ದೇವಾಲಯ ದರ್ಶನ : ಗೋಕರ್ಣದ ಮಹಾಬಲ

7

ದೇವಾಲಯ ದರ್ಶನ : ಗೋಕರ್ಣದ ಮಹಾಬಲ

Published:
Updated:

ಅರಬ್ಬಿ (ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು) ಸಮುದ್ರದ ದಂಡೆಯ ಮೇಲಿರುವ ಗೋಕರ್ಣ  ಮಹಾಬಲೇಶ್ವರನ ಸನ್ನಿಧಿ. ಇದು ಪುರಾಣ ಪ್ರಸಿದ್ಧ ಕ್ಷೇತ್ರ. ಶಿವನ ಪಂಚ ಕ್ಷೇತ್ರಗಳಲ್ಲಿ ಒಂದು. ಗೋಕರ್ಣದ ಒಂದು ಬದಿಯಲ್ಲಿ ಗಂಗಾವಳಿ ಮತ್ತೊಂದು ಬದಿಯಲ್ಲಿ ಅಘನಾಶಿನಿ ನದಿ ಹರಿಯುತ್ತದೆ.ಎರಡು ನದಿಗಳ ಮಧ್ಯದ ಈ ಭೂಪ್ರದೇಶ ಗೋವಿನ ಕಿವಿಯ ಆಕಾರದಲ್ಲಿ ಇರುವುದರಿಂದ ಇದಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ. ಮಹಾಬಲೇಶ್ವರ ದೇವಸ್ಥಾನದಲ್ಲಿ ಪರಶಿವನ ಆತ್ಮಲಿಂಗ ಇದೆ. ಜಾತಿ- ಮತಗಳ ಬೇಧವಿಲ್ಲದೆ ಎಲ್ಲರೂ ಗರ್ಭಗುಡಿಯೊಳಕ್ಕೆ ಹೋಗಿ ಆತ್ಮಲಿಂಗವನ್ನು ಮುಟ್ಟಿ ನಮಸ್ಕರಿಸುವ ಅವಕಾಶವಿದೆ.ಮೃತ ಮಾತಾ ಪಿತೃಗಳ ಅಸ್ಥಿಯನ್ನು ಇಲ್ಲಿ ವಿಸರ್ಜಿಸಿ ಅಪರ ಕ್ರಿಯೆಗಳನ್ನು ಗೋಕರ್ಣದಲ್ಲಿ ಮಾಡುವುದರಿಂದ  ಸತ್ತವರಿಗೆ ಮುಕ್ತಿ ಸಿಗುತ್ತದೆ, ಸಾಕ್ಷಾತ್ ಮಹಾಬಲೇಶ್ವರನೇ ಮೃತರ ಕಿವಿಯಲ್ಲಿ ಪಂಚಾಕ್ಷರಿ ಮಂತ್ರವನ್ನು ಉಪದೇಶಿಸುತ್ತಾನೆ ಎನ್ನುವ ದೃಢ ನಂಬಿಕೆ ಅನೇಕರಲ್ಲಿದೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಸುತ್ತ ಮಹಾ ಗಣಪತಿ, ತಾಮ್ರ ಗೌರಿ, ವೀರಭದ್ರೇಶ್ವರ ಇತ್ಯಾದಿ  ದೇವಸ್ಥಾನಗಳಿವೆ. ಇಡಗುಂಜಿ ಹೊರತುಪಡಿಸಿ ನಿಂತ ಭಂಗಿಯಲ್ಲಿರುವ ದ್ವಿಬಾಹು ಗಣಪತಿ ದೇವಸ್ಥಾನ ಇರುವುದು ಗೋಕರ್ಣದಲ್ಲಿ ಮಾತ್ರ. ಇಲ್ಲಿರುವ ‘ಕೋಟಿ ತೀರ್ಥ’ ಕೆರೆಯ ಮಧ್ಯೆ ಸಪ್ತಕೋಟೇಶ್ವರ ಲಿಂಗವಿದೆ. ತಾಮ್ರಗೌರಿ ಕೆರೆ, ರಾಮತೀರ್ಥ ಚಿಲುಮೆಗಳೂ ಇಲ್ಲಿವೆ.ಗೋಕರ್ಣ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಸಂಸ್ಕೃತ ಅಧ್ಯಯನ ಕೇಂದ್ರವೂ ಹೌದು. ಚತುರ್ವೇದ ವಿದ್ವಾಂಸರು ಇಲ್ಲಿದ್ದಾರೆ. ಗೋಕರ್ಣ ಮಹಾಬಲೇಶ್ವರದ ದೇವಾಲಯದ ಆಡಳಿತವನ್ನು ಸರ್ಕಾರ 2008ರ ಆಗಸ್ಟ್‌ನಲ್ಲಿ  ಹೊಸನಗರದ ರಾಮಚಂದ್ರಾಪುರ ಮಠದ ಸ್ವಾಧೀನಕ್ಕೆ ನೀಡಿದೆ. ದೇವಸ್ಥಾನದ ಆಡಳಿತವನ್ನು ಶ್ರೀ ಮಠವೇ ನಿರ್ವಹಿಸುತ್ತಿದೆ.ನಿತ್ಯ ಬೆಳಗಿನ ಆರು ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶವಿದೆ. ಮಧ್ಯಾಹ್ನ 12.30ರವರೆಗೆ ಭಕ್ತರು ಆತ್ಮ ಲಿಂಗವನ್ನು ಸ್ವರ್ಶಿಸಿ ನಮಸ್ಕರಿಸಲು ಅವಕಾಶವಿದೆ. ಮಧ್ಯಾಹ್ನ 1.30ರ ನಂತರ ಬಂದವರು ದೇವಸ್ಥಾನ ಗರ್ಭಗುಡಿ ಹೊರಗಿನಿಂದ ದೇವರ ದರ್ಶನ ಮಾಡಬಹುದು. ಮತ್ತೆ ಸಂಜೆ 5ರಿಂದ 8 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ರಾತ್ರಿ 9ಕ್ಕೆ ಮಹಾಪೂಜೆ ನಡೆಯುತ್ತದೆ. ಸೇವಾ ವಿವರಗಳು: ಮಹಾಬಲೇಶ್ವರ ದೇವಸ್ಥಾನದಲ್ಲಿ ಸುವರ್ಣ ನಾಗಾಭರಣ ವಿಶೇಷ ಪೂಜೆಗೆ 1501ರೂ, ರಜತ ನಾಗಾಭರಣ ವಿಶೇಷ ಪೂಜೆಗೆ 1101 ರೂ. ನವಧಾನ್ಯ, ಮಹಾ ಪಂಚಾಮೃತ ಪೂಜೆಗೆ 501ರೂ, ಪಂಚಾಮೃತ ಪೂಜೆಗೆ 251ರೂ, ಕುಂಭಾಭಿಷೇಕ ಹಾಗೂ ಕ್ಷೀರಾಭಿಷೇಕ ಪೂಜೆಗೆ 151ರೂ, ಅಷ್ಟೋತ್ತರ ಬಿಲ್ವಾರ್ಚನ ಪೂಜೆಗೆ 101ರೂ ದರ ನಿಗದಿ ಮಾಡಲಾಗಿದೆ.ಅನ್ನದಾನ ಸೇವೆ: ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ಆಡಳಿತ ಊಟದ ವ್ಯವಸ್ಥೆ ಮಾಡುತ್ತದೆ. ಇಲ್ಲಿ ಶಾಶ್ವತ ಅನ್ನದಾನ ಸೇವೆ ಮಾಡಲು ಬಯಸುವವರು 100001ರೂ, ಒಂದು ದಿನದ ಊಟದ ಸೇವೆಗೆ 50001ರೂ ದರ ನಿಗದಿ ಮಾಡಲಾಗಿದೆ. ನೂರು, ಐವತ್ತು ಇಪ್ಪತ್ತೈದು ಹಾಗೂ ಹತ್ತು ಜನರಿಗೆ ಊಟ ಹಾಕುವ ಸೇವೆಗೂ ವ್ಯವಸ್ಥೆ ಇದೆ. ಅದಕ್ಕೆ ಸಲ್ಲಿಸಬೇಕಾದ ಶುಲ್ಕದ ವಿವರಗಳನ್ನು ದೇವಸ್ಥಾನದ ಆಡಳಿತ ಕಚೇರಿಯಿಂದ ಪಡೆಯಬಹುದು.

ವಸತಿ ಸೌಲಭ್ಯ: ದೇವಸ್ಥಾನದ ವತಿಯಿಂದ ಯಾವುದೇ ವಸತಿ ವ್ಯವಸ್ಥೆ ಇಲ್ಲ. ಗೋಕರ್ಣದಲ್ಲಿ ಹತ್ತಕ್ಕೂ ಹೆಚ್ಚು ಹೋಟೆಲ್‌ಗಳು ಹಾಗೂ 50ಕ್ಕೂ ಹೆಚ್ಚು ಹೋಮ್ ಸ್ಟೇಗಳಿವೆ. ಅಸ್ಥಿ ಪ್ರದಾನ, ಅಪರ ಕರ್ಮಗಳನ್ನು ಮಾಡಲು ಬರುವವರಿಗೆ ನೆರವಾಗಲು ಸಾಕಷ್ಟು ಮಂದಿ ಸ್ಥಳೀಯ ಪುರೋಹಿತರು ಇದ್ದಾರೆ. ಅವರ ಮನೆಯಲ್ಲೇ ಇದ್ದುಕೊಂಡು ಎಲ್ಲ ವಿಧಿ ವಿಧಾನಗಳನ್ನು ಪೂರೈಸಬಹುದು. ಪೂಜಾ ವಿವರಗಳು ದೇವಸ್ಥಾನದ ವೆಬ್‌ಸೈಟ್ (www.srigokarna.org)ನಲ್ಲಿ ಲಭ್ಯವಿವೆ.ಹೆಚ್ಚಿನ ಮಾಹಿತಿಗಾಗಿ- ದೇವಸ್ಥಾನದ ಆಡಳಿತ ಕಾರ್ಯದರ್ಶಿ ಜಿ.ಕೆ.ಹೆಗಡೆ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್-9449258114 ಮತ್ತು ಕಚೇರಿ ದೂರವಾಣಿ 08386- 257981, 257955.ಗೋಕರ್ಣಕ್ಕೆ ದಾರಿ

ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲಾ ಕೇಂದ್ರಗಳಿಂದ ಗೋಕರ್ಣಕ್ಕೆ ನೇರ ಬಸ್ ವ್ಯವಸ್ಥೆ ಇದೆ. ಗೋವಾದ ಮಡಗಾಂವ್‌ನಿಂದ ಗೋಕರ್ಣ 140 ಕಿ.ಮೀ ದೂರದಲ್ಲಿದೆ. ಅಲ್ಲಿಂದ ನೇರ ಬಸ್ ಸೌಲಭ್ಯವಿದೆ. ಗೋಕರ್ಣ, ಜಿಲ್ಲಾ ಕೇಂದ್ರ ಕಾರವಾರದಿಂದ 60 ಹಾಗೂ ಕುಮಟಾದಿಂದ 32 ಕಿ.ಮೀ. ದೂರದಲ್ಲಿದೆ.ಕುಮಟಾ ಹಾಗೂ ಅಂಕೋಲಾಗಳಿಂದ ಬಸ್‌ಗಳು ಹಾಗೂ ಪ್ರಯಾಣಿಕರ ಟೆಂಪೊ ಸೌಲಭ್ಯ ಇದೆ. ಹುಬ್ಬಳ್ಳಿ ಹಾಗೂ ಗೋವಾದ ಪಣಜಿ ಸಮೀಪದ ವಿಮಾನ ನಿಲ್ದಾಣಗಳು. ಗೋಕರ್ಣದಿಂದ ಎಂಟು ಕಿಲೋ ಮೀಟರ್ ದೂರದ ಮಾದನಗೇರಿಯಲ್ಲಿ ಕೊಂಕಣ ರೈಲು ನಿಲ್ದಾಣವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry