ಶನಿವಾರ, ಮೇ 15, 2021
26 °C

ದೇವರ ಕಾಡು ಸಂರಕ್ಷಣೆ, ಸಂವರ್ಧನೆ ಕಾರ್ಯಾಗಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆನೆ ದಾಳಿಯಿಂದ ಬೆಳೆ ಹಾಳಾದ ಜಮೀನುಗಳ ರೈತರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ವಿಳಂಬವಾಗುತ್ತಿರುವುದಕ್ಕೆ ಅರಣ್ಯ ಅಧಿಕಾರಿಗಳು ಕಾರಣ~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಆರೋಪಿಸಿದರು.ಅರಣ್ಯ ಇಲಾಖೆ ಮತ್ತು ಪಶ್ಚಿಮ ಘಟ್ಟ ಕಾರ್ಯಪಡೆ ಸಹಯೋಗದಲ್ಲಿ ನಗರದ ಅರಣ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ `ದೇವರ ಕಾಡು ಸಂರಕ್ಷಣೆ ಮತ್ತು ಸಂವರ್ಧನೆ~ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, `ಆನೆ ವಲಸೆ ಮಾರ್ಗದಲ್ಲಿ ಕಾಡುಗಳ ಒತ್ತುವರಿ ಮತ್ತು ರೆಸಾರ್ಟ್‌ಗಳ ಸ್ಥಾಪನೆ ಮಾಡಿದಾಗ ಅಲ್ಲಿ ತಂತಿ ಬೇಲಿ ಹಾಕಲಾಗುತ್ತಿದೆ. ಅನಿವಾರ್ಯವಾಗಿ ಆನೆಗಳು ರೈತರ ಜಮೀನಿಗೆ ನುಗ್ಗುತ್ತವೆ.ತಮಿಳುನಾಡು ಭಾಗಕ್ಕೆ ತೆರಳುವ ಆನೆಗಳನ್ನು ಅಲ್ಲಿನವರು ಪೆಟ್ರೋಲ್ ಬಾಂಬ್ ಹಾಕಿ ರಾಜ್ಯದ ಅರಣ್ಯದತ್ತ ಓಡಿಸುತ್ತಾರೆ~ ಎಂದರು.`ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ನೀಡಿದರೆ ಅವರು ಆನೆಗಳನ್ನು ಸಾಯಿಸಲು ವಿದ್ಯುತ್ ಬೇಲಿ ಅಳವಡಿಸುವುದಕ್ಕೆ ತಡೆ ಬೀಳಬಹುದು. ಈಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದಾಗ ಆನೆ ದಾಳಿಯಿಂದ ಬೆಳೆ ಹಾಳಾದ ರೈತನಿಗೆ ಆರು ತಿಂಗಳಾದರೂ ಪರಿಹಾರ ನೀಡಿಲ್ಲ.ಕೆಲ ಇಲಾಖೆಗಳು 24 ಗಂಟೆಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಿರುವಾಗ, ನಮ್ಮ ಇಲಾಖೆಯ ಅಧಿಕಾರಿಗಳು ಏಕಿಷ್ಟು ತಡ ಮಾಡುತ್ತಿದ್ದಾರೆ. ಕಾನೂನಿನ ತೊಡಕುಗಳು ಇರಬಹುದಾದರೂ ಅಧಿಕಾರಿಗಳ ಉದಾಸೀನವೂ ಇದಕ್ಕೆ ಕಾರಣ~ ಎಂದರು.ಇತ್ತೀಚೆಗೆ ಅರಣ್ಯ ಇಲಾಖೆ ವಾಚರ್‌ಗಳ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು, `ಅಗತ್ಯಕ್ಕಿಂತ ಕಡಿಮೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

 

ಇದಕ್ಕೆ ಲಕ್ಷಾಂತರ ಅರ್ಜಿಗಳು ಬಂದಿವೆ. ಒಟ್ಟಿಗೆ ಅಗತ್ಯವಿರುವಷ್ಟು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬಹುದಿತ್ತು~ ಎಂದರು.`ಹೊಸ ಅರಣ್ಯ ನೀತಿಯ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಅದರಲ್ಲಿ ಯಾವುದೇ ಪ್ರಗತಿ ಆಗಿಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ, `ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಪಡೆಯು ದೇವರ ಕಾಡುಗಳ ಸಂರಕ್ಷಣೆಗೆ ಮುಂದಾಗಿದೆ. ದೇವರ ಕಾಡು ಹಳ್ಳಿಗಳ ಜೀವವೈವಿಧ್ಯ ದಾಖಲಾತಿ ಅವಶ್ಯವಿದೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹುತ್ತಾದಿಂಬ ಬಳಿ ಇರುವ 250 ದೇವರ ಕಾಡುಗಳಲ್ಲಿ 50 ಕಾಡುಗಳನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ತಡೆಯಲು ನೇರ ಕ್ರಮ ಅನಿವಾರ್ಯವಾಗಿದೆ~ ಎಂದರು. `ದೇವರ ಕಾಡುಗಳನ್ನು ಪಾರಂಪರಿಕ ಜೈವಿಕ ತಾಣ ಎಂದು ಘೋಷಿಸಬೇಕು.ಪರಿಸರ ಪ್ರವಾಸೋದ್ಯಮ ಮತ್ತು ಚಾರಣಕ್ಕೆ ಅವಕಾಶ ಕಲ್ಪಿಸಬೇಕು. ವನ್ಯಜೀವಿ ಕಾಯ್ದೆ ಅಡಿ ಸಂರಕ್ಷಣಾ ವಲಯವನ್ನಾಗಿ ಘೋಷಿಸಬೇಕು~ ಎಂದು ಮನವಿ ಮಾಡಿದರು.ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಕೆ.ಸಿಂಗ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಮತ್ತು ಸಂಪನ್ಮೂಲ ನಿರ್ವಹಣೆ) ರಾಜಣ್ಣ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆ ಸಂಚಾಲಕ ವಿನಯ್ ಲೂತ್ರಾ, ರಾಜ್ಯ ಜೀವವೈವಿಧ್ಯ ಮಂಡಳಿ ಸದಸ್ಯ ಪ್ರೊ.ಸುಭಾಷಚಂದ್ರನ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.