ಶನಿವಾರ, ಜೂನ್ 19, 2021
24 °C

ದೇಶಕ್ಕಾಗಿ ಮಡಿದ ಪ್ರತಿ ಯೋಧ ಸ್ಮರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶಕ್ಕಾಗಿ ಮಡಿದ ಪ್ರತಿ ಯೋಧ ಸ್ಮರಣೀಯ

ಬೆಂಗಳೂರು: `ದೇಶಕ್ಕಾಗಿ ಮಡಿದ ಪ್ರತಿಯೊಬ್ಬ ಯೋಧನು ಪ್ರಾತಃಸ್ಮರಣೀಯ. ಯೋಧರ ಕುಟುಂಬದವರನ್ನು ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ~ ಎಂದು ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ಎಂ.ಆರ್.ದೊರೆಸ್ವಾಮಿ ಹೇಳಿದರು.ಸಮರ್ಪಣ ತಂಡವು ನಗರದ ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ದೇಶಕ್ಕಾಗಿ ಮಡಿದ ವೀರಯೋಧರ ಕುಟುಂಬದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಯೋಧರ ಕುಟುಂಬದ ಸದಸ್ಯರಿಗೆ ವಿದ್ಯಾರ್ಥಿಗಳಿಂದ 1.50 ಲಕ್ಷ ರೂಪಾಯಿ ಮತ್ತು ಕಾಲೇಜು ವತಿಯಿಂದ 2 ಲಕ್ಷ ರೂಪಾಯಿ ಹಣವನ್ನು ಸಂಗ್ರಹಿಸಲಾಗಿದ್ದು, ಸಂಕಷ್ಟದಲ್ಲಿರುವ ಯೋಧ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುವುದು~  ಎಂದು ತಿಳಿಸಿದರು.ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ `ದೂರದೃಷ್ಟಿ ಕೊರತೆಯಿಂದ ರಾಷ್ಟ್ರನಿರ್ಮಾಣದ ವಿಚಾರದಲ್ಲಿ ಹಿಂದಿದ್ದೇವೆ. ಈ ಬಗ್ಗೆ ಯುವ ಜನಾಂಗವು ಗಮನ ಹರಿಸುವ ಅಗತ್ಯವಿದೆ~ ಎಂದು  ತಿಳಿಸಿದರು.`ಸ್ವಾತಂತ್ರ್ಯ ಪಡೆದುಕೊಂಡು 65 ವರ್ಷ ಆದರೂ ಕಲಿತಿದ್ದು ಶೂನ್ಯ. ಒಂದೆಡೆ ಕೋಮುಗಲಭೆ ಮತ್ತೊಂದೆಡೆ ಭಯೋತ್ಪಾದನೆಯಂತಹ  ಸಮಸ್ಯೆಗಳು ದೇಶವನ್ನು ಅತಂತ್ರ ಸ್ಥಿತಿಗೆ ತಂದಿವೆ. 1861ರ ಸಂದರ್ಭದಲ್ಲಿ ಜನಿಸಿದ್ದ ಮಹಾನ್ ಪ್ರತಿಭಾವಂತ ಸರ್.ಎಂ. ವಿಶ್ವೇಶ್ವರಯ್ಯ ಒಂದೊಮ್ಮೆ 1961ರ ಸಂದರ್ಭದಲ್ಲಿ ಜನಿಸಿದ್ದರೆ,  ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಥಾನದಲ್ಲಿ ಇರುತ್ತಿತ್ತಿದ್ದರು~ ಎಂದು ಹೇಳಿದರು.ಕರ್ನಲ್ ವಸಂತ ಅವರ ಪತ್ನಿ ಸುಭಾಷಿಣಿ ವಸಂತ್, `ಇಂದು ಯೋಧರ ಕುಟುಂಬವನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. 60 ವರ್ಷಗಳ ಹಿಂದೆ ಯೋಧರು ಮತ್ತು ಅವರ ಕುಟುಂಬಕ್ಕೆ ನೀಡುತ್ತಿದ್ದ ಗೌರವವು ಇಂದು ಇಲ್ಲದಂತಾಗಿದೆ. ಕರ್ತವ್ಯಪಾಲನೆಯಲ್ಲಿ ಯೋಧ ತೆಗೆದುಕೊಳ್ಳುವ ಮಹೋನ್ನತ ಹೆಜ್ಜೆಯೆಂದರೆ  ಪ್ರಾಣ ತ್ಯಾಗ~ ಎಂದು ಬಣ್ಣಿಸಿದರು.ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಒಟ್ಟು ಇಪ್ಪತ್ತಾರು ಯೋಧ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಯೋಧನನ್ನು ಕಳೆದುಕೊಂಡ  ಕುಟುಂಬ ಸದಸ್ಯರ ನೋವಿನ ಕಥೆಯುಳ್ಳ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಪಿಎಎಸ್ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸ್ಪುರಿಸುವ ಗೀತೆಯೊಂದಕ್ಕೆ ಹೆಜ್ಜೆ ಹಾಕಿದರು.ಆಟವಾಡುವ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡೆ...ದೇಶ ಸೇವೆಯೇ ಈಶ ಸೇವೆ ಎಂದು ಹೊರಟ ಯೋಧ ಹನುಮಯ್ಯ ಅವರು ಅಗಲಿದ ಕತೆಯನ್ನು ಪತ್ನಿ ವೆಂಕಟಮ್ಮ (85) ಅವರು ಕಣ್ತುಂಬಿಕೊಂಡೇ `ಪ್ರಜಾವಾಣಿ~ಯೊಂದಿಗೆ  ಹಂಚಿಕೊಂಡರು.

`ಅನಕ್ಷರಸ್ಥೆಯಾದ ನಾನು ಮದುವೆ ಎಂದರೆ ಏನೆಂಬುದರ ಅರ್ಥವೇ ಗೊತ್ತಿಲ್ಲದಿರುವಾಗ ಅಂದರೆ 9ನೇ ವಯಸ್ಸಿಗೆ ಯೋಧ ಹನುಮಯ್ಯ ಅವರನ್ನು ಮದುವೆಯಾದೆ. ಆಗ ಅವರಿಗಿನ್ನೂ 20 ವಯಸ್ಸು ಇದ್ದಿರಬಹುದು.ಎರಡನೇ ಮಹಾಯುದ್ದದಲ್ಲಿ ಗಂಡನನ್ನು ಕಳೆದುಕೊಂಡೆ. ಆಗ ಮದುವೆಯಾಗಿ 3 ತಿಂಗಳಾಗಿತ್ತು. `ಇನ್ನು ಆಟ ಆಡುವ ವಯಸ್ಸಿನಲ್ಲೇ ಇದ್ದ ನನಗೆ ಗಂಡ ಮತ್ತು ಆತನ ಸಾವಿನ ತೀವ್ರತೆ ಅರ್ಥವಾಗಿರಲಿಲ್ಲ. ಆದರೆ ನನ್ನ ಅಮ್ಮ `ಎಂತಹ ದುರಾದೃಷ್ಟೆ ಮಗಳೇ ನೀನು~ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದನ್ನು ನೋಡಿ ಏನೋ ಕೆಟ್ಟದ್ದು ಸಂಭವಿಸಿರಬೇಕು ಎಂದು ತಿಳಿದುಕೊಂಡೆ. ಕ್ರಮೇಣ ಪ್ರಾಯಕ್ಕೆ ಬಂದಾಗ ತಿಳಿಯಿತು ನಾನು ಪತಿ ಕಳೆದುಕೊಂಡ ವಿಧವೆಯೆಂದು~ ಎಂದರು.`ಆ ನಂತರವೂ ಕೆಂಗೇರಿ ಉಪನಗರದಲ್ಲಿರುವ ನನ್ನ ಅಣ್ಣಂದಿರೆಲ್ಲರೂ ಇನ್ನೊಂದು ಮದುವೆಯಾಗಲು ಸೂಚಿಸಿದರು. ಆದರೆ ಸಂಸಾರ ಮಾಡದಿದ್ದರೂ ಮದುವೆಯಾದ ಮೇಲೆ ಅವರೇ ನನ್ನ ಗಂಡನೆಂಬ ಎಂಬ ದೃಢ ನಿರ್ಧಾರದಿಂದ ಹಾಗೇ ಉಳಿದೆ. ನನಗೊಂದು ಮಗುವಿದ್ದರೆ ಆ ಮಗುವನ್ನು ಕೂಡ ದೇಶಸೇವೆಗೆ ಮುಡಿಪಾಗಿರಿಸುತ್ತಿದ್ದೆ~ ಎಂದು ಹೆಮ್ಮೆಯಿಂದ ನುಡಿಯುತ್ತಾರೆ`ನನ್ನ ಗಂಡನ ಮನೆ ನಾಗಮಂಗಲದ ಸಮೀಪವಿರುವ ಎಲೆಕೊಪ್ಪ. ಆದರೆ ಸದ್ಯ ನಾನೀಗ ಕೆಂಗೇರಿ ಉಪನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದೇನೆ. ತಿಂಗಳಿಗೆ 8 ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತದೆ. ಆದರೆ ಬಾಡಿಗೆಗೆ ಅರ್ಧದಷ್ಟು ಹಣ ಹೋಗುವುದರಿಂದ ಜೀವನ ನಿರ್ವಹಣೆ ಕಷ್ಟ.ನನಗಾಗಿ ಏನಿಲ್ಲದಿದ್ದರೂ ನನ್ನನ್ನು ನೋಡಿಕೊಂಡ ನನ್ನ ಕುಟುಂಬಕ್ಕಾಗಿ ಒಂದು ಮನೆ ಕಟ್ಟಿಸುವ ಆಸೆಯಿದೆ. ಅದಕ್ಕಾಗಿ ಸರ್ಕಾರಕ್ಕೆ ಅರ್ಜಿ ಹಾಕಿದ್ದೇನೆ. ಆದರೆ ಈವರೆಗೆ ಗೃಹ ನಿರ್ಮಾಣ ಕನಸಾಗಿಯೇ ಉಳಿದಿದೆ. ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿದ್ದೇನೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ~ ಎಂದು ವೆಂಕಟಮ್ಮ ಅಳಲು ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.