ಬುಧವಾರ, ಮೇ 12, 2021
24 °C
ಸಿಂಗ್-ಸೋನಿಯಾ ಪಾರಮ್ಯಕ್ಕೆ ಮೋದಿ ಲೇವಡಿ

ದೇಶಕ್ಕೆ ಇಬ್ಬರು ಯಜಮಾನ, ಅಸಲಿ ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಠಾಣ್‌ಕೋಟ್ (ಪಂಜಾಬ್) (ಪಿಟಿಐ): `ದೇಶದಲ್ಲಿ ಇಂದು `ಇಬ್ಬರು ಯಜಮಾನ'ರಿದ್ದು ಇವರಲ್ಲಿ `ಅಸಲಿ' ಯಾರು ಎಂಬುದೇ ತಿಳಿಯುತ್ತಿಲ್ಲ ` ಎಂದು ಪರೋಕ್ಷವಾಗಿ ಪ್ರಧಾನಿ ಡಾ. ಮನಮೋಹನ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಇಲ್ಲಿ ಚಾಲನೆ ನೀಡಿದರು.ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಮೋದಿ ಪಕ್ಷದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 60ನೇ ಪುಣ್ಯತಿಥಿ ಅಂಗವಾಗಿ ಇಲ್ಲಿ ನಡೆದ ಸಂಕಲ್ಪ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. `ನಿಮ್ಮ (ಜನರ) ಭವಿಷ್ಯ ಅವರ ಕೈಯಲ್ಲಿ ಸುಭದ್ರಾಗಿಲ್ಲ. ನಮ್ಮ ಯುವಕರೊಂದಿಗೆ ಆಟವಾಡಲು ನಾವು ಬಿಡುವುದಿಲ್ಲ' ಎಂದು ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಜಮ್ಮು ಮತ್ತು ಕಾಶ್ಮೀರದ ಸಮಗ್ರ ಅಭಿವೃದ್ಧಿಗಾಗಿ ಅಲ್ಲಿಯ ಯುವಕರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ ಮೋದಿ ಈ ಮೂಲಕ  ತಮ್ಮನ್ನು ಪ್ರತ್ಯೇಕತೆ ಪೋಷಿಸುವ ವ್ಯಕ್ತಿ ಎನ್ನುವ ವಿರೋಧಿಗಳ ಟೀಕೆಗೆ ಉತ್ತರಿಸಿದರು.ಪಕ್ಷಗಳು ಹಾಗೂ ಜನರಲ್ಲಿ ಐಕ್ಯತೆ ಮೂಡಿಸುವ ನಾಯಕರಾಗಿ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿರುಗೇಟು ನೀಡಿದರು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದಲ್ಲಿ ಅಟಲ್‌ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಪೂರ್ಣಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.ಕಾಶ್ಮೀರ ನೀತಿ, ಆರ್ಥಿಕತೆ ಹಾಗೂ ರಾಷ್ಟ್ರೀಯ ಭದ್ರತೆ ವಿಷಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಯುಪಿಎ ಸರ್ಕಾರ ವಿಫಲವಾಗಿದೆ ಎಂದು ದೂರಿದ ಮೋದಿ, `ಸಹಾನುಭೂತಿ, ಪ್ರೀತಿ ಹಾಗೂ ಮಾತುಕತೆಯ ಮೂಲಕ ವಾಜಪೇಯಿ ಕಾಶ್ಮೀರಿಗಳ ಹೃದಯ ಗೆದ್ದಿದ್ದರು. ಆ ಮೂಲಕ ಕಾಶ್ಮೀರಕ್ಕೆ ಸಂಬಂಧಿಸಿದ ನೀತಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು' ಎಂದರು.`ಅಭಿವೃದ್ಧಿ ಪ್ರಕ್ರಿಯೆಯ ಭಾಗವಾಗಲು ಕಾಶ್ಮೀರದ ಯುವಕರು ಉತ್ಸುಕರಾಗಿದ್ದಾರೆ. ಬಂದೂಕುಗಳಿಂದ ರಕ್ತ ಚಿಮ್ಮಿಸಬಹುದು ಆದರೆ ಅವುಗಳಿಂದ ಒಬ್ಬರ ಜೀವನಕ್ಕೆ ಒಳ್ಳೆಯದನ್ನು ಮಾಡಲು ಆಗದು' ಎಂದು ಮೋದಿ ಹೇಳಿದರು.ದುರಂತಕ್ಕೆ ರಾಜಕೀಯ ಬಣ್ಣ: ತಿವಾರಿ

ನವದೆಹಲಿ (ಪಿಟಿಐ
): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ ದುರಂತಕ್ಕೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ ಎಂದು ವಾರ್ತಾ ಪ್ರಸಾರ ಖಾತೆ ಸಚಿವ ಮನಿಶ್ ತಿವಾರಿ ದೂರಿದ್ದಾರೆ.`ನಾವು ಸಾವಿರಾರು ಜನರನ್ನು ರಕ್ಷಿಸಿದ್ದೇವೆ ಎಂದು ಕೆಲವರು `ಕಪೋಲಕಲ್ಪಿತ' ಮಾಹಿತಿ ನೀಡುತ್ತ ಪ್ರಚಾರ ಮಾಡುತ್ತಿದ್ದಾರೆ. ಭಾರತದ ಒಂದು ಭಾಗವೇ ಈ ನೈಸರ್ಗಿಕ ದುರಂತದ ಪರಿಹಾರ ಕಾರ್ಯದಲ್ಲಿ ತೊಡಗಿದ್ದರೆ ಕೆಲವರು ಪಠಾಣಕೋಟ್‌ಗೆ ತೆರಳುವ ಮೂಲಕ ಈ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ' ಎಂದು ತಿವಾರಿ ಟೀಕಿಸಿದರು.`ಕೆಲವರು ಇಂತಹ ಕಲ್ಪಿತ ಸುದ್ದಿ ಹರಡುತ್ತಿದ್ದರೆ ಇದನ್ನು ದೇಶದ ಜನರ ವಿವೇಚನೆಗೆ ಬಿಡುತ್ತೇನೆ, ಯುಪಿಎ ಸರ್ಕಾರದ ಭಾರತ್ ನಿರ್ಮಾಣ್ ಆಂದೋಲನದ ಕುರಿತು ಮೋದಿ ಮಾಡಿರುವ ಟೀಕೆಯಲ್ಲಿ ಯಾವುದೇ ಹುರುಳಿಲ್ಲ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.