ಗುರುವಾರ , ಮೇ 13, 2021
24 °C
ಸ್ವಂತ ಕಟ್ಟಡವಿಲ್ಲದ ಕಿರಿಯ ಪ್ರಾಥಮಿಕ ಶಾಲೆ

ದೇವಸ್ಥಾನವೇ ಮಕ್ಕಳ ಜ್ಞಾನ ದೇಗುಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಒಂದೆಡೆ ನಾಯಿಗಳ ವಾಸ್ತವ್ಯ. ಇನ್ನೊಂದೆಡೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ದಂಡು. ಇದರ ಮಧ್ಯೆ ಮಕ್ಕಳ ಪಾಠ.ನಗರದ ಮಧ್ಯದಲ್ಲಿರುವ ವಾಲ್ಮೀಕಿ ನಗರ ಬಡಾವಣೆಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು. ಸುಮಾರು ಏಳು ವರ್ಷಗಳ ಹಿಂದೆ ಆರಂಭವಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡದ ಭಾಗ್ಯ ಕೂಡಿ ಬಂದಿಲ್ಲ. ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದೇವಸ್ಥಾನವೇ ಜ್ಞಾನ ದೇಗುಲವಾಗಿದೆ.2006-07 ರಲ್ಲಿ ವಾಲ್ಮೀಕಿ ನಗರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮಂಜೂರು ಮಾಡಲಾಯಿತು. ಅಂದಿನಿಂದ ಇಲ್ಲಿಯವರೆಗೂ ಶಾಲೆಗೆ ಕಟ್ಟಡ ಎಂಬುದು ಸಿಕ್ಕಿಲ್ಲ. ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಮಕ್ಕಳು ಅನಿವಾರ್ಯವಾಗಿ ದೇವಸ್ಥಾನದಲ್ಲಿಯೇ ಶಾಲೆ ಕಲಿಯುವಂತಾಗಿದೆ.ಈ ವರ್ಷ ಒಟ್ಟು 54 ಮಕ್ಕಳ ದಾಖಲಾತಿ ಇದೆ. ನಿತ್ಯವೂ ಕನಿಷ್ಠ 45 ಮಕ್ಕಳು ಶಾಲೆಗೆ ಹಾಜರಾಗುತ್ತಾರೆ. ಆದರೆ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲದಿರುವದರಿಂದ ಶಾಲೆ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.ಸ್ಥಳದ ಅಭಾವದಿಂದಾಗಿ ಇಲಾಖೆಯಿಂದ ಬಂದಿರುವ ಪುಸ್ತಕಗಳು ಕಪಾಟಿನಲ್ಲಿಯೇ ದೂಳು ತಿನ್ನುತ್ತಿವೆ. ಈ ಶಾಲೆಗೆ ಬಂದ ನಲಿ-ಕಲಿ ಯೋಜನೆಯ ಬೋಧನಾ ಸಾಮಗ್ರಿಗಳನ್ನು ಪ್ರದರ್ಶಿಸಲೂ ಸ್ಥಳ ಇಲ್ಲದಂತಾಗಿದೆ.ದೇವಸ್ಥಾನದಲ್ಲಿ ಒಟ್ಟು ಐದು ತರಗತಿಗಳನ್ನು ನಡೆಸಲಾಗುತ್ತಿದೆ. ಒಂದರಿಂದ ಮೂರನೇ ತರಗತಿಯನ್ನು ದೇವಾಲಯದ ಒಂದು ಬದಿಯಲ್ಲಿ ನಡೆಸಲಾಗುತ್ತಿದ್ದು, ನಾಲ್ಕು ಮತ್ತು ಐದನೇ ತರಗತಿಗಳನ್ನು ದೇವಾಲಯದ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟಿರುವ ಕೋಣೆಯಲ್ಲಿ ನಡೆಸಲಾಗುತ್ತಿದೆ.ಶಾಲೆಗೆ ಇಬ್ಬರೇ ಶಿಕ್ಷಕಿಯರಿದ್ದು, ಒಬ್ಬರು ರಜೆ ಮೇಲೆ ತೆರಳಿದರೆ, ಐದೂ ತರಗತಿಗಳನ್ನು ಒಬ್ಬರೇ ನಿಭಾಯಿಸಬೇಕು. ಆದರೆ ಬಿಸಿಯೂಟ ಮಾತ್ರ ಬೇರೆ ಶಾಲೆಯಿಂದ ಸರಬರಾಜು ಆಗುತ್ತಿರುವುದು ಸಮಾಧಾನದ ಸಂಗತಿ ಎನ್ನುತ್ತಾರೆ ಪಾಲಕರು.ಹಬ್ಬದಲ್ಲಿ ಕಟ್ಟೆಯೇ ಗತಿ: ಹಬ್ಬ, ಅಮಾವಾಸ್ಯೆ, ಹುಣ್ಣಿಮೆಯ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಜನರು ಹೆಚ್ಚು. ಇದರಿಂದಾಗಿ ದೇವಾಲಯದಲ್ಲಿ ಭಕ್ತರೇ ತುಂಬುವುದರಿಂದ ಅನಿವಾರ್ಯವಾಗಿ ಶಾಲೆಯನ್ನು ಕಟ್ಟೆಯ ಮೇಲೆ ಸ್ಥಳಾಂತರಿಸಲಾಗುತ್ತದೆ. ಹಬ್ಬದ ಸಂಭ್ರಮ, ದೇವಾಲಯದಲ್ಲಿನ ಪೂಜೆ, ಪುನಸ್ಕಾರಗಳ ಮಧ್ಯೆ ಮಕ್ಕಳಿಗೆ ಬೋಧನೆ ಮಾಡುವುದು ಸಾಹಸದ ಕೆಲಸವೇ. ಆದರೂ ಶಿಕ್ಷಕಿಯರು ನಿಭಾಯಿಸಿಕೊಂಡು ಹೋಗಬೇಕಾಗಿದೆ.ದೇವಸ್ಥಾನದ ಆವರಣದಲ್ಲಿ ಪುಂಡರ ಕಾಟ ಹೆಚ್ಚಾಗಿದೆ. ಶಾಲೆಯ ತರಗತಿಗಳು ನಡೆಯುವ ವೇಳೆಯಲ್ಲಿ ದೇವಸ್ಥಾನದಲ್ಲಿನ ಟಿವಿಯನ್ನೂ ಹಚ್ಚಲಾಗುತ್ತದೆ.ಶಾಲಾ ಕಟ್ಟಡಕ್ಕಾಗಿ ಸ್ಥಳದ ಹುಡುಕಾಟ ಮಾಡಿ ಹೈರಾಣಾದ ಇಲಾಖೆಯ ಅಧಿಕಾರಿಗಳು, ವಾಲ್ಮೀಕಿ ನಗರ ಬಡಾವಣೆಯಲ್ಲಿನ ದಂಡಗುಂಡ ಬಸವಣ್ಣ ದೇವಸ್ಥಾನದ ಕೆಳಗೆ ಖಾಲಿ ಇರುವ ನಿವೇಶನದಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ.ಆದರೆ ಗುಡ್ಡದ ಕೆಳಗೆ ಈ ನಿವೇಶನ ಇರುವದರಿಂದ ಕಟ್ಟಡಕ್ಕೆ ಸರಿಯಾಗಿ ಬುನಾದಿ ಬೀಳುವುದಿಲ್ಲ ಎಂಬ ಆತಂಕ ಕಾಡುತ್ತಿದೆ.ನಗರಸಭೆ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಬಡಾವಣೆಯ ಕಮಲಾ ನೆಹರು ಪಾರ್ಕ್‌ನಲ್ಲಿರುವ ನಿವೇಶನ ನೀಡಲು ಚಿಂತನೆ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಮುತುವರ್ಜಿ ವಹಿಸದೇ ಇರುವುದರಿಂದ ಶಾಲೆಗೆ ಇನ್ನೂ ಕಟ್ಟಡದ ಭಾಗ್ಯ ಒದಗಿ ಬಂದಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.ಶಾಲೆಗೆ ಸ್ವಂತ ಕಟ್ಟಡಕ್ಕಾಗಿ ನಿವೇಶನ ಹುಡುಕಾಟ ಮಾಡಿ ಸಾಕಾಗಿದೆ. ಕಮಲಾ ನೆಹರು ಪಾರ್ಕ್‌ನಲ್ಲಿ ನಗರಸಭೆಯಿಂದ ನಿವೇಶನ ಒದಗಿಸಿದರೆ ಸಾಕಷ್ಟು ಅನುಕೂಲ ಆಗಲಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.ಜಿಲ್ಲಾ ಕೆಂದ್ರದಲ್ಲಿರುವ ಶಾಲೆಗೆ ಕಟ್ಟಡವಿಲ್ಲದೇ ದೇವಸ್ಥಾನದಲ್ಲಿ ನಡೆಸುವಂತಹ ಸ್ಥಿತಿ ಬಂದಿರುವುದು ಶೋಚನೀಯ. ಮೊದಲೇ ಶೈಕ್ಷಣಿಕವಾಗಿ  ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದೆ. ಅಂಥದ್ದರಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿರುವುದು ಕಳವಳಕಾರಿ ಅಂಶ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತಾರೆ ಅನಿಕೇತನ ಟ್ರಸ್ಷ್ ಅಧ್ಯಕ್ಷ ಮಲ್ಲೇಶ ಕುರುಕುಂದಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.