ಬುಧವಾರ, ಜೂನ್ 23, 2021
28 °C

ದೇಶಕ್ಕಾಗಿ ಲೋಕಸಭಾ ಟಿಕೆಟ್ ಬೇಡವೆಂದರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಅದೊಂದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಆ ಕುಟುಂಬದಲ್ಲಿ ವಾಸುದೇವ ರಾವ್, ರಂಗರಾವ್, ಹನುಮಂತ ರಾವ್, ಭೀಮರಾವ್, ಮಾಧವ ರಾವ್ ಮಕ್ಕಳಿದ್ದರು. ಇವರೆಲ್ಲ ಕಟ್ಟಾ ಗಾಂಧಿವಾದಿಗಳು. ಗಾಂಧೀಜಿ ಸೂಚನೆಯಂತೆ ತಮ್ಮ ಇಡೀ ಜೀವನವನ್ನು ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದರು.ಆ ಕುಟುಂಬದಲ್ಲಿ ವಾಸುದೇವರಾಯರು ಖಾದಿ ಗ್ರಾಮೋದ್ಯೋಗ ಚಳವಳಿಯ ನೇತೃತ್ವ ವಹಿಸಿದ್ದರು. ಸೇವಾದಳದ ಹಿರಿಯರಾದ ನಾ.ಸು.ಹರ್ಡೀಕರ್ ಅವರ ಜತೆಗಾರರಾಗಿದ್ದ ರಾಯರು, ಸೇವಾದಳದಲ್ಲಿ ದೇಶದಾದ್ಯಂತ ಪ್ರವಾಸ ಮಾಡಿದ್ದರು. ಜೀವನದ ಅರ್ಧಭಾಗ ಜೈಲಿನಲ್ಲಿ ಕಳೆದಿದ್ದರು. ಊರಲ್ಲಿದ್ದಾಗ ಮಾತ್ರ ಅಪ್ಪ ಹಾಕಿಕೊಟ್ಟ ಖಾದಿ ಅಂಗಡಿಯಲ್ಲಿರುತ್ತಿದ್ದರು.ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ತಾವು ನಡೆಸುತ್ತಿದ್ದ ಖಾದಿ ಅಂಗಡಿಯನ್ನು ಈ ಕುಟುಂಬದವರು ಸೊಸೈಟಿಯಾಗಿ ಪರಿವರ್ತಿಸಿ, ಅದನ್ನು ಮೈಸೂರು ಚರಕ ಸಂಸ್ಥೆಗೆ ಬಿಟ್ಟುಕೊಟ್ಟರು. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಮದುವೆಯಾಗುವುದಿಲ್ಲ ಎಂದು ಹಠ ಮಾಡಿದ್ದ ರಾಯರು, ಸ್ವಾತಂತ್ರ್ಯ ಬಂದ ವೇಳೆ ಅವರಿಗೆ ವಯಸ್ಸಾಗಿತ್ತು. ಕೊನೆಗೆ ಮದುವೆಯಾಗಲೇ ಇಲ್ಲ.ಹೀಗೆ ಬದುಕನ್ನೇ ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬವೊಂದರ ಸದಸ್ಯರಿಗೆ 1957ರ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿತು. ವಾಸುದೇವರಾಯರನ್ನು ಆಯ್ಕೆ ಮಾಡಿತು. ಆದರೆ ರಾಯರು ಟಿಕೆಟ್ ಬೇಡ ಎಂದರು. ‘ಗಾಂಧೀಜಿಯವರ ಸೂಚನೆಯಂತೆ ನಾನು ರಚನಾತ್ಮಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳು­ತ್ತೇನೆ. ರಾಜಕೀಯ ಪ್ರವೇಶಿಸಿದರೆ ಗಾಂಧೀಜಿಯವರ ಗ್ರಾಮಾಭಿವೃದ್ದಿ ಕನಸು ನನಸು ಮಾಡಲಾಗುವುದಿಲ್ಲ. ನನ್ನ  ಕಾರ್ಯಕ್ಷೇತ್ರಕ್ಕೆ ತೊಂದರೆಯಾಗುತ್ತದೆ. ನನಗೆ ಪಾರ್ಲಿಮೆಂಟ್ ಟಿಕೆಟ್ ಬೇಡ’ ಎಂದು ವರಿಷ್ಠರಿಗೆ ಪತ್ರ ಬರೆದರು.ಕೊನೆಗೆ ರಾಯರ ತಮ್ಮ ರಂಗರಾವ್ ಅವರಿಗೆ ಟಿಕೆಟ್ ನೀಡಲಾಯಿತು. ಅವರ ವಿರುದ್ಧ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಇಮಾಮ್ ಸಾಬ್ ಸ್ಪರ್ಧಿಸಿದ್ದರು. ವಿಚಿತ್ರ ಎಂದರೆ ರಂಗರಾವ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಅವರ ತಾಯಿ ಮಗನಿಗೆ ಮತ ಹಾಕಲೇ ಇಲ್ಲ. ‘ಚುನಾವಣೆ ದಿನ ನನ್ನ ಮಗ ಬಂದು ಮತ ಹಾಕಲು ಕರೆದೊಯ್ಯತ್ತಾನೆ’ ಎಂದು ತಾಯಿ ಮನೆಯಲ್ಲಿ ಕಾಯುತ್ತಿದ್ದರು. ರಾಯರು ಪ್ರಚಾರದ ಭರಾಟೆಯಲ್ಲಿ ತಾಯಿಯನ್ನು ಮತಗಟ್ಟೆಗೆ ಕರೆದೊಯ್ಯಲು ಮರೆತಿದ್ದರು.‘ಅಮ್ಮನೇ ಮತ ಹಾಕದಿದ್ದ ಮೇಲೆ ನೀನು ಹೇಗೆ ಗೆಲ್ಲುತ್ತೀಯಾ' ಎಂದು ರಾಜಕೀಯ ಗೆಳೆಯರು, ಸಮಕಾಲೀನರು ರಂಗರಾವ್ ಅವರನ್ನು ಕೆಣಕಿದ್ದರು. ಕೊನೆಗೂ ಆ ಚುನಾವಣೆಯಲ್ಲಿ ರಂಗರಾವ್ ಸೋತು, 11,189 ಮತಗಳ ಅಂತರದಿಂದ ಇಮಾಮ್ ಸಾಬ್ ಗೆದ್ದರು.

ಈ ಚುನಾವಣೆಯಲ್ಲಿ ರಂಗರಾವ್ ಅವರು ಸ್ಪರ್ಧಿಸುವುದು ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಎಸ್.ನಿಜಲಿಂಗಪ್ಪ ಅವರಿಗೆ (ಎಸ್‌ಎನ್) ಬೇಕಾಗಿರಲಿಲ್ಲ. ಏಕೆಂದರೆ, ಇಮಾಮ್ ಸಾಬ್ ಮತ್ತು ನಿಜಲಿಂಗಪ್ಪ ಅಕ್ಕಪಕ್ಕದ ಮನೆಯವರು. ರಂಗರಾಯರ ಸೋಲಿಗೆ ಇದೂ ಕಾರಣವಾಗಿತ್ತು ಅನ್ನಿಸುತ್ತದೆ.(ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅವರ ನೆನಪಿನ ಪುಟಗಳಿಂದ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.