ಗುರುವಾರ , ನವೆಂಬರ್ 21, 2019
20 °C
ಜಿಲ್ಲಾ ಬಿಜೆಪಿ ವಕ್ತಾರ ಮನು ಮುತ್ತಪ್ಪ ಪ್ರಶ್ನೆ

ದೇವಸ್ಥಾನದಲ್ಲಿ ಪ್ರಚಾರ ಸಭೆ ತಪ್ಪೇ?

Published:
Updated:

ಮಡಿಕೇರಿ: ಜನರು ಬಯಸಿದ್ದರಿಂದಲೇ ಶ್ರೀಮಂಗಲ ಸಮೀಪದ ಈಶ್ವರ ದೇವಸ್ಥಾನದಲ್ಲಿ ಪಕ್ಷದ ಸಭೆಯನ್ನು ನಡೆಸಲಾಯಿತು. ಇದರಲ್ಲಿ ತಪ್ಪೇನು? ಚುನಾವಣಾ ನೀತಿ ಸಂಹಿತೆಯು ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ಭಗಂಡೇಶ್ವರ - ತಲಕಾವೇರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಮನು ಮುತ್ತಪ್ಪ ಹೇಳಿಕೊಂಡಿದ್ದಾರೆ.ದೇವಸ್ಥಾನದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಸಿದ್ದು ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಇದರಲ್ಲಿ ಭಾಗವಹಿಸಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಕಾಂಗ್ರೆಸ್ ಚುನಾವಣಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮನು ಮುತ್ತಪ್ಪ ಪ್ರತಿಕ್ರಿಯೆ ನೀಡಿದರು.ಆಯಾ ಪ್ರದೇಶದ ಜನರೇ ಇಂತಹ ಸ್ಥಳದಲ್ಲಿ ಸಭೆ ನಡೆಸಬೇಕು ಎಂದು ತೀರ್ಮಾನಿಸಿ, ಸಭೆ ನಡೆಸಿದರೆ ಅದರಲ್ಲಿ ಬೋಪಯ್ಯ ಅವರ ತಪ್ಪೇನಿದೆ? ಇದಲ್ಲದೇ ಬೋಪಯ್ಯ ಅವರು ಇದುವರೆಗೆ ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾಗಿಲ್ಲ, ನಾಮಪತ್ರ ಕೂಡ ಸಲ್ಲಿಸಿಲ್ಲ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಅವರಿಗೆ ಅನ್ವಯಿಸಲ್ಲ ಎಂದು ಅವರು ಸಮರ್ಥನೆ ಮಾಡಿಕೊಂಡರು.ಸದ್ಯಕ್ಕೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿದೆಯಷ್ಟೇ, ಇಂತಹ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ ಎಂದರು.ವಿರಾಜಪೇಟೆ ತಾಲ್ಲೂಕು ಬಿಜೆಪಿ ವಕ್ತಾರರಾಗಿ ಕೆಲಸ ನಿರ್ವಹಿಸುತ್ತಿರುವ ಅಡ್ಡಂಡ ಕಾರ್ಯಪ್ಪ ಅವರು ಎಲ್ಲಿಯೂ ಕೊಡವ ಸಾಹಿತ್ಯ ಅಕಾಡೆಮಿಯ ಸ್ಥಾನವನ್ನು ದುರ್ಬಳಕೆ ಮಾಡುತ್ತಿಲ್ಲ ಎಂದರು.ಕಾಂಗ್ರೆಸ್ಸಿನ ಟಿ.ಪಿ.ರಮೇಶ್ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಇದಲ್ಲದೇ, ಜೆಡಿಎಸ್ ಪಕ್ಷದ ಮುನೀರ್ ಅಹಮದ್ ಮಡಿಕೇರಿ ಕಸಾಪ ಅಧ್ಯಕ್ಷರಾಗಿದ್ದಾರೆ. ಇವರ ರಾಜೀನಾಮೆ ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ತಳೂರು ಕಿಶೋರ್‌ಕುಮಾರ್, ಸುಬ್ರಮಣಿ ಉಪಾಧ್ಯಾಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)