ಗುರುವಾರ , ನವೆಂಬರ್ 14, 2019
19 °C

ದೇವೇಗೌಡರ ಪ್ರವಾಸ ಅಧ್ಯಯನಕ್ಕೊ? ಸಾಕ್ಷ್ಯಚಿತ್ರಕ್ಕೊ?

Published:
Updated:

ಮಂಡ್ಯ: ರಾಜ್ಯದಲ್ಲಿನ ಎಲ್ಲ ಜಲಾಶಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರೈತರ ಸಮಸ್ಯೆಗಳನ್ನು ಅರಿಯಲು ಪ್ರವಾಸ ಮಾಡುತ್ತಿದ್ದಾರೋ ಅಥವಾ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಸಾಕ್ಷ್ಯಚಿತ್ರಕ್ಕಾಗಿ ಪ್ರವಾಸ ಮಾಡುತ್ತಿದ್ದಾರೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.ದೇವೇಗೌಡರು ಬೆಳಗಾವಿ ಜಿಲ್ಲೆಯ ನವಿಲುತೀರ್ಥ ಅಣೆಕಟ್ಟೆಗೆ ಸೋಮವಾರ ಭೇಟಿ ನೀಡಿದ್ದಾಗ ಹಾಗೂ ಮಂಡ್ಯದ ಕೆಆರ್‌ಎಸ್ ಅಣೆಕಟ್ಟೆಗೆ  ಮಂಗಳವಾರ ಭೇಟಿ ನೀಡಿದ್ದ ವೇಳೆಯೂ ನಾಗತಿಹಳ್ಳಿಯವರ ಚಿತ್ರೀಕರಣ ತಂಡ ಹಾಜರಿರುವುದು ಇಂಥ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.'ಕೆಆರ್‌ಎಸ್ ಅಣೆಕಟ್ಟೆಯ ಪ್ರದೇಶದಲ್ಲಿ ಚಿತ್ರೀಕರಣಕ್ಕಾಗಿ ಮಂಡ್ಯದ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಂಡಿದೆ. ಅಲ್ಲಿ ಏನು ಚಿತ್ರೀಕರಣ ಮಾಡಿದ್ದಾರೆ ಎಂಬ ಮಾಹಿತಿ ನಮಗಿಲ್ಲ' ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿದ್ದಾಗ ರಾಜ್ಯದಲ್ಲಿ ಜಾರಿಗೊಳಿಸಿದ ನೀರಾವರಿ ಯೋಜನೆಗಳು ಹಾಗೂ ಕಾವೇರಿ ವಿವಾದ ಸೇರಿದಂತೆ ನೀರಿನ ಉಳಿವಿಗಾಗಿ ನಡೆಸಿದ ಹೋರಾಟ ಕುರಿತು ಸಾಕ್ಷ್ಯಚಿತ್ರ ಮಾಡಲಾಗುತ್ತಿದೆ.

ಅಣೆಕಟ್ಟೆ ಮಧ್ಯ ಭಾಗದಲ್ಲಿ ದೇವೇಗೌಡ ಅವರು ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಸಂಭಾಷಣೆ ಓದುತ್ತಾ ಸಾಗಿದರು. ಅದನ್ನು ತಂಡ ಕ್ಯಾಮೆರಾದಲ್ಲಿ ಸೆರೆ ಹಿಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ನಾಗತಿಹಳ್ಳಿ ಅವರು ನಿರ್ಮಿಸುತ್ತಿರುವ ಸಾಕ್ಷ್ಯಚಿತ್ರವನ್ನು ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ನೀರಿನ ರಾಜಕೀಯ: 2012ರ ಅಕ್ಟೋಬರ್ ಹಾಗೂ ನಂತರದ ತಿಂಗಳುಗಳಲ್ಲಿ ಕಾವೇರಿ ವಿವಾದ ಭುಗಿಲೆದ್ದಿತ್ತು. ಕಾವೇರಿ ಕಣಿವೆಯಲ್ಲಿ ತೀವ್ರವಾದ ಹೋರಾಟವೂ ನಡೆದಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಕಾವೇರಿ ವಿವಾದ ಕುರಿತಂತೆ ಚರ್ಚಿಸಲು ಪ್ರಧಾನಮಂತ್ರಿಯನ್ನು ಭೇಟಿಯಾಗಿದ್ದಾರಲ್ಲದೆ, ಸಂಸತ್ತಿನಲ್ಲಿಯೂ ವಿಷಯವನ್ನು ಪ್ರಸ್ತಾಪಿಸಿದ್ದರು.ಕಾವೇರಿ ವಿವಾದದ ಲಾಭ ಪಡೆಯಲು ಸದಾ ರಾಜಕೀಯ ಪಕ್ಷಗಳು ಯತ್ನಿಸುತ್ತಾ ಬಂದಿವೆ. ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ರಾಜಕೀಯ ನಾಯಕರನ್ನು ವೇದಿಕೆ ಏರಲು ಬಿಟ್ಟಿರಲಿಲ್ಲ. ಯಾವ ಪಕ್ಷಗಳೂ ತಮಗೆ ನ್ಯಾಯ ಕೊಡಿಸುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಸಾರ್ವಜನಿಕರ ಆಕ್ರೋಶವು ಮತಗಟ್ಟೆಯವರೆಗೂ ಹೋದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಅರಿತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ನೀರಿಗಾಗಿ ನಡೆಸಿದ ಹೋರಾಟವನ್ನು ಸಾಕ್ಷ್ಯಚಿತ್ರ ಮಾಡಿಸುತ್ತಿದ್ದು, ಅದನ್ನು ಚುನಾವಣೆ ವೇಳೆ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ ಎಂದು ತಿಳಿದುಬಂದಿದೆ.ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಪಕ್ಷಗಳು ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿವೆ. ಸುಪ್ರೀಂಕೋರ್ಟ್‌ನಲ್ಲಿಯೂ ಸರಿಯಾಗಿ ವಾದ ಮಂಡಿಸಿಲ್ಲ. ಪರಿಣಾಮ ತೀವ್ರ ಬರಗಾಲ ಎದುರಿಸುತ್ತಿದ್ದೇವೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಣಸಾಲೆ ನರಸರಾಜು.

ಪ್ರತಿಕ್ರಿಯಿಸಿ (+)