`ದೇವೇಗೌಡರಿಗೆ ದಲಿತರ ಏಳಿಗೆ ಬೇಕಿಲ್ಲ'

7

`ದೇವೇಗೌಡರಿಗೆ ದಲಿತರ ಏಳಿಗೆ ಬೇಕಿಲ್ಲ'

Published:
Updated:

ಕೊಪ್ಪಳ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ದಲಿತರ ಏಳಿಗೆ ಬಗ್ಗೆ ಕಾಳಜಿಯಿಲ್ಲ. ಅವರದು ಬರೀ ಮೊಸಳೆ ಕಣ್ಣೀರು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ವೀರಪ್ಪ ಮೊಯಿಲಿ ಟೀಕಿಸಿದರು.ಭಾನುವಾರ ಇಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ನೌಕರಿ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕ ಮಂಡನೆ ಮಾಡುವ ಸಂದರ್ಭದಲ್ಲಿ  ಸಚಿವ ನಾರಾಯಣ ಸ್ವಾಮಿ ಅವರಿಂದ ವಿಧೇಯಕದ ಪ್ರತಿಯನ್ನು ಸಮಾಜವಾದಿ ಪಕ್ಷದ ಸಂಸದರೊಬ್ಬರು ಕಸಿದುಕೊಂಡಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅದನ್ನು ತಡೆದರು. ಆದರೆ, ಎದುರಿನಲ್ಲಿಯೇ ಕುಳಿತಿದ್ದ ಮಾಜಿ ಪ್ರಧಾನಿ ದೇವೇಗೌಡರು ಏನೂ ಮಾತನಾಡಲಿಲ್ಲ. ಪ್ರತಿಭಟಿಸಲೂ ಇಲ್ಲ. ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕು ಎಂಬ ಧೈರ್ಯ ಅವರಲ್ಲಿ ಇಲ್ಲ ಎಂದು ಟೀಕಿಸಿದರು.ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು ಹೆಚ್ಚಿಸುವ ವಿಷಯದಲ್ಲಿಯೂ ದೇವೇಗೌಡರು ರಾಜ್ಯದ ಹಿತಾಸಕ್ತಿ ಕಾಪಾಡಲಿಲ್ಲ. ತಾವು ಪ್ರಧಾನಿ ಆಗಬೇಕು ಎಂಬ ದೃಷ್ಟಿಯಿಂದ ಎತ್ತರವನ್ನು 519 ಮೀಟರ್‌ಗೆ ಸೀಮಿತಗೊಳಿಸಿದರು. ಆದರೆ ಈಚೆಗೆ ಕೃಷ್ಣಾ ನೀರು ನ್ಯಾಯಾಧಿಕರಣವು 524 ಮೀಟರ್ ಗೆ ಎತ್ತರ ಹೆಚ್ಚಿಸುವ ರಾಜ್ಯದ ನಿಲುವನ್ನು ಎತ್ತಿ ಹಿಡಿಯಿತು. ಈ ಅಣೆಕಟ್ಟೆಯ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸುವ ನಿರ್ಧಾರವನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದೆ. ಅದನ್ನೇ ಈಗ ನ್ಯಾಯಾಧಿಕರಣ ಪುರಸ್ಕರಿಸಿದೆ ಎಂದು ಹೇಳಿದರು.ರಾಜ್ಯದ ರೈತರ ಮತ್ತು ದಲಿತರ ವಿರೋಧಿಯಾಗಿರುವ ಇವರಿಗೆ ಬೇರೆ ಶಿಕ್ಷೆ ಬೇಡ. ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವುದೇ ಸರಿಯಾದ ಶಿಕ್ಷೆಯಾಗಲಿದೆ ಎಂದು ಹೇಳಿದರು.ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳಿಗೆ ಟಿಕೆಟ್:  ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ಹಾಗೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯಲಿದೆ ಎಂದು ಹೇಳಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗೆಲ್ಲುವ ಸಾಮರ್ಥ್ಯವೊಂದೇ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡವಲ್ಲ. ಭ್ರಷ್ಟಾಚಾರ ಆರೋಪ ಇರಬಾರದು. ಸ್ವಜನ ಪಕ್ಷಪಾತದಲ್ಲಿ ತೊಡಗಿರುವವರಿಗೆ ಸಹ ಟಿಕೆಟ್ ನೀಡುವುದಿಲ್ಲ. ಅದರಲ್ಲೂ ಆಪರೇಷನ್ ಕಮಲಕ್ಕೆ ಒಳಗಾಗಿರುವವರನ್ನು ಸಹ ಟಿಕೆಟ್ ನೀಡುವಾಗ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.`ಕಾಂಗ್ರೆಸ್ ನಾಯಕತ್ವದಲ್ಲಿ'ಯೇ ಮುಂದಿನ ಚುನಾವಣೆಯನ್ನು ಎದುರಿಸಲಾಗುವುದು. ಅಲ್ಲದೇ, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸಹ ಈಗಲೇ ಘೋಷಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry