ಶುಕ್ರವಾರ, ಏಪ್ರಿಲ್ 23, 2021
31 °C

ದೇವೇಗೌಡ, ಕೃಷ್ಣ, ಬಿಎಸ್‌ವೈ ಮೇಲೆ ಎಫ್‌ಐಆರ್ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಹಾಗೂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ 30 ಜನರ ವಿರುದ್ಧ ಲೋಕಾಯುಕ್ತ ಪೊಲೀಸರು ಶನಿವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.ಪ್ರಕರಣದ ವಿಷಯವಾಗಿ ಸಿಆರ್‌ಪಿಸಿ ಕಲಂ 156 (3)ರ ಅಡಿಯಲ್ಲಿ ತನಿಖೆ ನಡೆಸುವಂತೆ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್. ಸತ್ಯನಾರಾಯಣ ರಾವ್ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಕಳೆದ ತಿಂಗಳು ಆದೇಶ ನೀಡಿದ್ದರು.ಏಕಕಾಲಕ್ಕೆ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಬಿಎಂಐಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್   (ನೈಸ್) ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ, ನಿರ್ದೇಶಕ ಬಾಬಾ ಕಲ್ಯಾಣಿ, ಸಚಿವ ಸಿ.ಎಂ. ಉದಾಸಿ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಇಲಾಖೆ ಅಂದಿನ ಕಾರ್ಯದರ್ಶಿ ಸಿ.ಆರ್. ರಮೇಶ್ ಅವರ ಹೆಸರುಗಳೂ ಎಫ್‌ಐಆರ್‌ನಲ್ಲಿ ಸೇರಿವೆ.`ನ್ಯಾಯಾಲಯದ ನಿರ್ದೇಶನಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು, ತನಿಖೆ ನಡೆಸಿ, ಎಫ್‌ಐಆರ್ ದಾಖಲಿಸಲು ಕಾಲಾವಕಾಶ ಬೇಕಾಯಿತು~ ಎಂದು ಸತ್ಯನಾರಾಯಣ ರಾವ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.`ಪ್ರಕರಣದ ತನಿಖೆಗೆ ಡಿವೈಎಸ್‌ಪಿ ಡಿ. ಫಾಲಾಕ್ಷಯ್ಯ (ಬೆಂಗಳೂರು ನಗರ) ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಮತ್ತಿಬ್ಬರು ಡಿವೈಎಸ್‌ಪಿಗಳಾದ ಬಿ.ಲೋಕೇಶ್ (ಬೆಂಗಳೂರು ಗ್ರಾಮಾಂತರ), ಸಯ್ಯದ್ ನಿಜಾಮುದ್ದೀನ್ (ರಾಮನಗರ) ಮತ್ತು ಮೂವರು ಇನ್ಸ್‌ಪೆಕ್ಟರ್‌ಗಳು ಈ ತಂಡದಲ್ಲಿದ್ದಾರೆ~ ಎಂದು ಅವರು ಹೇಳಿದರು.ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ 1995ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರ ಮತ್ತು ನೈಸ್ ಸಂಸ್ಥೆ ನಡುವೆ ಒಪ್ಪಂದ ಆಗಿತ್ತು. `ಮೂಲ ಒಪ್ಪಂದದ ಷರತ್ತುಗಳಂತೆ ರಸ್ತೆ ನಿರ್ಮಿಸದೆ ಅಕ್ರಮ ಎಸಗಲಾಗಿದ್ದು, 102 ಜನರ ವಿರುದ್ಧ ತನಿಖೆಗೆ ಆದೇಶಿಸಬೇಕು~ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.`ಖೇಣಿ ಮತ್ತು ಕಲ್ಯಾಣಿ ಅವರ ಹಣಕಾಸಿನ ಸಾಮರ್ಥ್ಯವನ್ನು ಪರಿಶೀಲಿಸದೆ ಅವರ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ದೇವೇಗೌಡರು 4,285 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ನೈಸ್ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ~ ಎಂಬ ಆರೋಪವನ್ನೂ ಅಬ್ರಹಾಂ ಮಾಡಿದ್ದರು.`ಬಿಎಂಐಸಿ ಯೋಜನೆಯ ರಸ್ತೆಗಳಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಎಲ್ಲ ಶುಲ್ಕವನ್ನು ಮುಟ್ಟಗೋಲು ಹಾಕಿಕೊಳ್ಳಬೇಕು~ ಎಂದೂ ನ್ಯಾಯಾಲಯ ಈ ಹಿಂದೆಯೇ 590 ಪುಟಗಳ ಸುದೀರ್ಘ ಆದೇಶದಲ್ಲಿ ಸೂಚನೆ ನೀಡಿತ್ತು.

ಯಾವ ಕಲಂ?

ಬೆಂಗಳೂರು: ಲೋಕಾಯುಕ್ತ ಪೊಲೀಸರು ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ 30 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಐಪಿಸಿ 119 (ಅಪರಾಧ ಕೃತ್ಯ ಮುಚ್ಚಿಡಲು ಸರ್ಕಾರಿ ಅಧಿಕಾರಿಯಿಂದ  ಸಂಚು), 120 (ಒಳಸಂಚು), 167, 197 (ಸುಳ್ಳು ದಾಖಲೆ ಸೃಷ್ಟಿ), 218 (ಜಮೀನು ಕಬಳಿಕೆಗಾಗಿ ಖೊಟ್ಟಿ ದಾಖಲೆ ಸೃಷ್ಟಿ), 403 (ದುರುದ್ದೇಶದಿಂದ ಜಮೀನು ದುರ್ಬಳಕೆ), 405 (ನಂಬಿಕೆ ದ್ರೋಹ), 420 (ವಂಚನೆ), 463 (ಫೋರ್ಜರಿ), 468 (ವಂಚಿಸುವ ಉದ್ದೇಶದಿಂದ ಫೋರ್ಜರಿ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲೂ ಅವರ ಮೇಲೆ ಆರೋಪ ಹೊರಿಸಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.