ದೇವಾಲಯ ದರ್ಶನ : ದಕ್ಷಿಣ ಕಾಶಿ

7

ದೇವಾಲಯ ದರ್ಶನ : ದಕ್ಷಿಣ ಕಾಶಿ

Published:
Updated:

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಹರಿಹರೇಶ್ವರ ದೇವಸ್ಥಾನ ದಕ್ಷಿಣ ಭಾರತದ ಕಾಶಿ ಎಂಬ ಹೆಸರು ಪಡೆದಿದೆ. ಈಗಿನ ಹರಿಹರ ಪ್ರದೇಶ ಪುರಾಣ ಕಾಲದಲ್ಲಿ ‘ಗುಹಾರಣ್ಯ’ ಎಂಬ ಹೆಸರು ಪಡೆದಿತ್ತು. 10ನೇ ಶತಮಾನದ ವೇಳೆಗೆ ಅದಕ್ಕೆ ‘ಕಡಲೂರು’, ‘ಕೂಡಲೂರು’ ಎಂಬ ಹೆಸರಿತ್ತು. ಇಲ್ಲಿನ ‘ಹರಿಹರೇಶ್ವರ’ ದೇವಸ್ಥಾನದಿಂದಾಗಿ ಈ ಊರಿಗೆ ಹರಿಹರ ಎಂಬ ಹೆಸರು ಬಂದಿದೆ.ಹರಿಹರದಲ್ಲಿ ಹತ್ತಾರು ದೇವಸ್ಥಾನಗಳಿವೆ. ಆದರೆ ವಾಸ್ತು ಹಾಗೂ ಶಿಲ್ಪ ಕಲಾದೃಷ್ಟಿಯಿಂದ ಹರಿಹರೇಶ್ವರ ದೇವಸ್ಥಾನಕ್ಕೆ ಚಾರಿತ್ರಿಕ ಮಹತ್ವವಿದೆ. ದೇವಸ್ಥಾನ ಅರವತ್ತಾರು ಕಲ್ಲಿನ  ಕಂಬಗಳ ಮೇಲೆ ನಿಂತಿದೆ. ಈ ಕಂಬಗಳು ಒಂದು ಅಚ್ಚಿನಿಂದ ಪಡಿ ತೆಗೆದಂತಿವೆ. ಮೇಲ್ಛಾವಣಿಯಲ್ಲಿ ಕಲೆ  ಮೈತಳೆದಿದೆ.ಹೊಯ್ಸಳ ದೊರೆ ಎರಡನೇ ಬಲ್ಲಾಳನ ಮಂತ್ರಿಯಾಗಿದ್ದ ಆಂಧ್ರದ ನಾದನಪುರ (ನಾರಾಣಪುರ)ದ ಅತಿರಾಜ(ಅಟ್ಟರಸ), ಆತನ ಪತ್ನಿ ನವಿಲಾಡೆಯಕ್ಕ, ಈ ದಂಪತಿಯ ಪುತ್ರ ಪೋಲಾಳ್ವನು ಹೊಯ್ಸಳರ ಕೀರ್ತಿಗೆ ಮನಸೋತು, ವೀರಬಲ್ಲಾಳನ ಮಗ ವೀರ ನರಸಿಂಹನ ದಂಡಾಧಿಕಾರಿಯಾಗಿ ಪರಾಕ್ರಮದಿಂದ ಖ್ಯಾತಿ ಗಳಿಸಿದ್ದ. ಅವನು ಹರಿಹರನ ಭಕ್ತ. ಆಗ ಬಯಲು ಸ್ಥಳದಲ್ಲಿ ಚಿಕ್ಕ ಗುಡಿಯಲ್ಲಿದ್ದ ಹರಿಹರೇಶ್ವರನಿಗೆ ಕ್ರಿ.ಶ. 1223-24ರಲ್ಲಿ ‘ಸ್ವಭಾನು ಸಂವತ್ಸರದ ಮಾಘ ಶುದ್ಧ ಏಕಾದಶಿಯ ಬುಧವಾರ’ 115 ಬಂಗಾರದ ಕಳಸಗಳಿಂದ ಕೂಡಿದ ಬೃಹತ್ ದೇವಸ್ಥಾನವನ್ನು ಹೊಯ್ಸಳ ಶೈಲಿಯಲ್ಲಿ ಕಟ್ಟಿಸಿದ. ಆದರೆ ಈ ದೇವಸ್ಥಾನದಲ್ಲಿ ಹರಿಹರೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವನಿಗೆ ಸಾಧ್ಯವಾಗಲಿಲ್ಲ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ಹೊಯ್ಸಳರ ಮೂರನೇ ದಂಡನಾಯಕ ಸೋಮನಾಥ 1268ರಲ್ಲಿ ಈ ದೇವಸ್ಥಾನಕ್ಕೆ ಐದು ಅಂತಸ್ತಿನ ಪೂರ್ವ ಗೋಪುರವನ್ನು ಪಂಚಕಳಸದೊಂದಿಗೆ ನಿರ್ಮಿಸಿದ. ಅಲ್ಲಿಂದ ತೆರಳುವಾಗ ಕಂಚಿ ಬೇಡರು ಆತನನ್ನು ಕೊಲೆ ಮಾಡಿದರು. ಅದರ ನೆನಪಿಗೆ ದೇವಸ್ಥಾನ ಆವರಣದಲ್ಲಿ ವೀರಗಲ್ಲು ನೆಡಲಾಗಿದೆ ಎಂಬುದು ಶಾಸನಗಳ  ಉಲ್ಲೇಖವಾಗಿದೆ.ಹರಿಹರೇಶ್ವರ ಮೂರ್ತಿ ಆಳೆತ್ತರವಿದೆ. ಬಲಕ್ಕೆ ಪರಮೇಶ್ವರ, ಎಡಕ್ಕೆ ವಿಷ್ಣು ಹೀಗಾಗಿ ಈ ಮೂರ್ತಿ ‘ಹರಿಹರೇಶ್ವರ’. ಈ ದೇವಸ್ಥಾನ ವಾಸ್ತು ಹಾಗೂ ಶಿಲ್ಪ ಕಲಾಶೈಲಿಯಿಂದ ನೋಡುಗರ ಗಮನ ಸೆಳೆಯುತ್ತದೆ.ಹರಿಹರೇಶ್ವರ ದೇವಸ್ಥಾನದಲ್ಲಿ ನಿತ್ಯ ಬೆಳಿಗ್ಗೆ 7ರಿಂದ ಮಧ್ಯಾಹ್ನ 2.30ರವರೆಗೆ, ಸಂಜೆ 5ರಿಂದ ರಾತ್ರಿ 8.30ರವರೆಗೆ ಪೂಜೆ ನೆರವೇರುತ್ತದೆ. ಪ್ರತಿವರ್ಷ ಜನವರಿ ಅಥವಾ ಫೆಬ್ರುವರಿಯಲ್ಲಿ ಬರುವ ಮಾಘಶುದ್ಧ ಪೂರ್ಣಿಮೆಯಂದು ಹರಿಹರೇಶ್ವರನ ಬ್ರಹ್ಮ ರಥೋತ್ಸವ ಜರುಗುವುದು.ಸೇವಾ ವಿವರ: ಹರಿಹರೇಶ್ವರ ಸ್ವಾಮಿಗೆ ಸರ್ವಸೇವೆ, ಅಲಂಕಾರ, ಪಂಚಾಮೃತಾಭಿಷೇಕ, ಸಹಸ್ರನಾಮ ಅರ್ಚನೆ, ಹರಿಹರ ಅಷ್ಟೋತ್ತರ, ಏಕಾದಶ ರುದ್ರಾಭಿಷೇಕ, ಲಘುನ್ಯಾಸ ಪೂರ್ವಕ ರುದ್ರಾಭಿಷೇಕ, ತುಳಸಿ ಅಷ್ಟೋತ್ತರ, ಬಿಲ್ವಾರ್ಚನೆ, ಏಕವಾರ ರುದ್ರಾಭಿಷೇಕ, ಧಧ್ಯಾನ್ನ ನಿವೇದನೆ, ಪೊಂಗಲು ನಿವೇದನೆ, ಚಿತ್ರಾನ್ನ ನಿವೇದನೆ, ಕ್ಷೀರಾನ್ನ ನಿವೇದನೆ, ಹುಗ್ಗಿ ನಿವೇದನೆ, ಬಿಲ್ವಾರ್ಚನೆ ಅಷ್ಟೋತ್ತರ, ಕ್ಷೀರಾಭಿಷೇಕ, ವಸಂತೋತ್ಸವ, ವಿಶೇಷ ಪಲ್ಲಕ್ಕಿ ಉತ್ಸವ, ಆಂಜನೇಯ ಅಶ್ವ ಉತ್ಸವಗಳು ನಡೆಯುತ್ತವೆ.ದೇವಸ್ಥಾನದಲ್ಲಿ ಉಪನಯನ, ಜವಳ, ಮದುವೆ ಇತ್ಯಾದಿಗಳು ನಡೆಯುತ್ತವೆ. ಇವುಗಳಿಗೆ  ಪ್ರತೇಕ ಶುಲ್ಕ ನಿಗದಿ ಮಾಡಲಾಗಿದೆ. ಸೋಮವಾರ, ಶುಕ್ರವಾರ, ಶನಿವಾರ ವಿಶೇಷ ಪೂಜೆ ನಡೆಯುತ್ತವೆ.ಇಲ್ಲಿ ಮಕ್ಕಳ ಮದುವೆ ಮಾಡಿಸುವವರು ನೋಂದಣಿ ಅಧಿಕಾರಿಗಳಿಂದ ಅಧಿಕೃತ ಪತ್ರ ತರಬೇಕು. ಮದುವೆಗೆ ಬೇಕಾದ ಪೂಜಾ ಸಾಮಗ್ರಿಗಳನ್ನು ಸಂಬಂಧಪಟ್ಟವರು ತರಬೇಕು.ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮೀದೇವಿಗೆ ಭಕ್ತರು ಬಯಸುವ ದಿನಗಳಂದು ನಿರಂತರ ಪೂಜೆಗೆ ಅವಕಾಶವಿದೆ. ಈ ಪೂಜೆಗಾಗಿ ದೇವಸ್ಥಾನಕ್ಕೆ ಕನಿಷ್ಠ ರೂ 501 ರೂ ಠೇವಣಿ ಹಣ ಕೊಡಬೇಕು. ಠೇವಣಿಯಿಂದ ಬರುವ ಹಣದಲ್ಲಿ ಭಕ್ತರು ನಿಗದಿ ಮಾಡಿದ್ದ ದಿನ ಪೂಜೆ ನಡೆಯುತ್ತದೆ.ದೇವಸ್ಥಾನದ ಬಿರ್ಲಾ ಕಲ್ಯಾಣ ಮಂಟಪವಿದೆ. ಇಲ್ಲಿ ವಿವಾಹ ಕಾರ್ಯಗಳಿಗೆ ಅವಕಾಶವಿದೆ. ಸೇವೆ ಮತ್ತಿತರ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್- 94488 72812.

ಮಾರ್ಗ ಸೂಚಿ

ಹರಿಹರ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ದಾವಣಗೆರೆಯಿಂದ 14  ಕಿ.ಮೀ. ದೂರದಲ್ಲಿದೆ. ಹರಿಹರಕ್ಕೆ ರೈಲು ಮತ್ತು ಬಸ್‌ಗಳಿವೆ.ವಾಸ್ಕೋ, ಸಂಪರ್ಕಕ್ರಾಂತಿ ಹಾಗೂ ಗೋವಾಕ್ಕೆ ಹೋಗುವ ಮತ್ತು ಬರುವ ರೈಲುಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೈಲುಗಳು ಹರಿಹರ ನಿಲ್ದಾಣದಲ್ಲಿ ನಿಲ್ಲುತ್ತವೆ. ದಾವಣಗೆರೆಯಲ್ಲಿ ಎಲ್ಲ ರೈಲುಗಳೂ ನಿಲ್ಲುತ್ತವೆ. ಹರಿಹರಕ್ಕೆ ಹೊಂದಿಕೊಂಡಿರುವ

ಕುಮಾರಪಟ್ಟಣದಲ್ಲಿ ಖಾಸಗಿ ‘ಹೆಲಿಪ್ಯಾಡ್’ ಹಾಗೂ ಲಘು ವಿಮಾನ ನಿಲ್ದಾಣವಿದೆ (ಅನುಮತಿ ಪಡೆದು ನಿಲುಗಡೆಗೆ ಅವಕಾಶವಿದೆ). ಹರಿಹರದಲ್ಲಿ ಸಾಕಷ್ಟು ವಸತಿಗೃಹಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry