ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾದ ನಷ್ಟ ಗೊತ್ತೇ?

Last Updated 20 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸಂಸತ್ತು ಸರಿಯಾಗಿ ಕೆಲಸ ಮಾಡದ್ದರಿಂದ ದೇಶದ ಅರ್ಥ ವ್ಯವಸ್ಥೆ, ಸಮಾಜ ಮತ್ತು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಉಂಟಾಗಿದೆ

ಸಂಸತ್ತಿನ ರಚನೆ ಮತ್ತು ಕಾರ್ಯವಿಧಾನಗಳ ಬಗ್ಗೆ ಸಾಮಾನ್ಯ ಓದುಗರಿಗೆ ವಿವರಣೆ ನೀಡಲು ಡಾ. ಯೋಗೇಂದ್ರ ನಾರಾಯಣ್ ಅವರು ‘ಭಾರತದ ಸಂಸತ್ತಿನ ಪರಿಚಯ’ ಎಂಬ ಪುಸ್ತಕ ಸಿದ್ಧಪಡಿಸಿದ್ದಾರೆ. ಡಾ. ನಾರಾಯಣ್ ಅವರು ರಾಜ್ಯಸಭೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ. ಈ ಪುಸ್ತಕದ ಪಿಡಿಎಫ್‍ ಕಡತವನ್ನು ರಾಜ್ಯಸಭಾ ವೆಬ್‌ಸೈಟ್‌ನಿಂದ ಪಡೆಯಬಹುದು. ಪ್ರಜಾಪ್ರಭುತ್ವದ ಮೌಲ್ಯಗಳೆಲ್ಲ ಮೈದಳೆದು ನಿಂತ ಜಾಗ ಸಂಸತ್ತು ಎಂದು ಆ ಪುಸ್ತಕದಲ್ಲಿ ವರ್ಣಿಸಲಾಗಿದೆ. ಅಲ್ಲದೆ, ಜನರ ಸಹಭಾಗಿತ್ವದ ಪ್ರಜಾಸತ್ತೆಯನ್ನು ಬೆಳೆಸುವ ಸಂಸ್ಥೆ ಸಂಸತ್ತು, ರಾಷ್ಟ್ರದ ಕಾವಲುನಾಯಿ, ರಾಷ್ಟ್ರದ ಪಾಲಿನ ಮಹಾನ್ ನ್ಯಾಯದೇವತೆ ಈ ಸಂಸತ್ತು ಎಂಬ ಮಾತುಗಳೂ ಆ ಪುಸ್ತಕದಲ್ಲಿ ಇವೆ.

ಕಾನೂನುಗಳನ್ನು ರೂಪಿಸುವುದು ಭಾರತದ ಸಂಸತ್ತಿನ ಪ್ರಾಥಮಿಕ ಕೆಲಸಗಳಲ್ಲಿ ಒಂದು ಎಂಬುದು ನೆನಪಿನಲ್ಲಿರಬೇಕು. ಇದರ ಜೊತೆಗೆ, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚಿಸುವ, ದೇಶದ ಜನರ ದೂರು–ದುಮ್ಮಾನಗಳ ಬಗ್ಗೆ ಚರ್ಚಿಸುವ ಜವಾಬ್ದಾರಿ ಕೂಡ ಸಂಸತ್ತಿನ ಮೇಲಿದೆ.

ಈ ಜವಾಬ್ದಾರಿಗಳನ್ನು ನಿರ್ವಹಿಸಲು ಸಂಸತ್ತು ವರ್ಷಕ್ಕೆ ಮೂರು ಬಾರಿ– ಬಜೆಟ್‌ ಅಧಿವೇಶನ, ಮುಂಗಾರು ಅಧಿವೇಶನ ಮತ್ತು ಚಳಿಗಾಲದ ಅಧಿವೇಶನದಲ್ಲಿ ಸೇರುತ್ತದೆ. ಸಂಸತ್ತಿನ ವಿವಿಧ ಸಮಿತಿಗಳು ವರ್ಷಪೂರ್ತಿ ಕಾರ್ಯ ನಿರ್ವಹಿಸುತ್ತವೆ.

ಈಗಿನ ಲೋಕಸಭೆಯ ಮುಂಗಾರು ಅಧಿವೇಶನ ಜುಲೈ 21ರಿಂದ ಆಗಸ್ಟ್‌ 13ರವರೆಗೆ ನಡೆಯಿತು. ಆದರೆ, ಈ ಅಧಿವೇಶನದಲ್ಲಿ ಯಾವುದೇ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆ ಆಗಲಿಲ್ಲ. ಅಧಿವೇಶನ ಸಂಪೂರ್ಣವಾಗಿ ವ್ಯರ್ಥವಾಯಿತು. ಬೇರೆ ಬೇರೆ ರಾಜಕೀಯ ಕಾರಣಗಳಿಗಾಗಿ, ಸಂಸತ್ತಿನ ಕಲಾಪ ಬಹಿಷ್ಕರಿಸುವ ನಿಲುವಿಗೆ ಪ್ರತಿಪಕ್ಷಗಳು ಅಂಟಿಕೊಂಡವು. ರಾಜಿಸಂಧಾನ ಮಾಡಿಕೊಳ್ಳುವಲ್ಲಿ ಆಡಳಿತ ಪಕ್ಷ ವಿಫಲವಾಯಿತು. ಸದನದ ಕಲಾಪಗಳನ್ನು ‘ನಿರಂತರವಾಗಿ, ಉದ್ದೇಶಪೂರ್ವಕವಾಗಿ ಹಾಳುಗೆಡವಿದ’ ಕಾರಣಕ್ಕೆ ಲೋಕಸಭೆಯ ಸ್ಪೀಕರ್‌, 25 ಸದಸ್ಯರನ್ನು ಅಮಾನತು ಮಾಡಿದರು.

ಈ ವರ್ಷ ಲಭ್ಯವಿರುವ ಸಮಯದಲ್ಲಿ ಶೇಕಡ 33.3ರಷ್ಟನ್ನು ಸಂಸತ್ತು ಕಳೆದುಕೊಂಡಿದೆ ಎಂಬುದನ್ನು ಸರಳ ಅಂಕಿ–ಅಂಶಗಳು ಹೇಳುತ್ತವೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಕೆಳಮನೆಯು ತನಗೆ ಲಭ್ಯವಿದ್ದ ಸಮಯದಲ್ಲಿ ಶೇಕಡ 6.67ರಷ್ಟನ್ನು ಕಳೆದುಕೊಂಡಿದೆ.

ತನ್ನ ಕೆಲಸವನ್ನು ನಿರ್ವಹಿಸದ ಸಂಸತ್ತು, ತೆರಿಗೆದಾರನ ಹಣವನ್ನು ಹೇಗೆ ಪೋಲು ಮಾಡುತ್ತಿದೆ ಎಂಬ ವಿಚಾರ ಮಾಧ್ಯಮಗಳಲ್ಲಿ ಸಹಜವಾಗಿ ಗಟ್ಟಿ ಧ್ವನಿಯಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ. ಸಂಸತ್ತಿನ ಕಲಾಪ ನಡೆಸಲು ಬೇಕಿರುವ ಹಣ ಎಷ್ಟು ಎಂಬುದನ್ನು ಉಲ್ಲೇಖಿಸಿ, ಈ ವಿಚಾರ ಅರುಹಲಾಗುತ್ತಿದೆ. ಸಂಸತ್ತಿನ ಕ್ಯಾಂಟೀನ್‌ನಲ್ಲಿ ದೊರೆಯುವ ಊಟದ ಬೆಲೆ, ಸಂಸದರ ಸಂಬಳದ ಬಗೆಗಿನ ಅಂಕಿ–ಅಂಶಗಳ ಕುರಿತೂ ಚರ್ಚಿಸಲಾಗುತ್ತಿದೆ. ಇವೆಲ್ಲವೂ ಸೂಕ್ತವಾದ ಅಂಶಗಳೇ ಆಗಿವೆ. ಆದರೆ, ನಿಜ ಸಂಗತಿಯನ್ನು ಈ ಅಂಕಿ–ಅಂಶಗಳಲ್ಲಿ ಹೇಳಲಾಗುತ್ತಿಲ್ಲ.

ಸಂಸತ್ತು ಸರಿಯಾಗಿ ಕೆಲಸ ಮಾಡದಿರುವುದರ ಪರಿಣಾಮವು ಕಲಾಪ ನಡೆಸಲು ಮಾಡಿರುವ ಖರ್ಚು ಮತ್ತು ಸಂಸದರ ಹಾಜರಾತಿಯ ಲೆಕ್ಕಾಚಾರಗಳನ್ನು ಮೀರಿದ್ದು. ಉದಾಹರಣೆಗೆ: ಈ ಬಾರಿ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಬಾಲ ಕಾರ್ಮಿಕ ತಿದ್ದುಪಡಿ ಮಸೂದೆ, ಭ್ರಷ್ಟಾಚಾರ ತಡೆ ಮಸೂದೆ, ಭೂಸ್ವಾಧೀನ ಮಸೂದೆಗಳು ಅನುಮೋದನೆಗೆ ಕಾದಿದ್ದವು.

ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಕಾಣಬೇಕಾದ ಅಭಿವೃದ್ಧಿಯ ವಿಚಾರದಲ್ಲಿ ಈ ಮಸೂದೆಗಳು ಮಹತ್ವದ ಪರಿಣಾಮ ಬೀರಬಲ್ಲಂಥವು. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇಕಡ 1–2ರಷ್ಟು ಹಣ ಹೆಚ್ಚುವರಿಯಾಗಿ ದೊರೆಯಬಹುದು (ಹೆಚ್ಚುವರಿಯಾಗಿ, ₨ 1.30 ಲಕ್ಷ ಕೋಟಿಯಿಂದ ₨ 2.6 ಲಕ್ಷ ಕೋಟಿಯಷ್ಟು)  ಎಂದು ಹಲವು ವರದಿಗಳು ಹೇಳಿವೆ.

ಸರ್ಕಾರಿ ನೌಕರರಿಗೆ ಲಂಚ ಕೊಡುವುದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುವ ಭ್ರಷ್ಟಾಚಾರ ತಡೆ ಮಸೂದೆ ಜಾರಿಗೆ ಬಂದರೆ, ದೇಶದಲ್ಲಿ ಕಪ್ಪು ಹಣ ಚಲಾವಣೆಗೆ ತಡೆ ಬೀಳುತ್ತದೆ. ಬಾಲ ಕಾರ್ಮಿಕ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ, ಕಾರ್ಮಿಕರಾಗಿರುವ ಹಲವು ಮಕ್ಕಳು ಶಾಲೆಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ.

ಆಸ್ತಿ ಹಕ್ಕು ಮತ್ತು ಜಮೀನಿನ ಒಡೆತನಕ್ಕೆ ಸಂಬಂಧಿಸಿದ ಮೂಲಭೂತ ವಿಷಯಗಳ ಬಗ್ಗೆ ಭೂಸ್ವಾಧೀನ ಮಸೂದೆಯ ನೆಪದಲ್ಲಿ ಚರ್ಚಿಸುವ ಅವಕಾಶ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಇತ್ತು. ಆದರೆ ಈ ಮಸೂದೆಯ ವಿಚಾರದಲ್ಲಿ ರಾಜಕೀಯ ಪಕ್ಷಗಳಿಗೆ ನಾಟಕವಾಡುವುದೇ ಮುಖ್ಯವಾದ ಕಾರಣ, ಜನರಲ್ಲಿ ಹತಾಶೆಯ ಭಾವ ಮೂಡಿದೆ.

ಹಾಗಾಗಿ, ಸಂಸತ್ತು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ಆಗಿರುವ ನಷ್ಟ: ದೇಶದ ಜಿಡಿಪಿಗೆ ಸೇರಬಹುದಿದ್ದ ಹೆಚ್ಚುವರಿ ಶೇಕಡ 2ರಷ್ಟು ಮೊತ್ತ, ಶಾಲೆಗೆ ಹೋಗಬಹುದಾಗಿದ್ದ ಮಕ್ಕಳು ಇನ್ನೂ ಕಾರ್ಮಿಕರಾಗಿಯೇ ಇರುವುದು, ದೇಶದ ಆರ್ಥಿಕ ವ್ಯವಸ್ಥೆಗೆ ಕಾಳಧನ ಸೇರ್ಪಡೆ ಆಗುವುದು. ಈ ಬಗೆಯ ನಷ್ಟವನ್ನು ಆರ್ಥಿಕ ತಜ್ಞರು, ‘ಪರ್ಯಾಯ ಮಾರ್ಗ ಕಂಡುಕೊಳ್ಳದೆ ಆಗಿರುವ ನಷ್ಟ’ ಎಂದು ವ್ಯಾಖ್ಯಾನಿಸುತ್ತಾರೆ. ಈ ದೃಷ್ಟಿಕೋನದಿಂದ ನೋಡಿದಾಗ, ಸಂಸತ್ತು ಸರಿಯಾಗಿ ಕೆಲಸ ಮಾಡದಿದ್ದರಿಂದ ದೇಶದ ಅರ್ಥ ವ್ಯವಸ್ಥೆ, ಸಮಾಜ ಮತ್ತು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಉಂಟಾಗಿದೆ ಎನ್ನಬೇಕಾಗುತ್ತದೆ.

ಈಗ ಹೇಳಿದ ಮಸೂದೆಗಳಿಗೆ ಅನುಮೋದನೆ ಪಡೆಯುವುದಲ್ಲದೆ, ಈ ಬಾರಿಯ ಅಧಿವೇಶನದಲ್ಲಿ ಕೆಲವು ಹೊಸ ಮಸೂದೆಗಳೂ ಮಂಡನೆಯಾಗಬೇಕಿದ್ದವು. ಕಾನೂನು ರೂಪಿಸುವುದು ಮತ್ತು ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಕಾಲಾವಕಾಶ ಬೇಕು. ಇದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಕಾನೂನು ಜಾರಿಗೊಳಿಸಿ ಹಲವು ತಿಂಗಳು ಕಳೆದ ನಂತರವೇ ಅದರ ನೈಜ ಪರಿಣಾಮ ಅರಿವಿಗೆ ಬರುವುದು.

ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಮಸೂದೆಗಳು ಅನುಮೋದನೆ ಪಡೆದುಕೊಂಡಿಲ್ಲ. ಅವುಗಳನ್ನು ಮುಂದಿನ ಅಧಿವೇಶನಗಳಲ್ಲಿ ಮಂಡಿಸಿ, ಚರ್ಚಿಸಿ, ಅನುಮೋದನೆ ಪಡೆದುಕೊಳ್ಳಬೇಕು ಅಥವಾ ಮಸೂದೆಗಳನ್ನೇ ಹಿಂಪಡೆಯಬೇಕು. ಇದಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ.

ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳದ ಕಾರಣ ಈಗ ಆಗಿರುವ ನಷ್ಟದ ಮುಂದೆ ತೆರಿಗೆದಾರನ ಹಣ ವ್ಯರ್ಥವಾಗಿರುವುದು ತೀರಾ ಅಲ್ಪ. ‘ಭಾರತದ ಸಂಸತ್ತಿನ ಪರಿಚಯ’ ಪುಸ್ತಕವನ್ನು ನಮ್ಮ ಸಂಸದರೂ ಕಣ್ಣಲ್ಲಿ ಕಣ್ಣಿಟ್ಟು ಓದಬೇಕು.

ಲೇಖಕ ಬೆಂಗಳೂರು ಮೂಲದ ತಕ್ಷಶಿಲಾ ಸಂಸ್ಥೆಯಲ್ಲಿ ವಿಶ್ಲೇಷಕ. ಈ ಲೇಖನಕ್ಕೆ ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆಯ ಎಂ.ಆರ್. ಮಾಧವನ್‌  ಮಾಹಿತಿ ಒದಗಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT