ಸೋಮವಾರ, ಜೂನ್ 14, 2021
28 °C

ದೇವರೇ, ನಾನ್ಯಾಕೆ ಇಷ್ಟು ಸಮಯ ತೆಗೆದುಕೊಂಡೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವರೇ, ನಾನ್ಯಾಕೆ ಇಷ್ಟು ಸಮಯ ತೆಗೆದುಕೊಂಡೆ?

ಮುಂಬೈ (ಪಿಟಿಐ): `ನಾನು ದೇವರ ಮೇಲೆ ಹೆಚ್ಚು ನಂಬಿಕೆ ಇಟ್ಟವನು. ನನ್ನ ತಂದೆ-ತಾಯಿ ಕೂಡ ದೇವರನ್ನು ಹೆಚ್ಚು ನಂಬುತ್ತಾರೆ. ನಾನು ಚಿಕ್ಕವನಿದ್ದಾಗ ಶಿವಾಜಿ ಪಾರ್ಕ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದೆ. ವಿರಾಮದ ವೇಳೆ ಸನಿಹ ಇದ್ದ ಗಣಪತಿ ದೇವಸ್ತಾನದ ಬಳಿ ತೆರಳಿ ಅಲ್ಲಿನ ನಲ್ಲಿಯ ನೀರು ಕುಡಿಯುತ್ತಿದ್ದೆ. ಆ ನೀರು ಕುಡಿದ ಮೇಲೆ ಏನೋ ಒಂಥರಾ ಶಕ್ತಿ ಬಂದಂತಾಗುತಿತ್ತು~-ಶತಕಗಳ ಶತಕದ ಸಾಧನೆ ಮಾಡಿರುವ ಸಚಿನ್ ತೆಂಡೂಲ್ಕರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.`ಹಾಗಾಗಿಯೇ ನಾನು ನೂರನೇ ಶತಕ ಗಳಿಸಿದ ತಕ್ಷಣ ಮೊದಲು ಬ್ಯಾಟ್ ನೋಡಿದೆ. ಆಮೇಲೆ ದೇವರತ್ತ ನೋಡಿದೆ. ಈ ಶತಕಕ್ಕಾಗಿ ನಾನ್ಯಾಕೆ ಇಷ್ಟು ಸಮಯ ತೆಗೆದುಕೊಂಡೆ? ಬದ್ಧತೆಯಲ್ಲಿ ನಾನು ಎಲ್ಲಿ ಎಡವಿದೆ? ಎಂದು ದೇವರಲ್ಲಿ ಕೇಳಿದೆ. ಆ ಬಳಿಕವಷ್ಟೇ ನಾನು ಡ್ರೆಸ್ಸಿಂಗ್ ಕೊಠಡಿಯತ್ತ ಬ್ಯಾಟ್ ತೋರಿಸಿದೆ~ ಎಂಬುದನ್ನು ಸಚಿನ್ ಹೇಳಿದರು.`ಈ ಕ್ರೀಡೆಯಲ್ಲಿ ನೀನು ಕೆಲವೊಮ್ಮೆ ತುಂಬಾ ಕಷ್ಟಪಡಬೇಕಾಗುತ್ತದೆ ಎಂದು ನಾನು ಚಿಕ್ಕವನಿದ್ದಾಗ ಕೋಚ್ ರಮಾಕಾಂತ್ ಅಚ್ರೇಕರ್ ಹೇಳಿದ್ದರು. ಆದರೆ ಇಂತಹ ಕಷ್ಟಗಳು ಎಲ್ಲರಿಗೂ ಬರುತ್ತವೆ ಎಂದು ಕಿವಿಮಾತು ಹೇಳಿದ್ದರು. ನಾನು ಸಣ್ಣ ಹುಡುಗನಿದ್ದಾಗಿನಿಂದ ಕ್ರಿಕೆಟ್ ಆಟಕ್ಕೆ ಗೌರವ ನೀಡುತ್ತಾ ಬಂದಿದ್ದೇನೆ~ ಎಂದು ಬ್ಯಾಟಿಂಗ್ ಚಾಂಪಿಯನ್ ನುಡಿದರು.

 ಕನಸುಗಳ ಬೆನ್ನಟ್ಟು...
`ನಾನು ದೊಡ್ಡ ಕ್ರಿಕೆಟಿಗನಾಗಲು ಏನು ಮಾಡಬೇಕು~ ಎಂದು ಪತ್ರಿಕಾಗೋಷ್ಠಿ ವೇಳೆ ಚಿಕ್ಕ ಬಾಲಕನೊಬ್ಬ ಪ್ರಶ್ನೆ ಕೇಳಿದ. ಅದಕ್ಕೆ ಪ್ರತಿಕ್ರಿಯಿಸಿದ ತೆಂಡೂಲ್ಕರ್, `ನಿನ್ನ ಕನಸನ್ನು ಬೆನ್ನಟ್ಟಲು ಪ್ರಯತ್ನಿಸು. ಆ ಹಾದಿಯಲ್ಲಿ ಕಠಿಣ ಪ್ರಯತ್ನ ಹಾಕು. ಅದು ಶಿಸ್ತುಬದ್ಧವಾಗಿರಲಿ. ಆದರೆ ಯಾವತ್ತೂ ಅಡ್ಡ ದಾರಿ ಹುಡುಕಬೇಡ. ಪ್ರೀತಿ ಹಾಗೂ ಸಂತೋಷದಿಂದ ಆಟವಾಡು~ ಎಂದರು.
ತಲೆ ಕೂದಲ ವಿನ್ಯಾಸದಲ್ಲಿ ಬದಲಾವಣೆಯಾಗಲು ಕಾರಣ...?
`ಬದಲಾವಣೆ ಬೇಕೆನ್ನಿಸಿತು. ಅದಕ್ಕೆ ಈ ರೀತಿ ಮಾಡಿಕೊಂಡಿದ್ದೇನೆ. ಇದಕ್ಕೆ ಬೇರೆ ಯಾವುದೇ ಕಾರಣ ಹುಡುಕಲು ಹೋಗಬೇಡಿ~ ಎಂದು ಸಚಿನ್ ಹೇಳಿದರು. ಅವರ ತಲೆ ಕೂದಲಿನ ಬದಲಾದ ವಿನ್ಯಾಸದ ಬಗ್ಗೆ ಹಲವು ಮಾತುಗಳು ಹರಿದಾಡುತ್ತಿದ್ದವು. ಶತಕಗಳ ಶತಕ ಗಳಿಸಲು ತುಂಬಾ ದಿನ ತೆಗೆದುಕೊಂಡ ಕಾರಣ ಆ ಸಮಸ್ಯೆಯಿಂದ ಹೊರಬರಲು ಈ ರೀತಿ ಮಾಡಿಕೊಂಡಿರಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ವಿನ್ಯಾಸ ಬದಲಾಯಿಸಿಕೊಂಡ ಮೇಲೆ ನೂರನೇ ಶತಕ ಗಳಿಸಿದ್ದು ಆ ಮಾತಿಗೆ ಬಲ ನೀಡಿತ್ತು.

`ನಾನ್ಯಾವತ್ತೂ ಶತಕದ ಬಗ್ಗೆ ತಲೆಕೆಡಿಸಿಕೊಂಡ ವ್ಯಕ್ತಿ ಅಲ್ಲ. ತಂಡಕ್ಕಾಗಿ ರನ್ ಗಳಿಸುವುದು ನನ್ನ ಕೆಲಸ. ಆದರೆ ಈ ಶತಕಗಳ ಶತಕದ ಬಗ್ಗೆ ತುಂಬಾ ಗಮನ ಹರಿಸಲಾಯಿತು. ಎಲ್ಲಿ ಹೋದರೂ ಅದರದ್ದೇ ಮಾತು. ಆದಷ್ಟು ನನ್ನ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದೆ. ಆದರೂ ಮನಸ್ಸನ್ನು ಹತೋಟಿಯಲ್ಲಿ ಹಿಡಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನನಗೆ ಗೊತ್ತಿಲ್ಲದೇ ಆ ಬಗ್ಗೆ ಯೋಚಿಸಬೇಕಾದ ಒತ್ತಡಕ್ಕೆ ಸಿಲುಕಿದ್ದ ಸನ್ನಿವೇಶವೂ ಇದೆ. ಹಾಗಾಗಿ ನನಗೆ ಅದು ಕಷ್ಟವಾಗುತ್ತಾ ಹೋಯಿತು~ ಎಂದೂ ಅವರು ವಿವರಿಸಿದರು.ಮೀರ್‌ಪುರದಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿತೆಂಡೂಲ್ಕರ್ ಶತಕಗಳ ಶತಕದ ಸಾಧನೆ ಮಾಡಿದ್ದರು. ಅದಕ್ಕಾಗಿ ಅವರು ಒಂದು ವರ್ಷ ಕಾಯಬೇಕಾಗಿತ್ತು. ಇದಕ್ಕೂ ಮುನ್ನ ಅವರು 2011ರ ಮಾರ್ಚ್ 12ರಂದು ನಾಗಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ್ದರು.100ನೇ ಶತಕದ ಬಗ್ಗೆ ಮಾತ್ರವಲ್ಲದೇ, ಸಚಿನ್ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಅದರಲ್ಲಿ ರೊಟೇಷನ್ ನಿಯಮ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇಳಿ ಬಂದ ತಂಡದೊಳಗಿನ ಒಡಕು, ವಿರಾಟ್ ಕೊಹ್ಲಿ ಪ್ರತಿಭೆ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.`ಡ್ರೆಸ್ಸಿಂಗ್ ಕೊಠಡಿಯಲ್ಲಿ ನಡೆಯುವ ಚರ್ಚೆ ಹೊರಬರಬಾರದು. ತಂಡದಲ್ಲಿ 10 ಮಂದಿ ಇದ್ದರೆ 10 ಅಭಿಪ್ರಾಯಗಳಿರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿ ಯೋಚಿಸುತ್ತಾನೆ. ಹಾಗಾಗಿ ತಂಡದ ಚರ್ಚೆ ನಾಲ್ಕು ಗೋಡೆಯೊಳಗೆ ಇರಬೇಕು~ ಎಂದರು.

ರೋಟೇಷನ್ ನಿಯಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಪತ್ರಿಕಾಗೋಷ್ಠಿಯಲ್ಲಿ ದೋನಿ ಹಾಗೂ ಸೆಹ್ವಾಗ್ ಏನು ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಆದರೆ ಇದನ್ನು ನಿರ್ಧರಿಸುತ್ತಿದ್ದದ್ದು ಹಿರಿಯ ಆಟಗಾರರು ಹಾಗೂ ತಂಡದ ನಾಯಕ ದೋನಿ. ಆ ಪ್ರವಾಸ ಸುದೀರ್ಘವಾಗಿದ್ದರಿಂದ ಅದು ಅಗತ್ಯವಾಗಿತ್ತು. ಗಾಯದಂತಹ ಸಮಸ್ಯೆ ತಪ್ಪಿಸಿಕೊಳ್ಳಲು ನೆರವಾಗುವಂಥದ್ದು. ಆದರೆ ಯಾರನ್ನೂ ಸುಮ್ಮನೇ ಕೈಬಿಟ್ಟಿಲ್ಲ~ ಎಂದು ಸ್ಪಷ್ಟಪಡಿಸಿದರು.ಸದ್ಯದ ಕ್ರಿಕೆಟ್ ಹಾಗೂ ಕ್ರೀಡೆಗಳ ಬಗ್ಗೆ ಮಾತನಾಡಿದ ಸಚಿನ್, `ನಾನು ಅದೃಷ್ಟವಂತ. ಏಕೆಂದರೆ ನನಗೆ ಅತ್ಯುತ್ತಮ ಕೋಚ್ ಸಿಕ್ಕಿದ್ದರು. ಹಾಗಾಗಿ ಈ ಹಂತ ತಲುಪಲು ಸಾಧ್ಯವಾಯಿತು. ಈಗ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಕ್ರೀಡೆಗಳಲ್ಲಿ ಕೂಡ ತುಂಬಾ ಬದಲಾವಣೆಗಳಾಗುತ್ತಿವೆ. ಆದರೆ ಅಲ್ಲಿ ಯಾವ ರೀತಿ ಸೌಲಭ್ಯಗಳಿವೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಏಕೆಂದರೆ ಆ ಕ್ರೀಡೆಗಳ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಬೇಕಾಬಿಟ್ಟಿ ಹೇಳಿಕೆ ನೀಡಲು ಹೋಗುವುದಿಲ್ಲ~ ಎಂದರು.`ನನ್ನ ತಂದೆಯೇ ನನಗೆ ಹೀರೊ. ಏಕೆಂದರೆ ಅವರಿಂದಲೇ ನನ್ನ ಜೀವನ ಈ ಹಂತಕ್ಕೆ ಬಂದು ತಲುಪಿದೆ. ಒಂದೂ ಶತಕ ಬಾರಿಸದವರು ಕೂಡ ನನಗೆ ಸಲಹೆ ನೀಡುತ್ತಾರೆ. ಆದರೆ ಅದು ಒಳ್ಳೆಯ ಉದ್ದೇಶ ಹೊಂದಿದ್ದರೆ ಸ್ವೀಕರಿಸಲು ಸಿದ್ಧ~ ಎಂದು ನುಡಿದರು.`ನಾನು ಈ ಹಂತ ತಲುಪಲು ತುಂಬಾ ಸಮಯ ಹಿಡಿದಿದೆ. ಉಳಿದವರು ಕೂಡ ಬದ್ಧತೆ ಹಾಗೂ ಶಿಸ್ತು ತೋರಬೇಕು. ವಿರಾಟ್ ಕೊಹ್ಲಿ ಈಗ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅದನ್ನು ಅವರು ಮುಂದುವರಿಸಬೇಕು. ಉಳಿದ ಆಟಗಾರರು ಕೂಡ ಪ್ರತಿಭಾವಂತರು~ ಎಂದು ತೆಂಡೂಲ್ಕರ್ ಹೇಳಿದರು.ಆದರೆ ತಮ್ಮ ಶತಕಗಳ ಶತಕದ ಸಾಧನೆಯನ್ನು ಯಾರಾದರೂ ಅಳಿಸಿ ಹಾಕಬಹುದೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ. `ಈ ಬಗ್ಗೆ ಗೊತ್ತಿಲ್ಲ. ಆದರೆ ಎಲ್ಲಾ ದಾಖಲೆಗಳು ಒಂದು ದಿನ ಅಳಿಸಿ ಹೋಗುತ್ತವೆ. ಈ ಬಗ್ಗೆ ನಾನು ಭವಿಷ್ಯ ಹೇಳುವುದಿಲ್ಲ. ಅಕಸ್ಮಾತ್ ಹಾಗಾದಲ್ಲಿ, ಈ ಸಾಧನೆ ಭಾರತದ ಆಟಗಾರನಿಂದಲೇ ಮೂಡಿಬಂದರೆ ಒಳ್ಳೆಯದು~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.