ಭಾನುವಾರ, ಡಿಸೆಂಬರ್ 15, 2019
24 °C
ವಾಟಾಳ್‌ ನಾಗರಾಜ್‌ ಜನ್ಮದಿನ ಕಾರ್ಯಕ್ರಮದಲ್ಲಿ ಎಂ.ವಿ.ರಾಜಶೇಖರನ್‌ ವಿಷಾದ

ದೇಶದಲ್ಲಿ ವಿಷಮ ರಾಜಕೀಯ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ವಿಷಮ ರಾಜಕೀಯ ಸ್ಥಿತಿ

ಬೆಂಗಳೂರು: ‘ದೇಶದಲ್ಲಿ ಸದ್ಯದ ರಾಜ­ಕೀಯ ಪರಿಸ್ಥಿತಿ ವಿಷಮವಾಗಿದೆ. ಭ್ರಷ್ಟಾ­ಚಾರ ಹಾಗೂ ಅಪರಾಧ ಹಿನ್ನೆಲೆಯ ಜನರೇ ಜನಪ್ರತಿನಿಧಿಗಳಾಗಿ ಆರಿಸಿ ಬರುತ್ತಿದ್ದಾರೆ’ ಎಂದು ವಿಧಾನ ಪರಿ­ಷತ್‌ ಸದಸ್ಯ ಎಂ.ವಿ.ರಾಜಶೇಖರನ್‌ ವಿಷಾದಿಸಿದರು.ವಾಟಾಳ್‌ ನಾಗರಾಜ್‌ ಅಭಿಮಾನಿ-ಗಳ ಸಂಘವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರ ಜನ್ಮದಿನ ಕಾರ್ಯ­ಕ್ರಮ­ದಲ್ಲಿ ಅವರು ಮಾತನಾಡಿದರು.‌‘ನಿರಂತರವಾಗಿ ಹೋರಾಟ ಮಾಡಿ­ಕೊಂಡು ಬಂದ ವಾಟಾಳ್‌ ಅವರನ್ನು ಜನ ಚುನಾವಣೆಯಲ್ಲಿ ಸೋಲಿಸಿ­ದ್ದಾರೆ. ವಾಟಾಳ್‌ ಇಲ್ಲದ ಶಾಸನಸಭೆಯನ್ನು ಊಹಿಸಿ­ಕೊಳ್ಳು­ವುದೂ ಸಾಧ್ಯವಿಲ್ಲ’ ಎಂದು ಹೇಳಿದರು.‘ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ­ಯವರಿಗೆ ಮನವಿ ಮಾಡಿದ್ದೆ. ಈ ವಿಷಯ­ವನ್ನು ಅವರಿಬ್ಬರೂ ಮರೆತಿರು­ವಂತಿದೆ. ಜನರ ದನಿಯಾಗಿ ವಾಟಾಳ್‌  ವಿಧಾನಸೌಧದಲ್ಲಿರಬೇಕಾದ್ದು ಅಗತ್ಯ’ ಎಂದರು.ವಿಧಾನ ಪರಿಷತ್‌ ಸದಸ್ಯ ಬಸವ­ರಾಜ ಹೊರಟ್ಟಿ ಮಾತನಾಡಿ, ‘ಅಧಿ­ಕಾರ ಇದ್ದರೂ, ಇರದಿದ್ದರೂ ವಾಟಾಳ್‌ ನಾಗ­ರಾಜ್‌ ಹೋರಾಟ­ದಲ್ಲಿ ಮುಂದಿರು­ತ್ತಾರೆ. ಅವರು ವಿಧಾನ­ಸಭೆಯಲ್ಲಿದ್ದರೆ ಮುತ್ತೈದೆ ಹಣೆಯ ಮೇಲೆ ಕುಂಕುಮ­ವಿದ್ದಂತೆ ವಿಧಾನ­ಸೌಧಕ್ಕೇ ವಿಶೇಷ ಮೆರಗು ಬರುತ್ತಿತ್ತು’ ಎಂದರು.ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಮಾತ­ನಾಡಿ, ‘ರಾಜ್ಯದ ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗಲೆಲ್ಲಾ ವಾಟಾಳ್‌ ದನಿ ಎತ್ತುತ್ತಲೇ ಬಂದಿ­ದ್ದಾರೆ. ಆದರೂ ಜನ ಅವರನ್ನು ಚುನಾವಣೆಯಲ್ಲಿ ಸೋಲಿಸಿರುವುದು ದುರಂತ. ಮುಂದಿನ ಚುನಾವಣೆಯಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾಗಲಿ ಎಂಬುದು ನನ್ನ ಹಾರೈಕೆ’ ಎಂದರು.‘ರೈತರು ಹಳ್ಳಿ ಬಿಡಬಾರದು, ಹಸಿವಿನಿಂದ ಬಳಲಬಾರದು. ಧರ್ಮ, ಜಾತಿಯ ವಿಷ ಬೀಜದ ಮಧ್ಯೆ ಕನ್ನ­ಡತನ ಮರೆಯಾಗುತ್ತಿದೆ. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೂ ದೇಶದಲ್ಲಿ ಸಮಾನತೆ ಸಾಧ್ಯವಿಲ್ಲ’ ಎಂದು ಅವರು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ‘1962ರ ಸೆಪ್ಟೆಂಬರ್ 7ರಂದು ಮೆಜೆಸ್ಟಿಕ್‌ನ ಅಲಂಕಾರ್ ಚಿತ್ರಮಂದಿರದಲ್ಲಿ    ತಮಿಳು ಚಿತ್ರದ ಪ್ರದರ್ಶನದ ವಿರುದ್ಧ ಪ್ರತಿ­ಭಟನೆ ನಡೆಸುತ್ತಿದ್ದಾಗ     ಪೊಲೀಸ್‌ ಅಧಿಕಾರಿ ಲೂಯಿಸ್‌ ಎಂಬಾತ ನನ್ನನ್ನು ಉಪ್ಪಾರಪೇಟೆ ಠಾಣೆಗೆ ಎಳೆದು­ಕೊಂಡು ಹೋಗಿ ಬೂಟುಗಾಲಿನಿಂದ ಒದ್ದ. ಅಂದಿನಿಂದ ಬೂಟಿನ ಏಟು ಬಿದ್ದ ದಿನವೇ ನನ್ನ ಜನ್ಮದಿನವಾಗಿದೆ’ ಎಂದರು.‘ನಾಡಿನಲ್ಲಿ ನನ್ನ ಹೋರಾಟಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ಎಲ್ಲೇ ಹೋದರೂ ಜನ ನನ್ನನ್ನು ಅಭಿಮಾನ­ದಿಂದ ಕಾಣುತ್ತಾರೆ. ಚುನಾವಣೆಯಲ್ಲಿ ಸೋಲು – ಗೆಲುವು ಸಹಜ. ಆದರೆ, ಜನ ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ನಾನು ಋಣಿ’ ಎಂದರು.

ಪ್ರತಿಕ್ರಿಯಿಸಿ (+)