ಬುಧವಾರ, ಜನವರಿ 22, 2020
21 °C

ದೇವನೂರ ಕೃತಿಗಳಲ್ಲಿ ಸಾರ್ವಕಾಲಿಕ ಸತ್ಯ ಅಡಗಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇವನೂರ ಮಹಾದೇವ ಅವರ ಕೃತಿಗಳು ಸ್ಥಳೀಯತೆಯನ್ನು ತೆರೆದಿಡುವುದರ ಜತೆಗೆ ಸಮಸ್ತ ಮನುಕುಲಕ್ಕೆ ಸಾರ್ವಕಾಲಿಕ ಸತ್ಯವನ್ನು ಪ್ರಚುರಪಡಿಸುತ್ತದೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯು ನಗರದ ಗಾಂಧಿಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸಂಬಂಜದ ಒಡಲಾಳ: ದ್ಯಾವನೂರ~ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ದೇವನೂರ ಅವರ `ಒಡಲಾಳ~ ಕೃತಿಯಲ್ಲಿರುವ ಎಲ್ಲಾ ಪಾತ್ರಗಳು ದೇಶದಲ್ಲಿರುವ ಅಷ್ಟು ಹಳ್ಳಿಗಳಲ್ಲಿ ಇರಬಹುದಾದ ಮತ್ತು ಎಲ್ಲ ಕಾಲಘಟ್ಟಕ್ಕೂ ಒಪ್ಪುವ ಕಥೆ. 70 ರ ದಶಕದಲ್ಲಿ ಬಂಡಾಯ ಚಳವಳಿಯಿಂದ ಪ್ರೇರಣೆಗೊಂಡ ಬಹುತೇಕ ಸಾಹಿತಿಗಳು ಆವೇಶವನ್ನೇ ಬಂಡವಾಳವಾಗಿಸಿಕೊಂಡಿದ್ದರು. ಇಂತಹ ಸಂದರ್ಭದಲ್ಲೂ ಶೋಷಣೆಗಳನ್ನು ಸಾವಧಾನದಿಂದಲೇ ಗಮನಿಸಿ ಚಿಂತನೆಗೆ ಹಚ್ಚುವಂತೆ ಬರೆದ ಕೆಲವೇ ಬರಹಗಾರರಲ್ಲಿ ದೇವನೂರು ಮಹತ್ತರ ಪಾತ್ರ ವಹಿಸುತ್ತಾರೆ~ ಎಂದರು.`ಸ್ಥಳೀಯ ಭಾಷೆಯ ಸೊಗಡಿನಲ್ಲೇ ಸ್ಥಳ, ಪಾತ್ರದ ವಿವರಣೆಯನ್ನು ಅಚ್ಚುಕಟ್ಟಾಗಿ ತಿಳಿಸುವ ಅವರ ಕೃತಿಗಳು ಯುವ ಪೀಳಿಗೆಗೆ ಕುತೂಹಲ ಹುಟ್ಟಿಸುತ್ತವೆ. ಪಾತ್ರಗಳ ಆಂತರಿಕ ಮತ್ತು ಬಾಹ್ಯ ತೊಳಲಾಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಅವರ ಚಾಕಚಕ್ಯತೆಯೇ ಓದುಗನನ್ನು ಹಿಡಿದಿಡುತ್ತದೆ~ ಎಂದು ಹೇಳಿದರು.ವಿಮರ್ಶಕ ಪ್ರೊ.ಕೆ.ಮರುಳಸಿದ್ಧಪ್ಪ ಮಾತನಾಡಿ, `12 ನೇ ಶತಮಾನದ ಕಾಲಘಟ್ಟದಲ್ಲಿ ಸಾಹಿತ್ಯಿಕ ಮತ್ತು ಸಾಮಾಜಿಕ ಚಳವಳಿಗಳು ದೇಹ ಮತ್ತು ಜೀವ ಸಂಬಂಧ ಪಡೆದಿತ್ತು. ಅದರ ಮುಂದುವರಿದ ಭಾಗವಾಗಿ 70 ದಶಕದ ಸ್ಥಿತ್ಯಂತರಗಳು ಕಂಡು ಬರುತ್ತವೆ ಮತ್ತು ಈ ಸ್ಥಿತ್ಯಂತರಗಳ ಮುಂಚೂಣಿಯಲ್ಲಿ ದೇವನೂರ ಮತ್ತು ಅವರ ಕೃತಿಗಳಿವೆ~ ಎಂದು ಹೇಳಿದರು.  `ದಮನಿತರ ದನಿಯಾಗಿ ಬರೆದ ಅಷ್ಟು ಕೃತಿಗಳು ಶೋಷಿತನ ಬಗ್ಗೆ ಅನುಕಂಪ, ಶೋಷಣೆಯ ಬಗ್ಗೆ ಆಕ್ರೋಶ ಮತ್ತು ಶೋಷಕನ ಮೂರ್ಖತನವನ್ನು ಎಳೆ-ಎಳೆಯಾಗಿ ಬಿಚ್ಚಿಡುತ್ತವೆ. ಅವರ ಸಾಹಿತ್ಯವನ್ನು ಕೇವಲ ದಲಿತ ನೆಲೆಯಯಲ್ಲಷ್ಟೇ ವಿಶ್ಲೇಷಿಸದೆ, ವಿವಿಧ ಆಯಾಮಗಳನ್ನು ಒಳಗೊಂಡು ವ್ಯಾಪಕ ಚರ್ಚೆ ನಡೆಸಬೇಕು. ದೇವನೂರ ಅವರು `ಕುಸುಮ ಬಾಲೆ~ ಕಾದಂಬರಿಯ ಮೂಲಕ ಪುರಾಣ, ಚರಿತ್ರೆ ಮತ್ತು ವರ್ತಮಾನಗಳನ್ನು ರೂಪಕ ಭಾಷೆಯಲ್ಲಿ ಮಹಾಕಾವ್ಯದಂತೆ ಕಟ್ಟಿಕೊಟ್ಟಿರುವುದು ನಿಜಕ್ಕೂ ಅದ್ಭುತ~  ಎಂದು ಹೇಳಿದರು.ಚಲನಚಿತ್ರ ನಿರ್ದೇಶಕ ಎನ್.ಎಸ್.ಶಂಕರ್, `ಬ್ರಾಹ್ಮಣರನ್ನು ಒಳಗೊಂಡಂತೆ ದಲಿತ ಚಳವಳಿಯನ್ನು ಜಾತ್ಯತೀತ ಸಂವೇದನೆಯಲ್ಲಿ ರೂಪಿಸಬೇಕು ಎಂದು ದೇವನೂರ ಪ್ರತಿಪಾದಿಸುತ್ತಿದ್ದರು. ದಲಿತ ಪ್ರಜ್ಞೆಯಲ್ಲಿರುವ ಸಾಮುದಾಯಿಕ ದನಿಯ ಪ್ರಕಾರವನ್ನು ಸಿದ್ದಲಿಂಗಯ್ಯ ಅವರು ತಮ್ಮ ಕೃತಿಯಲ್ಲಿ ಆಳವಡಿಸಿಕೊಂಡಿದ್ದರೆ, ದೇವನೂರ ಅವರು ಕಲೆಯ ಚೌಕಟ್ಟಿನೊಳಗೆ ಶೋಷಣೆಯನ್ನು ಪರಿಣಾಮ ಕಾರಿಯಾಗಿ ಬಿಂಬಿಸುವ ಮಾರ್ಗವನ್ನು ಕಂಡು ಕೊಂಡಿದ್ದಾರೆ~ ಎಂದರು.

ಪ್ರತಿಕ್ರಿಯಿಸಿ (+)