ಮಂಗಳವಾರ, ಮೇ 24, 2022
31 °C

ದೇವರ ಹೆಸರಿನಲ್ಲಿ ಮೋಸ: ಬೆಂಗಳೂರಿನ ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದೇವಿ ಆರಾಧನೆ ಮೂಲಕ ವೈಯಕ್ತಿಕ ಸಮಸ್ಯೆ ಬಗೆಹರಿಸುವುದಾಗಿ ಹಣ ಪಡೆದು ಮಹಿಳೆಯೊಬ್ಬರಿಗೆ ಮೋಸ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯದ ತುಕಾರಾಂ ಶಿಂಧೆ ಅಲಿಯಾಸ್ ರೇಣುಕಾಚಾರ್ಯ (21) ಬಂಧಿತ ಆರೋಪಿ.

ಹೊರನಾಡು ಅನ್ನಪೂರ್ಣೇಶ್ವರಿ ಆರಾಧನೆಯಿಂದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಈತ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜನರಿಗೆ ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ನೀಡಿದ ದೂರವಾಣಿ ಸಂಖ್ಯೆಗೆ ರಾಧಾ ಕರೆ ಮಾಡಿದಾಗ ತನ್ನ ಬ್ಯಾಂಕ್ ಖಾತೆಗೆ ರೂ. 10 ಸಾವಿರ  ಜಮಾ ಮಾಡುವಂತೆ ತಿಳಿಸಿದ್ದಾನೆ. ಈತನನ್ನು ನಂಬಿದ ರಾಧಾ ಅವರು ಹಣ ಜಮಾ ಮಾಡಿದ್ದಾರೆ. ನಂತರ ತಮ್ಮ ಸಮಸ್ಯೆಯ ಬಗ್ಗೆ ರಾಧಾ ಅವರು ರೇಣುಕಾಚಾರ್ಯಗೆ ದೂರವಾಣಿ ಕರೆ ಮಾಡಿದಾಗ `ನೀವು ಯಾರೋ ಗೊತ್ತ್ಲ್ಲಿಲ, ನನ್ನ ಖಾತೆಗೆ ಹಣ ಜಮಾ ಆಗಿಲ್ಲ~ ಎಂದು ಸಬೂಬು ಹೇಳಿದ್ದಾನೆ.

ಪದೇ ಪದೇ ದೂರವಾಣಿ ಕರೆ ಮಾಡಿದರೂ ಸರಿಯಾದ ಉತ್ತರ ನೀಡದೆ ಮೋಸ ಮಾಡಿದ್ದ.

ಈ ಬಗ್ಗೆ ರಾಧಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ನಿರೀಕ್ಷಕರ ವಿ.ಎಂ. ಸಂತೋಷ್ ಅವರಿಗೆ ವಹಿಸಿದ್ದರು.

ತನಿಖೆ ಕೈಗೊಂಡ ಡಿಸಿಐಬಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ, ಮೊಬೈಲ್ ದೂರವಾಣಿ ಸಂಖ್ಯೆಯ ಆಧಾರದ ಮೇಲೆ ಈ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಿ, ಚಿತ್ರದುರ್ಗಕ್ಕೆ ಕರೆ ತಂದು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ತಾನು ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯನ್ನು ಬಂಧಿಸಲು ಶ್ರಮಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ವಿ.ಎಂ. ಸಂತೋಷ್ ಮತ್ತು ಸಿಬ್ಬಂದಿ ರಾಮಚಂದ್ರಪ್ಪ, ವೆಂಕಟೇಶ್, ಹಾಲೇಶ್, ಮಲ್ಲೇಶಪ್ಪ ಮತ್ತು ಮಲ್ಲಿಕಾರ್ಜುನ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೆ.ಬಿ. ಖೋತ್ ಅಭಿನಂದಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ದೇವರ ಹೆಸರನ್ನು ಹೇಳಿಕೊಂಡು ಸಮಸ್ಯೆ ಬಗೆಹರಿಸುವುದಾಗಿ ಜನರಿಗೆ ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.