ದೇವರಲ್ಲಿ ನಂಬಿಕೆ, ವಿಶ್ವಾಸ ಮುಖ್ಯ

7

ದೇವರಲ್ಲಿ ನಂಬಿಕೆ, ವಿಶ್ವಾಸ ಮುಖ್ಯ

Published:
Updated:

ಲಕ್ಷ್ಮೇಶ್ವರ: `ನಾವು ದೇವರಲ್ಲಿ ನಂಬಿಕೆ ಹಾಗೂ ವಿಶ್ವಾಸ ಇಡುವುದು ಮುಖ್ಯ. ನಮ್ಮ  ನಂಬಿಕೆಯೇ ನಿಜವಾದ ದೇವರು~ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶಿವರಾತ್ರಿ ಮಹೋತ್ಸವದ ಅಂಗವಾಗಿ ಮುಕ್ತಿಮಂದಿರ ಧರ್ಮಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ಸೋಮವಾರ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಿ ಅವರು ಮಾತನಾಡಿದರು.`ಇಡೀ ಜಗತ್ತು ಶಿವನಿಂದ ತುಂಬಿಕೊಂಡಿದ್ದು ಇಲ್ಲಿ ದೀಕ್ಷೆ ಪಡೆದ ವಟುಗಳು ನಿತ್ಯವೂ ಶಿವನ ಪೂಜೆಯನ್ನು ತಪ್ಪದೇ ಮಾಡಬೇಕು. ಗುರುವಿನ ಮಾರ್ಗದರ್ಶನದಲ್ಲಿ ನಡೆದು ಒಳ್ಳೆಯ ಪ್ರಜೆಗಳಾಗಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಜೀವನ ಸಾಗಿಸಬೇಕು~ ಎಂದರು.ಮುಕ್ತಿಮಂದಿರ ಧರ್ಮಕ್ಷೇತ್ರದ ಸಂಸ್ಥಾಪಕರಾದ ಲಿಂ.ರಂ.ಜ. ವೀರಗಂಗಾಧರ ಸ್ವಾಮೀಜಿ ಒಳತಿಗಾಗಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಿಶಾಲ ಅರ್ಥದಲ್ಲಿ ಧರ್ಮ ಬೋಧನೆ ಮಾಡಿದ್ದಾರೆ. ಆದರೆ ಇಂದು ಜನತೆಯಲ್ಲಿ ಸಂಕುಚಿತ ಮನೋಭಾವನೆ ಮೂಡಿದ್ದು ಅದನ್ನು ಹೊಡೆದೋಡಿಸಬೇಕಾದರೆ ಲಿಂ.ರಂ.ಜ. ವೀರಗಂಗಾಧರ ಸ್ವಾಮೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ತಿಳಿಸಿದರು.ಅಯ್ಯಾಚಾರ ಪಡೆದ 48 ವಟುಗಳು ಲಿಂ.ರಂ.ಜ ವೀರಗಂಗಾಧರ ಸ್ವಾಮೀಜಿ ಗದ್ದುಗೆಗೆ ತೆರಳಿ ದರ್ಶನ ಪಡೆದುಕೊಂಡರು. ಹಿರಿಯರಾದ ಶಾಂತಯ್ಯನವರು ಶಿಗ್ಲಿಮಠ ಹಾಜರಿದ್ದರು.ಶಿವಾಲಯಕ್ಕೆ ಭಕ್ತರ ದಂಡು

ಮುಂಡರಗಿ:
ಮಹಾಶಿವರಾತ್ರಿಯ ಅಂಗವಾಗಿ ಸಾವಿರಾರು ಭಕ್ತರು ಸೋಮವಾರ ಪಟ್ಟಣದ ವಿವಿಧ ಭಾಗಗಳಲ್ಲಿರುವ ಶಿವಾಲಯಗಳಿಗೆ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಶಿವರಾತ್ರಿಯ ನಿಮಿತ್ತ ಪಟ್ಟಣದ ಎಲ್ಲ ಶಿವಲಿಂಗಗಳು ಬಿಲ್ವಪತ್ರೆ ಹಾಗೂ ವಿವಿಧ ಹೂಮಾಲೆಗಳಿಂದ ಅಲಂಕೃತಗೊಂಡಿದ್ದವು. ಪಟ್ಟಣದ ವಿವಿಧ ಶಿವಾಲಯಗಳಲ್ಲಿ ಬೆಳಿಗ್ಗೆ 10ಗಂಟೆಯಿಂದ ಆರಂಭವಾದ ಸಾರ್ವಜನಿಕರ ಪೂಜೆ ಸಂಜೆ 4ಗಂಟೆಯವೆರೂ ನಿರಂತರವಾಗಿ ನಡೆಯಿತು.ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದ ಆವರಣದಲ್ಲಿರುವ ಈಶ್ವರ ದೇವಸ್ಥಾನ, ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿರುವ ಶಿವಾಲಯ, ಕೊಪ್ಪಳ ಕ್ರಾಸ್ ಬಳಿ ಅನ್ನದಾನೀಶ್ವರ ಪ್ರಸಾದ ನಿಲಯದಲ್ಲಿರುವ ಈಶ್ವರಾಲಯ, ಕನಕರಾಯನ ಗುಡ್ಡದ ಮೇಲಿನ ಕೋಟೆಯಲ್ಲಿರುವ ಮಲ್ಲಿಕಾರ್ಜುನ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.ಅವುಗಳ ಜೊತೆಗೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿರುವ ಈಶ್ವರಲಿಂಗ, ಎಸ್.ಎಸ್.ಪಾಟೀಲ ನಗರದಲ್ಲಿರುವ ಬಯಲು ಶಿವಲಿಂಗ, ಕೋಟೆ ಭಾಗದಲ್ಲಿರುವ ಈಶ್ವರನ ಗುಡಿಗಳನ್ನು ಒಳಗೊಂಡಂತೆ ಅನ್ನದಾನೀಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನ, ಬಸ್ ನಿಲ್ದಾಣದ ಬಳಿ ಇರುವ ಗಣಪತಿ ದೇವಸ್ಥಾನಗಳಲ್ಲಿಯೂ ನೂರಾರು ಜನರು ಪೂಜೆ ಸಲ್ಲಿಸಿದರು.ಬೆಳಗಿನಿಂದ ಉಪವಾಸ ವೃತವನ್ನು ಕೈಗೊಂಡಿದ್ದ ಭಕ್ತರು ನಂತರ ಶಿವಾಲಯಕ್ಕೆ ತೆರಳಿ, ಉತ್ರಾಣಿ ಕಡ್ಡಿಯಿಂದ ತಯಾರಿಸಿದ ಧೂಪದಾರತಿ ಬೆಳಗಿ, ಫಲ ಪುಷ್ಪಗಳನ್ನು ನೈವೇದ್ಯ ಹಿಡಿದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿ ಜಾಗರಣೆ ನಿಮಿತ್ತ ಕೆಲವು ದೇವಾಲಯಗಳಲ್ಲಿ ರಾತ್ರಿ ಕೀರ್ತನೆ, ಉಪನ್ಯಾಸ, ಭಜನೆ ಮೊದಲಾದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry