ದೇವಿ ತೋಪು ಎಂಬ ಹಣ್ಣಿನ ತೋಟ

7

ದೇವಿ ತೋಪು ಎಂಬ ಹಣ್ಣಿನ ತೋಟ

Published:
Updated:
ದೇವಿ ತೋಪು ಎಂಬ ಹಣ್ಣಿನ ತೋಟ

ವಿದೇಶಕ್ಕೆ ಹೋಗಿ ಬಂದ ಬಹುತೇಕ ಜನರು ಅಲ್ಲಿ ದುಡಿದು ಗಳಿಸಿದ ಹಣದಿಂದ ನೆಮ್ಮದಿಯ ಜೀವನ ಮಾಡಲು ಬಯಸುತ್ತಾರೆ. ಆದರೆ ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮದ ಪುಷ್ಪ ಸುರೇಂದ್ರ ಅವರು ಇದಕ್ಕೆ ಅಪವಾದ. ಅವರು ಎಂಟು ವರ್ಷಗಳ ಕಾಲ ಹಾಂಕಾಂಗ್‌ನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಮರಳಿದ ಅವರು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ.ಪುಷ್ಪ ಕೊಡಗಿನವರು. ಅವರು ರೈತ ಕುಟುಂಬದಲ್ಲಿ ಬೆಳೆದವರು. ಹಾಂಕಾಂಗ್‌ನ ಯಾಂತ್ರಿಕ ಜೀವನದಿಂದ ಬಿಡುಗಡೆ ಬಯಸಿ ಮೈಸೂರಿಗೆ ಬಂದರು.ಹಾಂಕಾಂಗ್‌ನಲ್ಲಿರುವಾಗಲೇ ಬೇಸಾಯ ಮಾಡುವ ಕನಸು ಕಂಡಿದ್ದರು. ಯುನೆಸ್ಕೊದಲ್ಲಿ ಕೆಲಸ ಮಾಡುತ್ತಿದ್ದ ಪತಿ ಸುರೇಂದ್ರ ಅವರೊಂದಿಗೆ ಚರ್ಚಿಸಿ ಇಲವಾಲದಲ್ಲಿ ಏಳು ಎಕರೆ ಭೂಮಿ ಖರೀದಿಸಿದರು. ರಾಗಿ, ಜೋಳ ಬೆಳೆಯುತ್ತಿದ್ದ ಒಣ ಜಮೀನಿನಲ್ಲಿ ನೀರಾವರಿ ಸೌಲಭ್ಯವಿರಲಿಲ್ಲ. ಬೋರ್‌ವೆಲ್ ತೆಗೆಸಿ ಬೇಸಾಯಕ್ಕೆ ಮುಂದಾದರು. ಅವರ ಬೇಸಾಯ ಕ್ಷೇತ್ರದ ಹೆಸರು `ದೇವಿ ತೋಪು~. ಅಲ್ಲಿ ದೇಶಿ ಹಾಗೂ ವಿದೇಶಿ  ಹಣ್ಣಿನ ಬೆಳೆಗಳನ್ನು ಬೆಳೆದಿದ್ದಾರೆ.ದೇವಿ ತೋಪು ಫಾರಂನಲ್ಲಿ 540 ಸಪೋಟ, 260 ತೆಂಗು, 32 ದಾಳಿಂಬೆ, 120 ಡ್ರಾಗನ್ ಹಣ್ಣಿನ ಗಿಡಗಳಿವೆ. 50 ಕಾಳು ಮೆಣಸು ಬಳ್ಳಿಗಳು ಸೇರಿದಂತೆ ಮಾವು, ಹಲಸು, ಪಪ್ಪಾಯಿ, ಬಾಳೆ, ಸೀತಾಫಲ, ನಿಂಬೆ ಮತ್ತಿತರ ಹಣ್ಣಿನ ಮರಗಳಿವೆ.ವಿವಿಧ ಜಾತಿಯ ಅಲಂಕಾರಿಕ ಹೂ ಗಿಡಗಳು, ಔಷಧಿ ಸಸ್ಯಗಳೂ ಇವೆ. ಸಪೋಟ, ತೆಂಗು ಮುಖ್ಯ ಬೆಳೆಯಾದರೂ ಮಿಶ್ರ ಬೇಸಾಯದ ಮೂಲಕ ನಿರಂತರ ಆದಾಯ ಪಡೆಯುತ್ತಿದ್ದಾರೆ.

ವರ್ಷಕ್ಕೆ ಸುಮಾರು 13 ಟನ್ ಸಪೋಟ ಹಣ್ಣು ಬೆಳೆಯುತ್ತಾರೆ. ಮೈಸೂರಿನ ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆಗಳ ಮೂಲಕ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ.ತೆಂಗಿನ ಮರಗಳ ನಡುವೆ ಸಾಕಷ್ಟು ಅಂತರ ನೀಡಿ ಸಪೋಟ ಗಿಡಗಳನ್ನು ಬೆಳೆಸಿದ್ದಾರೆ. ಅವರು ತೋಟಕ್ಕೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವುದಿಲ್ಲ. ಹನಿ ನೀರಾವರಿ ಅಳವಡಿಸಿಕೊಂಡು ನೀರನ್ನು ಮಿತವಾಗಿ ಬಳಸಿ ಬೆಳೆ ಬೆಳೆಯುವುದು ಪುಷ್ಪ ಅವರ ಬೇಸಾಯದ ವೈಶಿಷ್ಟ್ಯ. ಮಳೆ ನೀರು ಭೂಮಿಯಲ್ಲಿ ಹಿಂಗಿಸಲು ಅಲ್ಲಲ್ಲಿ ಎರಡು ಅಡಿ ಆಳದ ಸುಮಾರು 50ಕ್ಕೂ ಹೆಚ್ಚು ಗುಂಡಿಗಳನ್ನು ತೋಡಿದ್ದಾರೆ. ತೋಟದ ಕೊಳವೆ ಭಾವಿಗೆ ಮಳೆಯ ನೀರಿನ ಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ.ತೋಟದ ಸುತ್ತ ಪರಿಸರ ಸ್ನೇಹಿ ಬೇಲಿ ಬೆಳೆಸಿದ್ದಾರೆ.  ಕಳೆ ಸಸ್ಯಗಳನ್ನು ನಿಯಂತ್ರಿಸಲು  ವಿದೇಶದಿಂದ ತಂದ ಸ್ಟೈಲೋ ಹಮಾಟಾ, ಮಿಮೊಸಾ ಇಲಮುಜ (ನಾಚಿಕೆ ಮುಳ್ಳಿನ ಜಾತಿಯ) ಸಸ್ಯಗಳನ್ನು ಬೆಳೆಸಿದ್ದಾರೆ. ಇವುಗಳನ್ನು ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸುತ್ತಾರೆ. ತೋಟದ ನಾಲ್ಕು ಮೂಲೆಗಳಲ್ಲಿ ಗೊಬ್ಬರ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಗೊಬ್ಬರದ ಗಿಡಗಳ ಹಾಗೂ ಕೃಷಿ ತ್ಯಾಜ್ಯಗಳನ್ನು ತೊಟ್ಟಿಗೆ ಹಾಕಿ ಸಗಣಿ ಅಥವಾ ಕುರಿ ಹಿಕ್ಕೆ ಮಿಶ್ರಮಾಡಿ ಅದಕ್ಕೆ ನೀರು ಬಿಟ್ಟು ಕೊಳೆಸಿ ಗೊಬ್ಬರ ಮಾಡಿ ಬಳಸುತ್ತಾರೆ.ಪುಷ್ಪ ಅವರ ತೋಟದಲ್ಲಿ ಬೆಳೆಯುವ  ಮಲೇಷಿಯಾದ ಡ್ರ್ಯಾಗನ್ ಹಣ್ಣುಗಳಿಗೆ ರಾಜ್ಯದಲ್ಲಿ ಬೇಡಿಕೆ ಇದೆ. ಅವರ ತೋಟದಲ್ಲಿ 120 ಡ್ರ್ಯಾಗನ್ ಹಣ್ಣಿನ ಗಿಡಗಳಿವೆ. ಪುಷ್ಪ ಅವರೂ ತೋಟದಲ್ಲಿ ದುಡಿಯುತ್ತಾರೆ. ಅವರ ಮೊಬೈಲ್ ನಂಬರ್ - 08212402558

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry