ದೇವರಕಾಡು ಒತ್ತುವರಿ ತೆರವಿಗೆ ವಿರೋಧ

7

ದೇವರಕಾಡು ಒತ್ತುವರಿ ತೆರವಿಗೆ ವಿರೋಧ

Published:
Updated:

ಗೋಣಿಕೊಪ್ಪಲು: ವಸತಿ ರಹಿತರು ಒತ್ತುವರಿ ಮಾಡಿಕೊಂಡಿರುವ ದೇವರಕಾಡು ಜಾಗವನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ತೆಗೆದುಕೊಂಡಿರುವ ನಿರ್ಣಯವನ್ನು ರದ್ದುಪಡಿಸಬೇಕು ಎಂಬ ಒಕ್ಕೊರಲ ಕೂಗು ಭಾನುವಾರ ಗೋಣಿಕೊಪ್ಪಲಿನ ಪ್ರಗತಿಪರ ಹೋರಾಟಗಾರರ ಸಭೆಯಲ್ಲಿ ಕೇಳಿ ಬಂತು.ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗೋಣಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ದೇವರಕಾಡು ಪ್ರದೇಶದಲ್ಲಿ ವಸತಿ ರಹಿತ ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರನ್ನು ಬೀದಿಗೆ ತಳ್ಳಿ ನಿರ್ಗತಿಕರನ್ನಾಗಿ ಮಾಡುವ ಜಿಲ್ಲಾ ಪಂಚಾಯಿತಿಯ ನಿರ್ಣಯ ಬಡವರ ವಿರೋಧಿ ಧೋರಣೆಯಾಗಿದೆ. ಇದನ್ನು ಮುಂದಿನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ರದ್ದುಪಡಿಸಬೇಕು. ಇಲ್ಲದಿದ್ದರೆ ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯಿತಿ ಸಭೆಗೆ ಸುಮಾರು 25 ಸಾವಿರ ಜನರು ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದರು.ಸಭೆಯ ನೇತೃತ್ವ ವಹಿಸಿದ್ದ ವಿಧಾನ ಪರಿಸತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಮಾತನಾಡಿ, ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನಿಲ್ಲ. ಕೊಡಗಿನಲ್ಲಿ ನೆಲೆಸಿರುವವರನ್ನು ಕೆಲವರು ವಲಸಿಗರು ಎಂದು ದೂರುತ್ತಿದ್ದಾರೆ. ವಾಸ್ತವಾಗಿ ವಲಸಿಗರು ಎಂಬ ಪದವೇ ತಪ್ಪು ಕಲ್ಪನೆಯಿಂದ ಕೂಡಿದೆ. ಎಲ್ಲ ಜನರು ಎಲ್ಲ ಕಡೆಯಲ್ಲಿಯೂ ಇದ್ದಾರೆ. ಜಾತಿ ಜನಾಂಗವನ್ನು ನೋಡಿಕೊಂಡು ಭೂಮಿ ಅಕ್ರಮ- ಸಕ್ರಮಗೊಳಿಸಲಾಗುತ್ತಿದೆ. ಇಂತಹ ಅನೀತಿಯ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಮಾತನಾಡಿ, ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದರೂ  ಕೆಲವು ಸ್ವಾರ್ಥ ಹಿತಾಸಕ್ತಿಗಳಿಂದ ಅದು ಜಾರಿಗೆ ಬಂದಿಲ್ಲ. ಇದರ ವಿರುದ್ಧ ಸಾಂಘಿಕ ಹೋರಾಟ ಅನಿವಾರ್ಯ ಎಂದು ನುಡಿದರು.

ಹಿರಿಯ ಮುಖಂಡ ಡಾ.ದುರ್ಗಾಪ್ರಸಾದ್, ಭರತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ, ದಲಿತ ಸಂಘರ್ಷ ಸಮಿತಿ ಮುಖಂಡ ಜಯಪ್ಪ ಹಾನಗಲ್, ಡಿ.ಎಸ್. ನಿರ್ವಾಣಪ್ಪ, ವಕೀಲ ಜಯೇಂದ್ರ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎನ್. ಗೋವಿಂದಪ್ಪ, ನಾರಾಣರೈ ಮುಂತಾದವರು ಹಾಜರಿದ್ದರು.ಸಭೆಯ ನಿರ್ಣಯಗಳು

ಸಿ ಅಂಡ್ ಡಿ ಜಾಗವನ್ನು ಕಂದಾಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು ಬಡವರಿಗೆ ಹಂಚಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಅರಣ್ಯವಾಸಿಗಳಿಗೆ ಪಾರಂಪರಿಕ ಅರಣ್ಯ ಹಕ್ಕನ್ನು ನೀಡಬೇಕು. ದೇವರಕಾಡು, ಊರೊಡವೆ ಮುಂತಾದ ಸರ್ಕಾರಿ ಜಾಗವನ್ನು ವಸತಿ ಮತ್ತು ಭೂ ರಹಿತರಿಗೆ ಹಂಚಿ ಕೂಡಲೇ ಹಕ್ಕುಪತ್ರ  ನೀಡಬೇಕು. ಸರ್ಕಾರಿ ಭೂಮಿಯಲ್ಲಿ ಈಗಾಗಲೇ ಕೃಷಿ ಮಾಡುತ್ತಿರುವ ಬಡವರಿಗೆ ಸಾಗವಳಿ ಪತ್ರ ನೀಡಬೇಕು. ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಬಿಡಿಸಿ ನಿವೃತ್ತ ಸೈನಿಕರಿಗೆ ಮತ್ತು ಕಡುಬಡವರಿಗೆ ಹಂಚಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry