ಶನಿವಾರ, ಮೇ 15, 2021
25 °C

ದೇವರು ಕೊಟ್ಟ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮ್ಮಿಷ್ಟದ ನೀಲಿ ಪ್ಯಾಂಟು, ನೀಲಿ ಶೂ ಧರಿಸಿದ್ದ ನಟಿಯ ಮುಖದ ತುಂಬೆಲ್ಲಾ ಆಕರ್ಷಕ ನಗು ಲಾಸ್ಯವಾಡುತ್ತಿತ್ತು. ಆಕೆ ಧರಿಸಿದ್ದ ಮೇಲಂಗಿಯಲ್ಲೂ ನೀಲಿ ಹೂಗಳ ಚಿತ್ರಗಳು ಹೇರಳವಾಗಿದ್ದವು. ತೆರೆಯ ಮೇಲೆ ದೊಡ್ಡ ಹೆಂಗಸಿನಂತೆ ಕಾಣುವ ಈ ನಟಿಯನ್ನು ಬೆಳ್ಳಿ ಪರದೆಯಾಚೆ ನೋಡಿದಾಗ ಬೇರೆ ತರಹವೇ ಗೋಚರಿಸುತ್ತಾರೆ.ವಿಶಾಲ ಭುಜದ ಒಡತಿಯ ಇಡೀ ದೇಹದಲ್ಲಿ ಚಿಮ್ಮುವ ಕಾಂತಿ ಆಕೆಯ ಯೌವ್ವನಕ್ಕೊಂದು ಹೊಸ ಕಳೆ ತಂದುಕೊಟ್ಟಿದೆ. ದೊಡ್ಡ ದೇಹದ ಈ ನಟಿಯ ಸ್ವರ ಮಾತ್ರ ಕೋಗಿಲೆಯ ಕಂಠದಂತೆ ಇಂಪು. ವೀಣೆಯ ತಂತಿಯನ್ನು ಮೀಟಿದಾಗ ಹೊರಡುವ ಸ್ವರದಂತೆ  ಕೇಳಲು ತುಂಬ ಹಿತ. ನೀಲಿ ಬಣ್ಣದ ಬಗ್ಗೆ ವಿಪರೀತ ಪ್ರೀತಿ ಬೆಳೆಸಿಕೊಂಡಿರುವ ನಟಿ ಸೋನಾಕ್ಷಿ ಸಿನ್ಹಾ ಈಚೆಗೆ ನಗರಕ್ಕೆ ಬಂದಿದ್ದರು. ಜತೆಗೆ ನಟ ರಣ್‌ವೀರ್ ಸಿಂಗ್ ಇದ್ದರು.ಬಾಲಿವುಡ್‌ನ ಪ್ರತಿಷ್ಠಿತ ನೂರು ಕೋಟಿ ಕ್ಲಬ್‌ನ ಸದಸ್ಯೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ, ನಟ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಿಗೆ ಅದೃಷ್ಟ ಖುಲಾಯಿಸಿ ಕೊಟ್ಟವರು. ಸೋನಾಕ್ಷಿ ಅಭಿನಯಿಸಿರುವ ಚಿತ್ರಗಳಲ್ಲಿ ಅನೇಕವು ನೂರು ಕೋಟಿ ರೂಪಾಯಿಗಿಂತ ಹೆಚ್ಚು ಬಿಸಿನೆಸ್ ಮಾಡಿವೆ. ಹಾಗಾಗಿ, ಸೋನಾಕ್ಷಿ ಈಗ ನಟರಿಗಷ್ಟೇ ಅಲ್ಲದೆ ನಿರ್ದೇಶಕರಿಗೂ ಅದೃಷ್ಟ ದೇವತೆ.ಇದುವರೆಗೂ ತಮ್ಮ ವಯಸ್ಸಿಗಿಂತ ಒಂದೂವರೆಪಟ್ಟು ಹಿರಿಯರಾದ ನಟರ ಜತೆ ನಟಿಸುತ್ತಿದ್ದ ನಟಿ ಈಗ ತನ್ನದೇ ವಯಸ್ಸಿನ ಹುಡುಗ ರಣ್‌ವೀರ್ ಸಿಂಗ್ ಜತೆ `ಲೂಟೇರಾ' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವೂ ತಮ್ಮ ಕೆರಿಯರ್ ಗ್ರಾಫ್ ಹೆಚ್ಚಿಸುತ್ತದೆ ಎಂಬ ನಂಬಿಕೆ ಅವರದ್ದು.ಅಂದಹಾಗೆ, ನಗರದ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ತನ್ನ ಮೂರನೇ ಮಲ್ಟಿಪ್ಲೆಕ್ಸ್ ಶಾಖೆ ತೆರೆದಿರುವ ಪಿವಿಆರ್ ಚಿತ್ರಮಂದಿರ ಉದ್ಘಾಟಿಸಲು ಸೋನಾಕ್ಷಿ ಸಿನ್ಹಾ, ರಣ್‌ವೀರ್ ಸಿಂಗ್ ನಗರಕ್ಕೆ ಬಂದಿದ್ದರು. ಈ ವೇಳೆ ಅವರು ತಮ್ಮ ಮುಂದಿನ ಚಿತ್ರ `ಲೂಟೇರಾ' ಚಿತ್ರದ ಬಗ್ಗೆಯೂ ಮಾತನಾಡಿದರು. ಮನಸ್ಸಿನ ಭಾವನೆಗಳನ್ನೆಲ್ಲಾ ಮುಖದ ಮೇಲೆ ಪರಿಣಾಮಕಾರಿಯಾಗಿ ಅಭಿವ್ಯಕ್ತಿಪಡಿಸುವ ಸೋನಾಕ್ಷಿ ನಿರ್ದೇಶಕರಿಗೆ ಅಚ್ಚುಮೆಚ್ಚಿನ ನಟಿ. ಕತೆಯ ಆಂತರ್ಯ ಅರಿತು ನಟಿಸುವುದರಿಂದ ಆಕೆಯ ನಟನೆ ತೆರೆಯ ಮೇಲೆ ಸಹಜವೆಂಬಂತೆ ಕಾಣಿಸುತ್ತದೆ. ತಮಗೆ ದೇವರೇ ಇಂತಹ ಕಳೆಯನ್ನು ಕರುಣಿಸಿದ್ದಾನೆ ಎಂದು ನಂಬಿರುವ ಸೋನಾಕ್ಷಿ ಈ ಬಗ್ಗೆ ಹೇಳುವುದು ಹೀಗೆ: `ದೇಸಿ ಹುಡುಗಿಯ ಲುಕ್ ನನಗೆ ದೈವದತ್ತವಾಗಿ ಬಂದ ಬಳುವಳಿ.ಇಂತಹ ದೇಸಿಕಳೆ ನನಗೆ ಇರುವುದರಿಂದಲೋ ಏನೋ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಯಾರೇ ನಿರ್ದೇಶಕ ಒಬ್ಬ ದೇಸಿ ಹುಡುಗಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರಕಥೆಯನ್ನು ಹೆಣೆಯುವಾಗ ಸಹಜವಾಗಿಯೇ ನಾನು ಅವರ ಕಣ್ಣಮುಂದೆ ಬರಬಹುದು. ನಾನು ಈವರೆಗೆ ನಟಿಸಿದ ಎಲ್ಲ ಚಿತ್ರಗಳಲ್ಲೂ ಈ ಛಾಯೆ ಇರುವುದನ್ನು ಗಮನಿಸಬಹುದು. ಹಾಗಂತ ನನಗೆ  ಪಾತ್ರಗಳಲ್ಲಿ ಎಂದಿಗೂ ಏಕತಾನತೆ ಕಾಡಿಲ್ಲ. ಪ್ರತಿಯೊಂದು ಚಿತ್ರದ ಪಾತ್ರವೂ ಭಿನ್ನವಾದುದು'.ಬಿಡುವಿನ ವೇಳೆಯಲ್ಲಿ ಪೇಂಟಿಂಗ್ ಮಾಡುವ ಸೋನಾಕ್ಷಿ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಬೆಂಗಳೂರಿಗೆ ಬಂದು ಹೋಗುತ್ತಾರಂತೆ. `ಬೆಂಗಳೂರು ನಗರಿಗೆ ಬರುವುದೆಂದರೆ ನನಗೆ ತುಂಬ ಖುಷಿ. ಇದು ನನ್ನಿಷ್ಟದ ನಗರಿಯೂ ಹೌದು. ನನಗೆ ಇಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಇಲ್ಲಿಗೆ ಬಂದಾಗ ಅವರನ್ನೆಲ್ಲಾ ಭೇಟಿಯಾಗುತ್ತೇನೆ. ಅವರೊಟ್ಟಿಗೆ ಖುಷಿಯಿಂದ ಕಾಲಕಳೆಯುತ್ತೇನೆ' ಎಂದು ಮಾತು ಸೇರಿಸುತ್ತಾರೆ ಅವರು.ನಟ ರಣ್‌ವೀರ್ ಸಿಂಗ್ ಅವರಿಗೆ `ಲೂಟೆರಾ' ಚಿತ್ರದ ಬಗ್ಗೆ ತುಂಬ ನಿರೀಕ್ಷೆ ಇದೆಯಂತೆ. “ಈ ಚಿತ್ರದಲ್ಲಿನ ನನ್ನ ಪಾತ್ರಕ್ಕೆ ವಿವಿಧ ಛಾಯೆ ಇದೆ. ನಾನು ಈವರೆಗೆ ಅಭಿನಯಿಸಿದ ಚಿತ್ರಗಳಲ್ಲಿ ಇದು ಭಿನ್ನವಾದುದು. ಜುಲೈ 6 ನಾನು ಹುಟ್ಟಿದ ದಿನ. ಅದಕ್ಕೆ ಹಿಂದಿನ ದಿನ ಅಂದರೆ ಜುಲೈ 5ಕ್ಕೆ ಚಿತ್ರ ತೆರೆಗೆ ಬರಲಿದೆ. `ಲೂಟೆರಾ' ಚಿತ್ರ ನನ್ನ ಹುಟ್ಟುಹಬ್ಬದ ಉಡುಗೊರೆಯಾಗಲಿದೆ” ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.