ಭಾನುವಾರ, ಮೇ 9, 2021
18 °C

ದೇವೇಗೌಡರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಮೀನು ಒತ್ತುವರಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಕುಟುಂಬದ ಇತರ ಹಲವರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡದೇ ಇರುವುದನ್ನು ಪ್ರಶ್ನಿಸಿ ವಕೀಲ ವಿನೋದ್‌ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ದೇವೇಗೌಡ, ಅವರ ಪುತ್ರರಾದ ಎಚ್,ಡಿ. ರೇವಣ್ಣ, ಎಚ್.ಡಿ. ಬಾಲಕೃಷ್ಣೇಗೌಡ, ಸೊಸೆಯಂದಿರಾದ ಭವಾನಿ ಹಾಗೂ ಕವಿತಾ ಅವರಿಗೆ ಸಮನ್ಸ್ ಜಾರಿ ಮಾಡುವ ಅಗತ್ಯ ಇಲ್ಲ ಎಂದು ವಿಶೇಷ ಕೋರ್ಟ್ ಹೊರಡಿಸಿರುವ ಆದೇಶ ರದ್ದತಿಗೆ ಅವರು ಕೋರಿದ್ದಾರೆ.ದೇವೇಗೌಡ ಅವರು ಹೊಳೆನರಸೀಪುರದ ವಿವಿಧ ಗ್ರಾಮಗಳಲ್ಲಿ ಸುಮಾರು 82 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳು ನಡೆಸಿದ ತನಿಖೆಯಿಂದ ಈ ಅಕ್ರಮ ಬಹಿರಂಗಗೊಂಡಿದೆ.ಅದೇ ರೀತಿ ಇತರ ಆರೋಪಿಗಳು ಸಾಕಷ್ಟು ಜಮೀನು ಒತ್ತುವರಿ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ತಾವು ಸೂಕ್ತ ದಾಖಲೆಗಳನ್ನು ನೀಡಿದ್ದರೂ ಅದನ್ನು ವಿಶೇಷ ಕೋರ್ಟ್ ಮಾನ್ಯ ಮಾಡಿಲ್ಲ ಎನ್ನುವುದು ವಿನೋದ್ ಅವರ ದೂರು.ಇದೇ ದೂರಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಮಾತ್ರ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.ಎಚ್‌ಡಿಕೆ ಅರ್ಜಿ: ಇದೇ ಪ್ರಕರಣದಲ್ಲಿ, ತಮಗೆ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಕುಮಾರಸ್ವಾಮಿ ದಂಪತಿ ಹೈಕೋರ್ಟ್‌ಗೆ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ.ವಿನೋದ್‌ಕುಮಾರ್ ನೀಡಿರುವ ದೂರಿನಲ್ಲಿ ಸತ್ಯಾಂಶ ಇಲ್ಲ ಎಂಬ ಕಾರಣದಿಂದ ವಿಶೇಷ ಕೋರ್ಟ್ ದೇವೇಗೌಡ ಹಾಗೂ ಇತರರ ವಿರುದ್ಧದ ದೂರನ್ನು ರದ್ದು ಮಾಡಿದೆ. ಆದರೆ ಉದ್ದೇಶಪೂರ್ವಕವಾಗಿ ತಮಗಷ್ಟೇ ಸಮನ್ಸ್ ಜಾರಿ ಮಾಡಲಾಗಿದೆ ಎನ್ನುವುದು ಅವರ ದೂರು. ಎರಡೂ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ಅ.17ರಿಂದ ಕೈಗೆತ್ತಿಕೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.