ದೇವರಕಾಡು: ರಾಜಕೀಯ ಸಲ್ಲ

7

ದೇವರಕಾಡು: ರಾಜಕೀಯ ಸಲ್ಲ

Published:
Updated:

ಸೋಮವಾರಪೇಟೆ: ಕೊಡಗಿನಲ್ಲಿ ರಾಜಕಾರಣಿಗಳು ಓಟಿನ ರಾಜಕೀಯಕ್ಕಾಗಿ ದೇವರಕಾಡುಗಳನ್ನು ವಲಸಿಗರಿಗೆ ಹಂಚುತ್ತಿದ್ದಾರೆ ಎಂದು ಜಿಲ್ಲಾ ದೇವರಕಾಡು ಸಂರಕ್ಷಣಾ ಸಮಿತಿ ಸಂಚಾಲಕ ಡಾ.ಬಿ.ಸಿ.ನಂಜಪ್ಪ ಆರೋಪಿಸಿದರು.ಸಮೀಪದ ತಲ್ತರೆಶೆಟ್ಟಳ್ಳಿಯ ಸುಗ್ಗಿದೇವರ ಬನ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಶಾಂತಳ್ಳಿಯ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ದೇವರಕಾಡು ಸಂರಕ್ಷಣೆಯ ತಾಲ್ಲೂಕು ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.ದೇವರಕಾಡನ್ನು ನಮ್ಮ ಪೂರ್ವಜರು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಕೊಡಗಿನ ಮೂಲನಿವಾಸಿಗಳು ಇದರ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿದ್ದರೂ ಕೆಲವರು ದೇವರಕಾಡನ್ನು ಒತ್ತುವರಿ ಮಾಡಿರುವ ಕ್ರಮ ಸರಿಯಲ್ಲ ಎಂದರು.

ಜಿಲ್ಲೆಯ ರಾಜಕಾರಣಿ

ಗಳು ತಮ್ಮ ಸ್ವಾರ್ಥಕ್ಕಾಗಿ ದೇವರಕಾಡನ್ನು ವಲಸಿಗರಿಗೆ ಹಂಚುತ್ತಿದ್ದಾರೆ. ದೇವರಕಾಡುಗಳು ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ. ಇದು ದೇವರ ಕೆಲಸಕ್ಕೆ ಮಾತ್ರ ಸೀಮಿತವಾಗಬೇಕು. ಜಿಲ್ಲೆಯ ಕಾವೇರಿ ನದಿ ದಂಡೆ, ಸರಕಾರಿ ಕೆರೆದಂಡೆ, ಊರುಡುವೆ ಹಾಗೂ ದೇವರಕಾಡುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಗ್ರಾಮಸ್ಥನ ಕರ್ತವ್ಯ ಎಂದು ಹೇಳಿದರು.ಸುಗ್ಗಿದೇವರ ಬನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎ.ಕೆ.ಮಾಚಯ್ಯ ಮಾತನಾಡಿ ದೇವರ ಕಾಡುಗಳಲ್ಲಿ ಔಷಧೀಯ ಸಸ್ಯಗಳು ಹೇರಳವಾಗಿದ್ದು ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಈ ನಿಟ್ಟಿನಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ವಾಲ್ನೂರು ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಜಫ್ರಿ ಮುತ್ತಣ್ಣ ಮಾತನಾಡಿ ಗಿರಿಜನರಿಗೆ ಸೌಲಭ್ಯ ಕೊಡುವ ನೆಪದಲ್ಲಿ ರಾಜಕಾರಣಿಗಳು ದೇವರಕಾಡುಗಳನ್ನು ನಾಶ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್‌ನಷ್ಟಿದ್ದ ದೇವರಕಾಡುಗಳು ಈಗ 7 ಸಾವಿರ ಹೆಕ್ಟೇರ್‌ಗೆ ಇಳಿದಿದೆ ಎಂದರು.ಸಮಿತಿಯ ಪದಾಧಿಕಾರಿಗಳಾದ ಕೆ.ಟಿ.ಜೋಯಪ್ಪ, ಎಸ್.ಆರ್.ಉತ್ತಯ್ಯ, ಕೆ.ಎಸ್.ರಾಮಚಂದ್ರ, ಬಗ್ಗನ ತಮ್ಮಯ್ಯ ಮಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ತಲ್ತರ್‌ಶೆಟ್ಟಳ್ಳಿ, ಶಾಂತಳ್ಳಿ, ಅಬ್ಬಿಮಠ ಬಾಚಳ್ಳಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.ಅರಣ್ಯ ಇಲಾಖೆಗೆ ಅ.31ರವರೆಗೆ ಗಡುವು

ತಲ್ತರೆಶೆಟ್ಟಳ್ಳಿ ಸುಗ್ಗಿದೇವರ ಬನದ ಸರ್ವೆ ನಂಬರ್ 2/1 ರ 99 ಎಕರೆ ವಿಸ್ತೀರ್ಣದ ದೇವರಕಾಡಿನಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದು ಇದನ್ನು ಅ.31 ರ ಒಳಗೆ ಅರಣ್ಯ ಇಲಾಖೆಯವರು ತೆರವುಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತದೆ. ಅಲ್ಲದೇ ಮುಂದೆ ಎದುರಾಗುವ ಎಲ್ಲಾ ಕಾನೂನಿನ ತೊಡಕುಗಳಿಗೆ ಅರಣ್ಯ ಇಲಾಖೆಯೇ ನೇರಹೊಣೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry