ದೇವನಹಳ್ಳಿ: ಕಲಾಪಕ್ಕೆ ವಕೀಲರ ಬಹಿಷ್ಕಾರ

ಶುಕ್ರವಾರ, ಜೂಲೈ 19, 2019
22 °C

ದೇವನಹಳ್ಳಿ: ಕಲಾಪಕ್ಕೆ ವಕೀಲರ ಬಹಿಷ್ಕಾರ

Published:
Updated:

ದೇವನಹಳ್ಳಿ: ಮಾನವ ಸಂಪನ್ಮೂಲ ಇಲಾಖೆಯ ಶಿಫಾರಸಿನಂತೆ ಕೇಂದ್ರ ಸರ್ಕಾರವು ವಕೀಲರಿಗೆ ಮತ್ತು ದೇಶಕ್ಕೇ ಮಾರಕವಾಗುವಂತಹ ಕರಾಳ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಮುಂದಾಗುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ವಕೀಲ ಸಂಘದ ವತಿಯಿಂದ ವಕೀಲರು ಬುಧವಾರ ನ್ಯಾಯಾಲಯದ ದಿನದ ಕಲಾಪ ಬಹಿಷ್ಕರಿಸಿದರು.ನಂತರ ಮಾತನಾಡಿದ ತಾಲ್ಲೂಕು ವಕೀಲರ  ಸಂಘ ಅಧ್ಯಕ್ಷ ಜಿ.ಮಾರೇಗೌಡ, ವಿದೇಶಿಯ ಶಿಕ್ಷಣ ಸಂಸ್ಥೆಗಳನ್ನು ದೇಶದಲ್ಲಿ ಆರಂಭಿಸಿ, ವಿದೇಶ ಭಾಷೆಯಲ್ಲಿ ಶಿಕ್ಷಣ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಈಗಾಗಲೆ ರಾಜ್ಯಸಭೆಯಲ್ಲಿ ಅಂಗೀಕರವಾಗಿರುವ ಉನ್ನತ ಶಿಕ್ಷಣ ಮಸೂದೆ 2011, ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ನಿಗದಿತ ಪ್ರಾಧಿಕಾರ ಮಸೂದೆ 2010, ಹೊರದೇಶದ ಶಿಕ್ಷಣ ಸಂಸ್ಥೆಗಳು (ಪ್ರವೇಶ ಮತ್ತು ಕ್ರಮ ವಹಿಸುವಿಕೆ) ಮಸೂದೆ 2010, ಶೈಕ್ಷಣಿಕ ಮಂಡಳಿಯ ಮಸೂದೆ 2010, ರಾಷ್ಟ್ರೀಯ ಕಾನೂನು ಶಾಲಾ ಮಸೂದೆ 2011, ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2012 ಈ ಎಲ್ಲಾ ಮಸೂದೆ ಮತ್ತು ತಿದ್ದುಪಡಿಗಳು  ಅವೈಜ್ಞಾನಿಕ ಹಾಗೂ ಮಾರಕವಾಗಿವೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯದ ಬಾರ್ ಕೌನ್ಸಿಲ್ ವತಿಯಿಂದ ಜುಲೈ 11 ಮತ್ತು 12ರಂದು ದೇಶದಾದ್ಯಂತ ನ್ಯಾಯಾಲಯಗಳ ಕಲಾಪಗಳನ್ನು ಬಹಿಷ್ಕರಿಸಿ ದೂರ ಉಳಿಯಲಾಗುತ್ತಿದೆ ಎಂದು ಹೇಳಿದರು.ವಕೀಲರ ಸಂಘದ ಕಾರ್ಯದರ್ಶಿ ಮುನಿರಾಜು ಮಾತನಾಡಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಉನ್ನತ ಶಿಕ್ಷಣ ಸಮಿತಿಗೆ ಚುನಾವಣೆ ಮೂಲಕ ನೇಮಕ ಪ್ರಕ್ರಿಯೆ ಆಗಬೇಕು ಆದರೆ ಈ ಹಿಂದಿನಿಂದ ರೂಢಿಯಲ್ಲಿರುವಂತೆ ಸಮಿತಿ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಹಾಗೂ ಇಬ್ಬರು ಉಪಕುಲಪತಿಗಳು ಹಾಗೂ ಹೈಕೋರ್ಟಿನ ಇಬ್ಬರು ಮುಖ್ಯ ನಾಯಾಧೀಶರು ಇರುತ್ತಾರೆ.ಸಮಿತಿ ಸದಸ್ಯರನ್ನಾಗಿ ಸರ್ಕಾರದಿಂದ ನಾಮ ನಿರ್ದೇಶನ ಮಾಡಲಾಗಿರುತ್ತದೆ. ಇವರೇ ಸಭೆಗಳಲ್ಲಿ ಹೆಚ್ಚಿನ ತಿರ್ಮಾನ ತೆಗೆದುಕೊಳ್ಳುವುದರಿಂದ ಇಂತಹ ಕರಾಳ ಮಸೂದೆಗಳು ಹೊರಬರುತ್ತಿವೆ ಎಂದು ಆಕ್ಷೇಪಿಸಿದರು.ಉದ್ದೇಶಿತ ಮಸೂದೆಗಳನ್ನು ಕೂಡಲೇ ಕೈಬಿಡುವುದು ನಮ್ಮ ಒತ್ತಾಯವಾಗಿದೆ ಎಂದು ಅವರು ಹೇಳಿದರು.

ವಕೀಲರ ಸಂಘ ಮಾಜಿ ಅಧ್ಯಕ್ಷ ಬಿ.ಎಂ.ಬೈರೇಗೌಡ ಮಾತನಾಡಿದರು, ವಕೀಲ ಎಸ್.ಎನ್.ವೆಂಕಟೇಶ್ ಸೇರಿದಂತೆ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry