ದೇಶದಲ್ಲಿ ಜೈವಿಕ ಇಂಧನ ಕ್ರಾಂತಿ ಅಗತ್ಯ

7

ದೇಶದಲ್ಲಿ ಜೈವಿಕ ಇಂಧನ ಕ್ರಾಂತಿ ಅಗತ್ಯ

Published:
Updated:
ದೇಶದಲ್ಲಿ ಜೈವಿಕ ಇಂಧನ ಕ್ರಾಂತಿ ಅಗತ್ಯ

ಬೆಂಗಳೂರು: `ದೇಶದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮಾದರಿಯಲ್ಲಿಯೇ ಜೈವಿಕ ಇಂಧನ ಕ್ರಾಂತಿಯಾಗುವ ಅಗತ್ಯವಿದೆ~ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಜೈವಿಕ ಇಂಧನ~ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`2017ರ ವೇಳೆಗೆ ಶೇ 20ರಷ್ಟು ಜೈವಿಕ ಇಂಧನ ಬಳಕೆಯಾಗಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಈ ಗುರಿ ಮುಟ್ಟಬೇಕಾದರೆ ನಾವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸಲು ಕಾರ್ಯಪ್ರವೃತ್ತರಾಗಬೇಕಿದೆ. `ಹಸಿರು ಹೊನ್ನು~, `ಬರಡು ಬಂಗಾರ~ದಂತಹ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಜೈವಿಕ ಇಂಧನಕ್ಕೆ ಬಳಸುವ ಎಣ್ಣೆ ಬೀಜ ಮರಗಳನ್ನು ಬೆಳೆಸಲು ಮಂಡಳಿ ಪ್ರಯತ್ನ ನಡೆಸುತ್ತಿದೆ~ ಎಂದು ಹೇಳಿದರು.`ಅಮೆರಿಕದಂತಹ ಮುಂದುವರಿದ ರಾಷ್ಟ್ರ ಕೂಡ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಜೈವಿಕ ಇಂಧನ ಬಳಕೆ ಮಾಡುತ್ತಿದೆ. ಇಥೆನಾಲ್ ಉತ್ಪಾದನೆಗಾಗಿಯೇ ಶೇ 70ರಷ್ಟು ಆಹಾರ ಧಾನ್ಯಗಳನ್ನು ಬಳಸುತ್ತಿದೆ. ಮೆಕ್ಸಿಕೊ ಹಾಗೂ ಯೂರೋಪ್ ರಾಷ್ಟ್ರಗಳು ಕೂಡ ಜೈವಿಕ ಇಂಧನಕ್ಕಾಗಿ ಖಾದ್ಯ ತೈಲವನ್ನು ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿವೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಭವಿಷ್ಯದಲ್ಲಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯವಾಗಿದೆ~ ಎಂದರು.`ರಾಜ್ಯ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ `ಸುವರ್ಣ ಭೂಮಿ~ ಯೋಜನೆಯಡಿ ಜೈವಿಕ ಇಂಧನ ಉದ್ದೇಶಕ್ಕಾಗಿ 100 ಕೋಟಿ ರೂಪಾಯಿ ಒದಗಿಸಿದೆ. `ಹಸಿರು ಹೊನ್ನು~ ಕಾರ್ಯಕ್ರಮದಡಿ ರೈತರಿಗೆ ಹೊಂಗೆ, ಬೇವು, ಹಿಪ್ಪೆಯಂತಹ ಎಣ್ಣೆ ಬೀಜಗಳ ಸಸಿಗಳನ್ನು ಒದಗಿಸಲು ಮಂಡಳಿ ಕಾರ್ಯೋನ್ಮುಖವಾಗಿದೆ. `ಬರಡು ಬಂಗಾರ~ ಯೋಜನೆಯಡಿ ಒಣ ಭೂಮಿಯಲ್ಲಿ ನೆಡು ತೋಪುಗಳನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದ್ದು, ಇದಕ್ಕಾಗಿ 11 ಸಾವಿರ ರೈತರೊಂದಿಗೆ ಕೆಲಸ ನಿರ್ವಹಿಸಲಾಗುತ್ತಿದೆ~ ಎಂದರು.ಜೈವಿಕ ಡೀಸೆಲ್ ಬಳಕೆಗೆ ಸಾರಿಗೆ ಇಲಾಖೆ ಸಿದ್ಧ: ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ ಮಾತನಾಡಿ, `ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಎಷ್ಟೇ ಪ್ರಮಾಣದ ಜೈವಿಕ ಡೀಸೆಲ್ ಪೂರೈಸಿದರೂ ಅದನ್ನು ಬಳಕೆ ಮಾಡಲು ಇಲಾಖೆ ಸಿದ್ಧವಿದೆ~ ಎಂದರು.`ಪ್ರಸ್ತುತ ಸಾರಿಗೆ ಇಲಾಖೆಯಲ್ಲಿ ಶೇ 5ರಿಂದ 10ರಷ್ಟು ಜೈವಿಕ ಡೀಸೆಲ್ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದಲ್ಲಿ ಶೇ 20ರಿಂದ 25ರಷ್ಟು ಬಳಸಬಹುದು~ ಎಂದರು.ಸಮಾರಂಭವನ್ನು ಉದ್ಘಾಟಿಸಿದ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, `ಹಳ್ಳಿಗಾಡಿನ ಜನ ಸೌರ ಒಲೆ, ಸೌರ ವಿದ್ಯುತ್ ಹಾಗೂ ಜೈವಿಕ ಅನಿಲ ಬಳಸಲು ಸಿದ್ಧರಿದ್ದಾರೆ. ಆದರೆ, ಸಾಮಾನ್ಯ ಜನರಿಗೆ ಇಂತಹ ಸೌಲಭ್ಯ ಸಿಗುವುದು ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೀತಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ~ ಎಂದು ಹೇಳಿದರು.ಎನ್.ಎಲ್. ಮುಕುಂದರಾಜ್ ಸಂಪಾದಕತ್ವದಲ್ಲಿ ಮಂಡಳಿ ಹೊರತಂದಿರುವ ಜೈವಿಕ ಇಂಧನ ಕುರಿತ `ಕೂಸು ಕಂಡ ಕನಸಿನಲ್ಲಿ~ ಕವನ ಸಂಕಲನ ಹಾಗೂ `ಹಾಲಕ್ಕಿ ನುಡಿದೈತೆ~ ಧ್ವನಿಸುರುಳಿಯನ್ನು ಆಶೀಸರ ಬಿಡುಗಡೆ ಮಾಡಿದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ ಪುಸ್ತಕ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವಗುಪ್ತ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊಣ್ಣಪ್ಪ ಸ್ವಾಗತಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್. ಮೋಹನ್‌ಕುಮಾರ್ ವಂದಿಸಿದರು.ಇದಕ್ಕೂ ಮುನ್ನ ಸಚಿವ ಆರ್. ಅಶೋಕ ಅವರು ಜೈವಿಕ ಇಂಧನ ಸಂದೇಶ ಸಾರುವ ಚಿತ್ರಕಲೆಯುಳ್ಳ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry