ದೇವೇಗೌಡರಿಂದ ಉಪವಾಸ ಸತ್ಯಾಗ್ರಹ

7

ದೇವೇಗೌಡರಿಂದ ಉಪವಾಸ ಸತ್ಯಾಗ್ರಹ

Published:
Updated:
ದೇವೇಗೌಡರಿಂದ ಉಪವಾಸ ಸತ್ಯಾಗ್ರಹ

ಹಾಸನ: ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ  ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು.ಮುಂಜಾನೆ 9.30 ರಿಂದ ಸಂಜೆ 5 ಗಂಟೆ ವರೆಗೆ ಪ್ರತಿಭಟನೆ ನಡೆಸಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜೂನ್ 27 ರಂದು  ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ಮನೆ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದರು.ಜಿಲ್ಲೆಯಿಂದ ಆಯ್ಕೆಯಾಗಿರುವ ಜೆಡಿಎಸ್‌ನ ಎಲ್ಲ ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರ ಸಭೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 9.30ಕ್ಕೆ ಪ್ರತಿಭಟನೆ ಆರಂಭಿಸಿದ ದೇವೇಗೌಡರು  ನೀರನ್ನೂ ಸಹ ಕುಡಿಯದೆ ಸಂಜೆ 5ಗಂಟೆ ವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಕಿದ್ದ ಶಾಮಿಯಾನದಲ್ಲಿ ಕುಳಿತಿದ್ದರು.`ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಲದಲ್ಲಿ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಕಟ್ಟಡಗಳನ್ನು ನಿರ್ಮಿಸಿರುವ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಕೆಲವು ಗುತ್ತಿಗೆದಾರರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ.

 

ಸರ್ಕಾರ ನರ್ಸಿಂಗ್ ಕಾಲೇಜು ಮುಚ್ಚುವ ಹುನ್ನಾರ ನಡೆಸಿದೆ. ತಾವು ಪ್ರಧಾನಿಯಾಗಿದ್ದಾಗ ಹಾಸನದ ವಿಮಾನ ನಿಲ್ದಾಣಕ್ಕಾಗಿ 500 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಿದ್ದೆ. ವಿಮಾನ ನಿಲ್ದಾಣ ಕಾಮಗಾರಿಯನ್ನು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದೆ. ಆಲೂಗೆಡ್ಡೆ ಬೆಳೆದ ರೈತರು ಕಳೆದ ನಾಲ್ಕು ವರ್ಷಗಳಿಂದ ಸುಮಾರು 250 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಅವರಿಗೆ ಇನ್ನೂ ಪರಿಹಾರ ನೀಡಿಲ್ಲ. ಬೆಂಗಳೂರು- ಮಂಗಳೂರು ರೈಲು ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ತಡೆ ನೀಡಿಲಾಗಿದೆ. ಜಿಲ್ಲೆಗೆ ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಬರಬೇಕಾಗಿದ್ದ ಹಣವನ್ನೂ ತಡೆ ಹಿಡಿದಿದ್ದಾರೆ~ ಎಂದು ದೇವೇಗೌಡ ಆರೋಪಿಸಿದರು.`ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಡಿಯೂರಪ್ಪ ಅವರಿಗೆ ಹಲವು ಪತ್ರಗಳನ್ನು ಬರೆದರೂ ಅದಕ್ಕೆ ಉತ್ತರಿಸುವ ಸೌಜನ್ಯವನ್ನೂ ಅವರು ತೋರಿಸಿಲ್ಲ. ಇದಕ್ಕೆ ಸೇಡಿನ ರಾಜಕೀಯ ಎನ್ನದೆ ವಿಧಿ ಇಲ್ಲ. ಸರ್ಕಾರಕ್ಕೆ ನಾಲ್ಕು ದಿನಗಳ ಗಡುವು ನೀಡುತ್ತಿದ್ದೇವೆ. ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲ. ಆದರೂ ಅಗತ್ಯಬಿದ್ದರೆ 27ರಿಂದ ಎರಡು ಮೂರು ದಿನಗಳ ಕಾಲ ಸಿಎಂ ಮನೆ ಮುಂದೆ ಉಪವಾಸ ನಡೆಸಲೂ ಸಿದ್ಧ~ ಎಂದರು.`ಖುದ್ದಾಗಿ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮಾಡುತ್ತೇನೆ ಉಪವಾಸ ಕೈಬಿಡಬೇಕು~ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ ಎಂಬ ವಿಚಾರವನ್ನು ಮಧ್ಯಾಹ್ನದ ವೇಳೆಗೆ ಮಾಧ್ಯಮಗಳ ಮೂಲಕ ತಿಳಿದ ದೇವೇಗೌಡರು, `ಈ ಬಗ್ಗೆ ಲಿಖಿತ ಹೇಳಿಕೆ ನೀಡಿ ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಅಥವಾ ಫ್ಯಾಕ್ಸ್ ಮೂಲಕ ಕಳುಹಿಸಿ. ಈ ರೀತಿಯ ಭರವಸೆ ಬಂದ ಕೂಡಲೇ ಉಪವಾಸ ಕೈಬಿಡುತ್ತೇನೆ~ ಎಂದರು.ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಕೆ. ಕುಮಾರಸ್ವಾಮಿ, ಎಚ್. ಎಸ್. ಪ್ರಕಾಶ್, ಕೆ.ಎಂ. ಶಿವಲಿಂಗೇಗೌಡ ಸಿ.ಎಸ್. ಪುಟ್ಟೇಗೌಡ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕರು, ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ವೇಳೆಗೆ ಜೆಡಿಎಸ್ ಮುಖಂಡರಾದ ವೈ.ಎಸ್.ವಿ ದತ್ತ, ಬಸವನಗೌಡ ಪಾಟೀಲ ಯತ್ನಾಳ, ಮಧು ಬಂಗಾರಪ್ಪ ಮುಂತಾದವರೂ ಬಂದು ಸೇರಿಕೊಂಡರು. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಸಂಜೆ ಐದು ಗಂಟೆಗೆ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.

 

ಹಾಸನಕ್ಕೆ ಖುದ್ದು ಭೇಟಿ: ಸಿಎಂ

ಬೆಂಗಳೂರು: ಹಾಸನ ಜಿಲ್ಲೆಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಕಚೇರಿ `ಕೃಷ್ಣಾ~ದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಮೂರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಡೆಸಿದ ಒಂದು ದಿನದ ಉಪವಾಸ ಸತ್ಯಾಗ್ರಹದ ಕುರಿತು ಈ ರೀತಿ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry