ಗುರುವಾರ , ನವೆಂಬರ್ 14, 2019
19 °C

ದೇಶದಲ್ಲಿ ಮುಂಗಾರು ವಿಫಲ: ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸಜ್ಜು

Published:
Updated:

ನವದೆಹಲಿ: ಮುಂದಿನ ವಾರ ಮುಂಗಾರು ಚುರುಕಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ 2009ರ ಬರದಿಂದ ಪಾಠ ಕಲಿತಿರುವ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.ಬಂಗಾಳಕೊಲ್ಲಿಯಲ್ಲಿ ಮುಂಗಾರು ಚುರುಕಿಗೆ ಅನುಕೂಲಕರ ವಾತಾವರಣ ಉಂಟಾಗಿರುವುದರಿಂದ ಇನ್ನೆರಡು ದಿನಗಳಲ್ಲಿ ದೇಶದ ಮಧ್ಯ ಭಾಗವಾದ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮುಂಗಾರು ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಎಸ್. ಸಿ. ಭಾನ್ ಅವರು ತಿಳಿಸಿದ್ದರೆ.ಈ ವಾರ ಮಳೆ ಬೀಳಲು ಆರಂಭಿಸಿದರೂ ರಭಸದ ಮಳೆಗೆ ಇನ್ನೂ ಒಂದು ವಾರ ಕಾಯಬೇಕಾಗುತ್ತದೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಆದರೆ ಮಳೆಯ ಕೊರತೆಯಿಂದ ಚಿಂತೆಗೀಡಾಗಿರುವ ಕೃಷಿ, ಆಹಾರ ಸಂಸ್ಕರಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು `ಅನಿರೀಕ್ಷಿತ ಸಂದರ್ಭದದ ಯೋಜನೆ~ ಜಾರಿಗೆ ಭರದ ಸಿದ್ಧತೆ ನಡೆಸಿವೆ.ಮುಂಗಾರು ವಿಫಲವಾದರೆ ರೈತರಿಗೆ ತಕ್ಷಣ ವಿತರಿಸಲು ಬರ ನಿರೋಧಕ ಬಿತ್ತನೆ ಬೀಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲು ಕೇಂದ್ರ ಕೃಷಿ ಇಲಾಖೆಯು ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಗೆ ಸೂಚಿಸಿದೆ.ಇದೆ ಸಂದರ್ಭದಲ್ಲಿ ಕೃಷಿ ಸಚಿವಾಲಯವು ದೇಶದ ವಿವಿಧೆಡೆ ಇರುವ 80ಕ್ಕೂ ಹೆಚ್ಚು ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮೇಲೆ ನಿಗಾ ಇಟ್ಟಿದೆ.ಮುಂಗಾರು ಸಂಪೂರ್ಣ ವಿಫಲವಾದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ನೀಡಲು ಅಗತ್ಯವಾದ ಹಣವನ್ನು ತ್ವರಿತವಾಗಿ ಒದಗಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಖಾತೆಯು ಎಲ್ಲಾ ರಾಜ್ಯ ಸರ್ಕಾರಗಳಿಗೆ ಭರವಸೆ ನೀಡಿದೆ.ಬರದಿಂದಾಗಿ  ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾದರೆ ತುರ್ತಾಗಿ ಕಾಮಗಾರಿಗಳನ್ನು ಆರಂಭಿಸಿ ಉದ್ಯೋಗ ಒದಗಿಸಲು ಹಣ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ.ಬರ ಎದುರಿಸಲು ಕೃಷಿ ಇಲಾಖೆ ಅನಿರೀಕ್ಷಿತ ಸಂದರ್ಭದ ಯೋಜನೆಯನ್ನು ಪ್ರಕಟಿಸಿದ ಕೂಡಲೇ ಗೋಧಿ ಮತ್ತು ಅಕ್ಕಿ ರಫ್ತಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಹಾರ ಸಂಸ್ಕರಣ ಮತ್ತು ಗ್ರಾಹಕರ ವ್ಯವಹಾರಗಳ ಖಾತೆಯು ಸಿದ್ಧತೆ ಮಾಡಿಕೊಂಡಿದೆ.ದೇಶದ ಶೇಕಡಾ 83ರಷ್ಟು ಭಾಗದಲ್ಲಿ ಅತಿ ಕಡಿಮೆ ಮೆಳೆ ಆಗಿದೆ ಅಥವಾ ಅಗತ್ಯವಿದ್ದಷ್ಟು ಮಳೆಯಾಗಿಲ್ಲ. ಒಟ್ಟಾರೆ ಶೇಕಡಾ 31ರಷ್ಟು ಮಳೆಯ ಕೊರತೆ ಉಂಟಾಗಿದ್ದು ವಾಯವ್ಯ ಭಾಗದಲ್ಲಿ ಶೇಕಡಾ 71ರಷ್ಟು, ಪಂಜಾಬ್ ಮತ್ತು ಹರ್ಯಾಣದಲ್ಲಿ ಶೇಕಡಾ 38ರಷ್ಟು ಹಾಗೂ ದೇಶದ ಮಧ್ಯ ಭಾಗದಲ್ಲಿ   ಶೇಕಡಾ 27ರಷ್ಟು ಕಡಿಮೆ ಮಳೆಯಾಗಿದೆ.ಆದರೆ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ತುರ್ತು ಸನ್ನಿವೇಶದ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.ಮುಂಗಾರು ಆರಂಭವಾಗುವುದು ಒಂದು ವಾರ ಅಥವಾ 10 ದಿನಗಳಷ್ಟು ತಡವಾಗಬಹುದು. ನಂತರ ಉತ್ತಮವಾಗಿ ಮಳೆಯಾದ ಉದಾಹರಣೆಗಳು ಇರುವುದರಿಂದ ಈಗಲೇ ಗಾಬರಿಪಡಬೇಕಾಗ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ.

ಪ್ರತಿಕ್ರಿಯಿಸಿ (+)