ದೇವರಾಯನ ದುರ್ಗದಲ್ಲಿ ಹಿತಾನುಭವ

7
ಸುತ್ತಾಣ

ದೇವರಾಯನ ದುರ್ಗದಲ್ಲಿ ಹಿತಾನುಭವ

Published:
Updated:

‘ದೇವರಾಯನ ದುರ್ಗಕ್ಕೆ ಬೆಳಿಗ್ಗೆ 9ಕ್ಕೆ  ಬಸ್ಸಿದೆ’ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವಿಚಾರಣಾ ಕೌಂಟರಿನ ಸಿಬ್ಬಂದಿ ಹೇಳಿದ್ದ ಮಾತನ್ನು ನೆನಪಿಟ್ಟು ಕೊಂಡು ಬೆಳಕು ಹರಿಯುವ ಮುನ್ನವೇ ಎದ್ದಿದ್ದೆ.ಚಾರಣಕ್ಕೆ ದಂಡು ದಂಡಾಗಿ ಹೋಗುವ ಪರಿಪಾಠವಿದ್ದರೂ ನಾವು ಹೊರಟ್ಟಿದ್ದು ಇಬ್ಬರು ಮಾತ್ರ. ಇಬ್ಬರಿಗೂ ಮೊದಲ ಹಾದಿ. ನಗರದಿಂದ ಕೆಲವೇ ತಾಸು ಪಯಣದ ಅದರಲ್ಲೂ ಚಾರಣ ನಡೆಸುವಂತಹ ಪ್ರದೇಶಕ್ಕೆ ಪ್ರವಾಸ ಹೋಗಬೇಕು ಎಂದುಕೊಂಡಿದ್ದ ನಮಗೆ ಕಂಡಿದ್ದು ದೇವರಾಯನ ದುರ್ಗ.ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ದುರ್ಗ ಸಹ  ಒಂದು ಎನ್ನುವುದಷ್ಟೇ ತಿಳಿದಿತ್ತು. ಡಾಬಸ್‌ ಪೇಟೆಯನ್ನು ದಾಟುತ್ತಲೇ ಹೆಬ್ಬಂಡೆಗಳ ಸಾಲು ಸಾಲು ಬೆಟ್ಟಗಳು, ಒಂದಕ್ಕಿಂತ ಒಂದು ಮುಗಿಲಿನತ್ತ ನೋಟ ಬೀರಿದ್ದವು. ಅಲ್ಲಲ್ಲಿ ಬಯಲು. ದೂರದ ಕಾನನ ಕಾಣುತ್ತಲೇ ಅಲ್ಲಿಗೆ ಸಾಗುತ್ತಿದ್ದೇವೆ ಎನ್ನುವುದನ್ನು ನೆನೆಯುತ್ತ ಹಾದಿ ಸವೆಸಿದ್ದೆವು. ಬಯಲು ಸೀಮೆಯಲ್ಲಿ ಬಂಡೆಗಳಿದ್ದರೆ ಆ ಸ್ಥಳದಲ್ಲಿ ಬಿಸಿಲಿನ ಝಳ ತುಸು ಪ್ರಖರವಾಗಿಯೇ ಇರುತ್ತದೆಂಬ ಅಭಿಪ್ರಾಯವಿದೆ. ಆದರೆ ಈ ಸ್ಥಳ ಅದಕ್ಕೆ ಅಪವಾದ.ಡಾಬಸ್ ಪೇಟೆ ದಾಟಿ ಸುಮಾರು 15 ಕಿಲೋಮೀಟರ್‌ ಸಾಗಿದರೆ ಸಿಗುವ ಉರ್ಡಿಗೆರೆಯೇ ದೇವರಾಯನ ದುರ್ಗಕ್ಕೆ ಹತ್ತಿರದ ಮಾರ್ಗ.

ಉರ್ಡಿಗೆರೆಯಿಂದ ಆಟೊ ಹಿಡಿದು ಹೊರಟಿದ್ದು ಕಾಡಿನ ಹಾದಿಯಲ್ಲಿ. ಕೆಲವೇ ಕಿಲೋಮೀಟರ್‌ ಹಿಂದೆ ಕಂಡಿದ್ದ ಹೆಬ್ಬಂಡೆಗಳ ಸಾಲು ಕಣ್ಮರೆಯಾಗಿ ಸಾಲು ಸಾಲು ಮರಗಳು, ತಣ್ಣನೆಯ ಹವೆ.ಕೆಲವೆಡೆ ಕೊರಕಲು ಹಾದಿ. ಆಟೊ ಆ ಕಡಿದಾದ ಹಾದಿಯಲ್ಲಿ ಸದ್ದು ಮಾಡುತ್ತ ಬೆಟ್ಟದ ತಪ್ಪಲು ತಲುಪಲು ಭಾರಿ ಪ್ರಯಾಸ ಪಡುತ್ತಿತ್ತು.  ಕಡು ಹಸಿರಿನ ಬೃಹತ್‌ ಮರಗಳು ಆಗಸವನ್ನು ಚುಂಬಿಸಲು ಕತ್ತನ್ನು ಮೇಲೆತ್ತಿದೆ. ಕಾಡಿನ ಸೊಬಗನ್ನು ಇಮ್ಮಡಿಸುವಂಥ ಕುರುಚಲು.ಸುಮಾರು ಮೂರು ಸಾವಿರ ಅಡಿಗಿಂತಲೂ ಎತ್ತರದ ದೇವರಾಯನ ದುರ್ಗ ಗಿರಿಧಾಮ  ಚಾರಣಿಗರಿಗೆ ಪ್ರಕೃತಿ ಸಿರಿಯನ್ನು ತುಂಬಿಕೊಳ್ಳುವ ಪ್ರಶಸ್ತ ಸ್ಥಳವಾದರೆ, ಆಸ್ತಿಕರಿಗೆ ಶ್ರದ್ಧಾ ಸ್ಥಳ.  

  

ವಿಜಯನಗರದ ಅರಸರ ಕಾಲದಲ್ಲಿ ‘ಕರಿಗಿರಿ’ ಎಂಬ ಹೆಸರು ಪಡೆದಿದ್ದ ಇದು, ಕಾಲಾನಂತರ ಜಡಕನ ಆಳ್ವಿಕೆಯಿಂದ ಜಡಕದುರ್ಗ ಎಂದಾಯಿತು. ಕ್ರಿ.ಶ. ೧೬೯೬ರ ಚಿಕ್ಕದೇವರಾಯ ಒಡೆಯರು ಗೆದ್ದುದರಿಂದ ಇದು ದೇವರಾಯನ ದುರ್ಗವಾಯಿತು. ಬೆಟ್ಟದ ಮೇಲೆ ಪುರಾತನ ಕಾಲದ ಭೋಗಾ ನರಸಿಂಹ ಮತ್ತು ಕೆಳಭಾಗದಲ್ಲಿ  ಯೋಗಾ ನರಸಿಂಹ ದೇವಾಲಯಗಳಿವೆ. ಯೋಗಾ ನರಸಿಂಹ ಮತ್ತು ಭೋಗಾ ನರಸಿಂಹ ಸ್ವಾಮಿ ದೇವಾಲಯಗಳು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿವೆ.ಕಡಿದಾದ ಬೆಟ್ಟದ ಜಾಡಿನಲ್ಲಿ ಸಾಗಿದರೆ ಭೋಗಾ ನರಸಿಂಹನ ದರ್ಶನ. ವಾಹನಗಳೂ ದೇವಾಲಯದ ಹತ್ತಿರಕ್ಕೆ ಸಾಗುವ ದಾರಿ ಇದೆ.

ಬೆಟ್ಟದ ವಾತಾವರಣವನ್ನು ಮತ್ತಷ್ಟು ತಂಪಾಗಿ ಇಡಲು ಇರುವ ರಾಮತೀರ್ಥ ಕಲ್ಯಾಣಿ ಜೀವಜಲವನ್ನು ಸದಾ ತನ್ನ ಒಡಲಲ್ಲಿ ಇಟ್ಟುಕೊಂಡಿದೆ.ಪಕ್ಕದಲ್ಲಿರುವ ಗುಹೆಯಲ್ಲಿ ರಾಮ, ಸೀತೆ, ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯವನ್ನು ದಾಟಿ ಬಂಡೆಗಳ ಮೇಲೆ ಹತ್ತಿದರೆ ಸುತ್ತಲಿನ ಪ್ರಾಕೃತಿಕ ಸಿರಿಯನ್ನು ಕಣ್ತಂಬಿಕೊಳ್ಳಲು ಇರುವ ವೀಕ್ಷಣಾ ಗೋಪುರ. ಕಣ್ಣೋಟ ಹಾಯಿಸಿದಷ್ಟೂ ಕಾಣುವುದು ಬೆಟ್ಟ, ಕೆರೆ, ಹಳ್ಳಿ ಕಾನನದ ದೃಶ್ಯವೇ.

ದೇಗುಲ ದರ್ಶನದ ನಂತರದ ಸಾಗಿದ್ದು ನಾಮದ ಚಿಲುಮೆ, ಜಿಂಕೆವನ ಮತ್ತು ಔಷಧವನದತ್ತ. ದೇವಾಲಯದಿಂದ ತುಮಕೂರು ಹಾದಿಯಲ್ಲಿ ಈ ಸ್ಥಳಗಳಿವೆ.ನಾಮದ ಚಿಲುಮೆ

ವಿಸ್ತಾರವಾದ ಬಂಡೆಯಲ್ಲಿ ಒಳಕಲ್ಲಿನ ಆಕಾರದ ಚಿಲುಮೆಯಿದ್ದು, ಬೇಸಿಗೆಯಲ್ಲೂ ನೀರು ಇರುತ್ತದೆ. ವನವಾಸದ ವೇಳೆ

ರಾಮನಿಗೆ ನಾಮವಿಟ್ಟುಕೊಳ್ಳಲು ನೀರು ದೊರೆಯದ್ದಿದ್ದಾಗ ಬಂಡೆಗೆ ಬಾಣ ಹೊಡೆದಾಗ ಚಿಮ್ಮಿದ ನೀರೇ ನಾಮದ ಚಿಲುಮೆ ಎನ್ನುವ ನಂಬಿಕೆ ಇದೆ.

ಇದರ ಬಳಿಯೇ ಜಿಂಕೆವನವಿದ್ದು ಹಿಂಡು ಹಿಂಡಾಗಿರುವ ಜಿಂಕೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಆದರೆ ಕೋತಿಗಳ ಕಾಟ ಹೆಚ್ಚೇ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಷ್ಟೆ. ಔಷಧ ವನ

ಜಿಂಕೆವನದ ಎದುರಿಗೆ ಸರ್ಕಾರದ ವಿಶಿಷ್ಟವಾದ ಔಷಧೀಯ ಮೂಲಿಕೆಯ ವನ ಇದು. ದುರ್ಗಕ್ಕೆ ತುಮಕೂರಿನಿಂದ 16, ಬೆಂಗಳೂರಿನಿಂದ 75 ಕಿ.ಮೀ. ದೂರ. ತುಮಕೂರು, ಕೊರಟಗೆರೆಯಿಂದ ನಿತ್ಯ ಬಸ್‌ಗಳ ಸೌಲಭ್ಯವಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣ ಬೆಳೆಸಿದರೆ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ದೇವರಾಯನ  ಶಿಂಷಾ ಮತ್ತು ಜಯಮಂಗಲಿ ನದಿಗಳ ಉಗಮ ಸ್ಥಾನವೂ ಹೌದು.ನಗರದ ಸುತ್ತ ಪಿಕ್‌ನಿಕ್‌ ಹೋಗಬಲ್ಲ ತಾಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ ಹೋಗಿ, ಸಂತಸದ ಕ್ಷಣಗಳನ್ನು ಮೊಗೆದುಕೊಂಡು ಬರಬಹುದಾದ ಕೆಲವು ತಾಣಗಳು ಅಪ್‌ಡೇಟ್‌ ಆಗಿವೆ. ತಲೆಎತ್ತಿರುವ ಹೊಸ ಪಿಕ್‌ನಿಕ್‌ ಸ್ಪಾಟ್‌ಗಳೂ ಉಂಟು. ವಾರಾಂತ್ಯದ ಓದಿಗೆ ಪ್ರತಿ ಶನಿವಾರದ ಸಂಚಿಕೆಯಲ್ಲಿ ಒಂದು ‘ಸುತ್ತಾಣ’ ಪ್ರಕಟವಾಗಲಿದೆ. ಓದುಗರೂ ಉತ್ತಮ ಗುಣಮಟ್ಟದ ಚಿತ್ರಗಳ ಸಹಿತ 500 ಪದಗಳಿಗೆ ಮೀರದಂತೆ ತಾಣಗಳ ಪರಿಚಯ ಮಾಡಿಕೊಡಬಹುದು. ಬರಹ, ನುಡಿ ಅಥವಾ ಯೂನಿಕೋಡ್‌ನಲ್ಲಿ ಬರೆದು metropv@prajavani.co.in

ಇ–ಮೇಲ್‌ಗೆ ಕಳುಹಿಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry