ಸೋಮವಾರ, ಜನವರಿ 20, 2020
27 °C
ವಿವಸ್ತ್ರಗೊಳಿಸಿ ಶೋಧನೆ: ಒಪ್ಪಿಕೊಂಡ ಅಮೆರಿಕ

ದೇವಯಾನಿ ಪ್ರಕರಣ: ಪರಿಶೀಲನೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ, ಐಎಎನ್‌ಎಸ್‌): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನ ಪ್ರಕರಣದ ವಾಸ್ತವಾಂಶಗಳ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಅಮೆರಿಕ ತಿಳಿಸಿದೆ.ತನ್ನ ರಾಜತಾಂತ್ರಿಕ ಅಧಿಕಾರಿಯ ಬಂಧನಕ್ಕೆ ಪ್ರತೀಕಾರವಾಗಿ ಭಾರತವು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ನೀಡಿದ್ದ ಕೆಲವು ವಿನಾಯ್ತಿ ಸೌಲಭ್ಯ­ಗಳನ್ನು ರದ್ದು­ಪಡಿಸಿ ಹಾಗೂ ದೆಹಲಿಯ­ಲ್ಲಿ­ರುವ ಅಮೆರಿಕ ರಾಯಭಾರ ಕಚೇ­ರಿಯ ಸುತ್ತ ಭದ್ರತೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್‌­ಗಳನ್ನು ತೆರವುಗೊಳಿಸಿ ತಿರುಗ­ೇಟು ನೀಡಿದ ಬಳಿಕ ಅಮೆರಿಕ ಈ ಹೇಳಿಕೆ ನೀಡಿದೆ.ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್‌, ‘ಹೆಚ್ಚಿನ ಭಾರತೀಯರಿಗೆ ಇದೊಂದು ಸೂಕ್ಷ್ಮ ವಿಚಾರ ಎಂಬುದು ನಮಗೆ ಅರ್ಥವಾಗುತ್ತದೆ. ಈ ಬಂಧನ ಪ್ರಕರಣ­ದಲ್ಲಿ ಅನುಸರಿಸಲಾದ ನಿಯಮಗಳ ಬಗ್ಗೆ ನಾವು ಪರಾಮರ್ಶೆ ನಡೆಸುತ್ತೇವೆ’ ಎಂದು ಹೇಳಿದರು.‘ಇದೊಂದು ಕಾನೂನು ಜಾರಿಗೆ ಸಂಬಂಧಿಸಿದ ವಿಚಾರವಾಗಿದ್ದು, ಅಧಿಕೃತ ಕಾನೂನುಗಳ ಮೂಲಕ ಮತ್ತು ನಿರ್ದಿಷ್ಟ ಮಾನದಂಡಗಳ ಅನುಸಾರ ವಿಶ್ಲೇಷಿಸ­ಬೇಕಾಗಿದೆ. ಭಾರತದೊಂದಿಗೆ ನಾವು ಹೊಂದಿ­ರುವ ಉತ್ತಮ ಬಾಂಧವ್ಯದ ಅಡಿಯಲ್ಲಿ ಈ ವಿಚಾರವನ್ನು ಚರ್ಚಿಸು­ತ್ತೇವೆ’ ಎಂದು ಹಾರ್ಫ್‌ ಹೇಳಿದರು.‘ವಿವಸ್ತ್ರಗೊಳಿಸಿ ಶೋಧನೆ ನಡೆಸಿದ್ದು ನಿಜ’: ಈ ಮಧ್ಯೆ, ಬಂಧನದ ಅವಧಿ­ಯಲ್ಲಿ ನಿಯಮಗಳಿಗೆ ಅನುಗುಣ­ವಾಗಿ ದೇವಯಾನಿ ಅವರನ್ನು ವಿವಸ್ತ್ರ­ಗೊಳಿಸಿ ಶೋಧನೆ ನಡೆಸಲಾಗಿದೆ ಎಂಬು­ದನ್ನು ಅಮೆರಿಕದ ಮಾರ್ಷಲ್‌­ಗಳ ಸೇವಾ ಇಲಾಖೆ ಒಪ್ಪಿಕೊಂಡಿದೆ.ಸೇಡಿನ ಕ್ರಮ– ಮಾಧ್ಯಮಗಳ ಬಣ್ಣನೆ: ದೇವಯಾನಿ ಖೋಬ್ರಾಗಡೆ  ಬಂಧನ­ವನ್ನು ಪ್ರತಿಭಟಿಸಿ ಭಾರತವು ಅಮೆರಿಕ ರಾಜತಾಂತ್ರಿಕರಿಗೆ ನೀಡಿದ್ದ ವಿನಾಯ್ತಿ ಸೌಲಭ್ಯಗಳನ್ನು ರದ್ದು­ಗೊಳಿಸಿ­ರು­ವುದು ಮತ್ತು ನವದೆಹಲಿಯ ರಾಯಭಾರಿ ಕಚೇರಿ ಸುತ್ತಮುತ್ತ ಹಾಕಲಾಗಿದ್ದ ಬ್ಯಾರಿಕೇಡ್‌­ಗಳನ್ನು ತೆರವುಗೊಳಿಸಿದ್ದು ‘ಪ್ರತೀಕಾರ’ ಹಾಗೂ ‘ಸೇಡಿನ’ ಕ್ರಮ ಎಂದು ಅಮೆರಿಕದ ಪ್ರಮುಖ ಮಾಧ್ಯಮ­­­­­ಗಳು ಬಣ್ಣಿಸಿವೆ.‘ಇದೊಂದು ಸೇಡಿನ ಕ್ರಮ’ ಎಂದು ದ ಹಿಲ್‌ ವರದಿ ಮಾಡಿದ್ದರೆ, ದ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ದ ವಾಷಿಂ­ಗ್ಟನ್‌ ಪೋಸ್ಟ್‌ ಪತ್ರಿಕೆಗಳು ‘ಪ್ರತೀಕಾರದ ಕ್ರಮಗಳು’ ಎಂದು ಬರೆದಿವೆ.ವಾಲ್‌ ಸ್ಟ್ರೀಟ್‌ ಜರ್ನಲ್‌ ಸೇರಿದಂತೆ ಇತರ ಪ್ರಮುಖ ಪತ್ರಿಕೆಗಳು, ಆನ್‌ಲೈನ್‌ ಮಾಧ್ಯಮಗಳು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿವೆ.‘ಭಾರತದ ರಾಜತಾಂತ್ರಿಕ ಅಧಿಕಾರಿ­ಯನ್ನು ನ್ಯೂಯಾರ್ಕ್‌ನಲ್ಲಿ ಭದ್ರತಾ ಅಧಿಕಾರಿಗಳು ನಡೆಸಿಕೊಂಡ ರೀತಿಗೆ ಆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತ­ವಾಗಿದೆ. ಪಕ್ಷಭೇದ ಮರೆತು ಎಲ್ಲಾ ರಾಜ­ಕಾರಣಿ­ಗಳು ಅಮೆರಿಕದ ಕ್ರಮ­ವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮೆ­ರಿಕ ರಾಯಭಾರಿ ಕಚೇರಿಯ ರಕ್ಷಣೆಗಾಗಿ ಇರಿಸಲಾಗಿದ್ದ ಬ್ಯಾರಿಕೇಡ್‌­ಗಳನ್ನು ತೆರವು­ಗೊಳಿಸಿ ದೆಹಲಿ ಪೊಲೀಸರು ಪ್ರತೀಕಾರ ತೀರಿಸಿದ್ದಾರೆ’ ಎಂದು ದ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.ದೇವಯಾನಿ ಅವರ ಬಂಧನದಿಂದಾಗಿ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ ಎಂದು ದ ಸ್ಲೇಟ್‌ ಆನ್‌ಲೈನ್‌ ನಿಯತಕಾಲಿಕ ಹೇಳಿದೆ.ಭಾರತೀಯ ಸಮುದಾಯದ ಖಂಡನೆ: ದೇವಯಾನಿ ಅವರ ಬಂಧನವನ್ನು ಅಮೆರಿಕದಲ್ಲಿರುವ ಭಾರತೀಯ ಸಮು­ದಾಯದವರು  ತೀವ್ರವಾಗಿ ಖಂಡಿಸಿದ್ದಾರೆ.ದೇವಯಾನಿ ಬಂಧನ ಹಾಗೂ ಅವರನ್ನು ವಿವಸ್ತ್ರಗೊಳಿಸಿ ಶೋಧನೆ ನಡೆಸಿರುವುದನ್ನು ಸಮರ್ಥಿಸಿ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಮೇರಿ ಹಾರ್ಫ್‌ ಅವರು  ನೀಡಿರುವ ಹೇಳಿಕೆ­ಯನ್ನು ಅಮೆರಿಕ –ಭಾರತ ರಾಜಕೀಯ ಕ್ರಿಯಾ ಸಮಿತಿ  (ಯುಎಸ್‌ಐಎನ್‌­ಪಿಎಸಿ) ಖಂಡಿಸಿದೆ.‘ಹಾರ್ಫ್‌ ಅವರ ಹೇಳಿಕೆ ಮನ­ನೋಯಿಸು­ವಂತಹದ್ದು’ ಎಂದು 30 ಲಕ್ಷ ಸದಸ್ಯರನ್ನು ಹೊಂದಿರುವ ಸಮಿತಿ ಹೇಳಿಕೆಯಲ್ಲಿ ಹೇಳಿದೆ.ದೇವಯಾನಿ ಬಂಧನಕ್ಕೆ ಅನುಸರಿಸ­ಲಾದ ನಿಯಮಗಳನ್ನು ಸಮಿತಿಯು ಪರಿಶೀಲಿಸುತ್ತಿದೆ. ಒಂದು ವೇಳೆ ರಾಜ­ತಾಂತ್ರಿಕ ಶಿಷ್ಟಾಚಾರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆದರೆ ಅದು ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳಿಗೆ ಹಾನಿ ಮಾಡಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ಸುದ್ದಿಗಳು:

‘ತಪಾಸಣೆ ವೇಳೆ ಕುಸಿದಿದ್ದೆ’

* ‘ವಿನಾಯ್ತಿ ಇದೆ’

ಪ್ರತಿಕ್ರಿಯಿಸಿ (+)