ಯದೈವ ಸಿದ್ರಾಮೆಶ್ವರರ ರಥವನ್ನು ಭಕ್ತಿಯಿಂದ ಎಳೆದರು. ರಥ ರಾಜಬೀದಿಯ ಗಾಂಧಿ ವೃತ್ತದಿಂದ ಮುಂದೆ ಸಾಗುತ್ತಿದ್ದಂತೆಯೇ ಭಕ್ತರು ಹಣ್ಣು,ತೆಂಗಿನ ಕಾಯಿ ಹೂವುಗಳನ್ನು ತೇರಿಗೆ ಎಸೆದು ಸಂಪ್ರದಾಯ ಮೆರೆದರು.ಎತ್ತುಗಳ ಜಾತ್ರೆ: ರಥೋತ್ಸವ ನಂತರ ಸುಮಾರು ಒಂದು ವಾರಗಳ ಕಾಲ ನಡೆಯುವ ದನಗಳ ಜಾತ್ರೆಗೆ ತಾಲ್ಲೂಕು ಸೇರಿದಂತೆ ಅಕ್ಕ, ಪಕ್ಕದ ಜಿಲ್ಲೆಗಳಿಂದ ರೈತರು ಜಾತ್ರೆ ಎತ್ತುಗಳನ್ನು ಮಾರಾಟಕ್ಕೆ ತರುವುದು ವಾಡಿಕೆ ಇದೆ.ವಿಶೇಷ: ಈ ಬಾರಿ ರಥೋತ್ಸವಕ್ಕೆ ಆಂಧ್ರಪ್ರದೇಶದ ಮಂಚಲಾಪೂರದಿಂದ ಡೊಳ್ಳು ಕುಳಿತ ತಂಡ ಆಗಮಿಸಿ ಎಲ್ಲರ ಗಮನ ಸೆಳೆದರು. ಪಟ್ಟಣದ ಗೆಳೆಯರ ಬಳಗದ ವತಿಯಿಂದ ಸಿದ್ದಯ್ಯಸ್ವಾಮಿ ಪುರಾಣಿಕ ಮಠ, ಶಂಕ್ರಯ್ಯಸ್ವಾಮಿ, ಆರ್. ರಾಜಶೇಖರ, ವಿರೇಶ ರಾಮದುರ್ಗ, ವೆಂಕಟೇಶ ಮಕ್ತಾಲ್ ನಾಗರಾಜ ಪಾಟೀಲ ರಥೋತ್ಸವಕ್ಕೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿದರು.ಕಾಂಗ್ರೆಸ್ ಮುಖಂಡರಾದ ಬಿ.ವಿ. ನಾಯಕ, ಅಮರೇಗೌಡ ಹಂಚಿನಾಳ, ಭೀಮನಗೌಡ ನಾಗಡದಿನ್ನಿ, ಬಾಪೂಗೌಡ ಪಾಟೀಲ ಚಿಕ್ಕಹೊನ್ನಕುಣಿ, ಫಾರುಖ್ ಆಹ್ಮದ್, ಮಹಾದೇವ ಪಾಟೀಲ ಹಾಗೂ ಇತರ ರಾಜಕೀಯ ಪಕ್ಷದ ಮುಖಂಡರು ರಥೋತ್ಸವ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry