ದೇವಿರಮ್ಮನ ಜಾತ್ರೆ: ಅಪಾರ ಜನಸ್ತೋಮ

7

ದೇವಿರಮ್ಮನ ಜಾತ್ರೆ: ಅಪಾರ ಜನಸ್ತೋಮ

Published:
Updated:
ದೇವಿರಮ್ಮನ ಜಾತ್ರೆ: ಅಪಾರ ಜನಸ್ತೋಮ

ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ದೇವಿರಮ್ಮ ಜಾತ್ರೆಯು ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ದೇವಿರಮ್ಮನ ದೇವಸ್ಥಾನದಲ್ಲಿ ದೇವಿ ದರ್ಶನಕ್ಕಾಗಿ ಸಾಲುಸಾಲಾಗಿ ನಿಂತಿದ್ದ ಅಪಾರ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಪುನಸ್ಕಾರ ಸಲ್ಲಿಸಿದರು. ಬೆಲ್ಲದ ಪಾನಕ- ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.ಸೋಮವಾರ ರಾತ್ರಿಯಿಂದಲೇ ಪ್ರಾರಂಭಗೊಂಡು ದೇವರ ಹೆಬ್ಬಾರೆಗಳನ್ನು  ಹೊತ್ತು ಇಡೀ ರಾತ್ರಿ ಸಂಚರಿಸಲಾಯಿತು. ಈ ಮೊದಲು ಪಟ್ಟಸೋಮನಹಳ್ಳಿಯ ದಲಿತರು ಸುಮಾರು 40 ಕೆಜಿ ತೂಕದ ಕಂಚಿನ ಹೆಬ್ಬಾರೆಗಳಿಗೆ ಚರ್ಮದಿಂದ ಬಿಗಿದು ಕಟ್ಟಿದ್ದರು.ಕುಂತಿಬೆಟ್ಟದಲ್ಲಿರುವ ಚಿಕ್ಕಬೆಟ್ಟದಲ್ಲಿ ಹೆಬ್ಬಾರೆಗಳಿಗೆ ಹಿರೇಮರಳಿ ಗ್ರಾಮದ ಜನರು ಮೊದಲ ಪೂಜೆ ಸಲ್ಲಿಸಿದರು. ಕಾಚೇನಹಳ್ಳಿಯ ಜನರು ಪಂಜಿನ ಸೇವೆ ನಡೆಸಿಕೊಟ್ಟರು. ಕಾಚೇನಹಳ್ಳಿ ಅಮ್ಮನ ದೇವಸ್ಥಾನದ ಬಳಿ ಗಂಡು ಹೆಬ್ಬಾರೆ ಹಾಗೂ ಹೆಣ್ಣು ಹೆಬ್ಬಾರೆಗಳಿಗೆ ಹೊಂಬಾಳೆ ಮತ್ತು ಹೂವು ಮಾಲೆ ಹಾಕಿ ಶೃಂಗಾರ ಮಾಡಿ ಮದುವೆ ಮಾಡಲಾಯಿತು.ದಲಿತ ಬಸವಯ್ಯ ಗಂಡು ಹೆಬ್ಬಾರೆ ಹಾಗೂ ದಲಿತ ರಾಮಮೂರ್ತಿ ಹೆಣ್ಣು ಹೆಬ್ಬಾರೆಯನ್ನು ಹೊತ್ತು ಮೆರೆಸುತ್ತ ಮೆರವಣಿಗೆ ಸಾಗಿ ದೇವೇಗೌಡನಕೊಪ್ಪಲು ಬಳಿ ತಲುಪಿತು. ಆ ಗ್ರಾಮದ ಜನರು ಪೂಜೆ ಸಲ್ಲಿಸಿದರು.ನಂತರ ಮೆರವಣಿಗೆ ಚಿಕ್ಕಾಡೆ ಕಡೆ ಸಾಗಿತು. ರಮ್ಮನಹಳ್ಳಿಯ ಈರಮಕ್ಕಳು ಚರ್ಮದ ಚಕ್ರಾದಿ ಬಳೆ ಬಾರಿಸಿ `ಒಲಿದು ಬಾರೆ ಒಲಿದು ಬಾರೆ ತಾಯಿ ದೇವಿರಮ್ಮ ಒಲಿದು ಬಾರೆ.' ಎಂಬ ಓಲೈಸುವ ಹಾಡನ್ನು ಹಾಡಿ ಕುಣಿಯುತ್ತಿದ್ದರೆ, ಸೇರಿದ್ದ ಜನರು ಅವರ ಕುಣಿತಕ್ಕೆ ಹೆಜ್ಚೆಗಳನ್ನು ಹಾಕಿ ಕೇಕೆ ಹಾಕಿದರು.ಕೆಲವರು ಬಿರುಸಿನ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಇಡೀ ಗ್ರಾಮ ತಳಿರುತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು. ಹೆಬ್ಬಾರೆ ಉತ್ಸವ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಸ್ವಾಗತಿಸಿಕೊಂಡರು.ವಿಶ್ವಕರ್ಮ ಜನಾಂಗದವರು ಪಟಾಕಿ ಸಿಡಿಸುವ ವ್ಯವಸ್ಥೆ ಮಾಡಿದ್ದರು. ಹೆಬ್ಬಾರೆಗಳು ಗ್ರಾಮದ ರಂಗವನ್ನು ಪ್ರವೇಶಿಸಿದಾಗ ಹೆಣ್ಣುಮಕ್ಕಳು ಹಣ್ಣಿನ ತಟ್ಟೆಗಳ ಆರತಿಯನ್ನು ಬೆಳಗಿ ನಮಸ್ಕರಿಸಿಕೊಂಡರು.ರಾತ್ರಿಯಿಡಿ ನಡೆದ ಉತ್ಸವವು ಮಾರಮ್ಮ ದೇವಸ್ಥಾನ ಬಳಿ ಕೊನೆಗೊಂಡಿತು. ಮಡಿವಾಳ ಜನಾಂಗದವರು ಹೆಬ್ಬಾರೆಗಳಿಗೆ ರಕ್ಷಣೆಯಾಗಿ ನಿಂತರು. ಮಂಗಳವಾರ ಮುಂಜಾನೆ ರಂಗಕುಣಿತದೊಂದಿಗೆ ಉತ್ಸವ ಮತ್ತೆ ಪ್ರಾರಂಭವಾಯಿತು.ಹರಕೆ ಹೊತ್ತ ಭಕ್ತರು ಬೆಳ್ಳಿಯ ಬಾಯಿಬೀಗ ಹಾಕಿಕೊಂಡು ಉತ್ಸವದಲ್ಲಿ ಪಾಲ್ಗೊಂಡರು.  ಇದರೊಂದಿಗೆ ಮಕ್ಸಿರಿ ಕುಣಿತ ಉತ್ಸವಕ್ಕೆ ಮೆರಗು ನೀಡಿತು. ಅಲ್ಲಿಂದ ಹೆಬ್ಬಾರೆ ಉತ್ಸವವು ದೇವಿರಮ್ಮನ ದೇವಸ್ಥಾನ ತಲುಪಿತು. ಸಂಜೆವರೆಗೂ ನಡೆದ ದೇವಿರಮ್ಮನ ಜಾತ್ರೆಯಲ್ಲಿ ಅಪಾರ ಜನಸ್ತೋಮ ಪಾಲ್ಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry