ದೇವರ ಎದುರೇ ಹೊಡೆದಾಟ...!

7

ದೇವರ ಎದುರೇ ಹೊಡೆದಾಟ...!

Published:
Updated:

ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ವಿಜಯ ದಶಮಿಯ ವೈಶಿಷ್ಟ್ಯ. ಆದರೆ ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲ್ಲೂಕಿನ ಹೊಳಗುಂದ ಮಂಡಲದ ನೆರಣಕಿ ಗ್ರಾಮದ ಬಳಿಯ ದೇವರ ಮಲ್ಲಯ್ಯನ ಗುಡ್ಡದಲ್ಲಿ ಮಾತ್ರ ಭಕ್ತಾದಿಗಳ ಹೊಡೆದಾಟ, ರಾತ್ರಿಯಿಡೀ ಕಾದಾಟ!

ನಂಬಲು ಸಾಧ್ಯವಾಗದಿದ್ದರೂ ಇದು ಸತ್ಯ, ವಿಜಯ ದಶಮಿಯಂದು ಇದು ಇಲ್ಲಿಯ ವೈಶಿಷ್ಟ್ಯ.ಬಡಿದಾಟದ ಜೊತೆ ಮಾಳಮಲ್ಲೇಶ್ವರ ಸ್ವಾಮಿಯ ಕಾರಣಿಕ ಉತ್ಸವ ಆಚರಣೆ ಮಾಡುವುದು ಇಲ್ಲಿಯ ಸಂಪ್ರದಾಯ. ಇಂತಹ ಆಚರಣೆ ಬೇರೆ ಯಾವ ದೇವಾಲಯಗಳಲ್ಲಿಯೂ ಕಾಣಲು ಸಿಗುವುದಿಲ್ಲ.ನೂರಾರು ಪೊಲೀಸರ ಎದುರೇ ಸಾವಿರಾರು ಭಕ್ತರು ಬಡಿಗೆ ಹಿಡಿದು ಹಲಗೆ ತಾಳಕ್ಕೆ ಹೆಜ್ಜೆ ಹಾಕುತ್ತ ಕುಣಿದು ಕುಪ್ಪಳಿಸುತ್ತಾರೆ. ಸ್ವಾಮಿಯ ಘೋಷಣೆ ಕೂಗುತ್ತಾ ಬಡಿಗೆಗಳನ್ನು ಝಳಪಿಸುತ್ತಾ ಪರಸ್ಪರ ಬಡಿದಾಟದಲ್ಲಿ ಮೈಮರೆಯುತ್ತಾರೆ.ಗಾಯಗೊಂಡು, ರಕ್ತಹರಿದರೂ ಲೆಕ್ಕಿಸದೆ ಭಂಡಾರ ಹಚ್ಚಿಕೊಂಡು ರೌದ್ರಾವತಾರದಿಂದ ಕುಣಿಯುತ್ತಾರೆ. ಈ ಪರಿಯ ಕಾದಾಟ ನೋಡಲು ಗುಂಡಿಗೆ ಗಟ್ಟಿ ಹಿಡಿದಿಟ್ಟುಕೊಳ್ಳಬೇಕು. ರಾತ್ರಿಯಿಡೀ ನಡೆಯುವ ಈ ರೋಮಾಂಚಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ.ಸಾವಿರಾರು ಮೆಟ್ಟಿಲುಗಳ ಹಾದಿ: ಗುಡ್ಡದ ಮೇಲ್ತುದಿಯಲ್ಲಿನ ಏಕ ಶಿಲೆಯಲ್ಲಿ ಮೂಡಿರುವ ಮಾಳ ಮಲ್ಲಯ್ಯ ಮತ್ತು ಮಾಳಮ್ಮ ದೇವಿಯ ದರ್ಶನ ಪಡೆಯಲು ಸಾವಿರಾರು ಮೆಟ್ಟಿಲುಗಳನ್ನು ಏರಲೇಬೇಕು.ದೇವರಗುಡ್ಡದ ಅಕ್ಕಪಕ್ಕದ ಹಳ್ಳಿಗಳಿಂದ ತಂಡೋಪತಂಡವಾಗಿ ಹಲಗೆ- ಡೊಳ್ಳು ವಾದ್ಯ ಬಾರಿಸುತ್ತಾ ಪಂಜಿನೊಂದಿಗೆ ಬಡಿಗೆ ಹಿಡಿದುಕೊಂಡು ಬರುವ ಭಕ್ತರು ನೇರವಾಗಿ ಗುಡ್ಡದ ಮೇಲ್ತುದಿಯ ಸ್ವಾಮಿಯ ದರ್ಶನಕ್ಕೆ ತೆರಳಿ ಕಾಯಿ-ಕರ್ಪೂರ ಅರ್ಪಿಸುತ್ತಾರೆ.ಗುಡ್ಡದ ಮೇಲಿನ ಉತ್ಸವ ಮೂರ್ತಿಗಳನ್ನು ದೇವಸ್ಥಾನದಿಂದ ಹೊತ್ತು ತರುವ ಭಕ್ತರು ಪಂಜಿನ ಮೆರವಣಿಗೆ ಮತ್ತು ಬಡಿಗೆಗಳ ಹೊಡೆದಾಟದಲ್ಲಿ ಮಗ್ನರಾಗುತ್ತಾರೆ. ಸೂರ್ಯೋದಯಕ್ಕೆ ಮುನ್ನ ಸ್ವಾಮಿಯ ಅರ್ಚಕರಿಂದ ವರ್ಷದ ಮಳೆ- ಬೆಳೆ ಕುರಿತ ಭವಿಷ್ಯದ ಕಾರಣಿಕ ಹೇಳಿಕೆ ಹೊರಬೀಳುತ್ತದೆ.

 

ಈ ಸಮಯದಲ್ಲಿ ಮಾತ್ರ ಎಲ್ಲೆಡೆ ನಿಶ್ಯಬ್ಧ. ಹೇಳಿಕೆಯ ನಂತರ ದೇವರ ಮೂರ್ತಿಗಳನ್ನು ದೇವಾಲಯಕ್ಕೆ ಕರೆತರುವ ವೇಳೆ ಮತ್ತೆ ಬಡಿಗೆಗಳ ಸದ್ದು ಆರ್ಭಟ. ಉತ್ಸವ ಮೂರ್ತಿಗಳನ್ನು ದೇವಾಲಯದಲ್ಲಿ ಮರಳಿ ಸ್ಥಾಪಿಸುತ್ತಿದ್ದಂತೆಯೇ ಬಡಿಗೆಗಳ ಸದ್ದಿಗೆ ತೆರೆ. ನಂತರ ಕಾದಾಟ ಮರೆತ ಭಕ್ತರು ಪರಸ್ಪರರಾಗಿ ದೇವರಿಗೆ ಕಾಯಿ- ಕರ್ಪೂರ ಅರ್ಪಿಸಿ ಸೌಹಾರ್ದದಿಂದಲೇ ಶಾಂತಿ, ಸ್ನೇಹದೊಂದಿಗೆ ತಮ್ಮ ಊರುಗಳತ್ತ ಸಾಗುತ್ತಾರೆ.ದೇವಾಲಯ ಆಂಧ್ರದಲ್ಲಿದ್ದರೂ ಭಕ್ತರೆಲ್ಲರೂ ಕನ್ನಡಿಗರೇ. ಇಂದಿಗೂ ಕನ್ನಡದಲ್ಲೇ ಕಾರಣಿಕ ಹೇಳುವುದಲ್ಲದೆ, ಎಲ್ಲವೂ ಕನ್ನಡಮಯವಾಗಿಯೇ ಇರುವುದು ವಿಶೇಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry