ದೇಶದಾದ್ಯಂತ ಮದ್ಯಪಾನ ನಿಷೇಧ ಅಗತ್ಯ

7

ದೇಶದಾದ್ಯಂತ ಮದ್ಯಪಾನ ನಿಷೇಧ ಅಗತ್ಯ

Published:
Updated:

ಬೆಂಗಳೂರು: `ಔಷಧಿಯಾಗಿ ಉಪಯೋಗವಾಗುವ ದ್ರವ್ಯಗಳು ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯಗಳಾಗಿ ಬಳಕೆಯಾಗುತ್ತಿವೆ~ ಎಂದು ಗೃಹ ಸಚಿವ ಆರ್. ಅಶೋಕ ಕಳವಳ ವ್ಯಕ್ತಪಡಿಸಿದರು.ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ವರದಿಗಾರರ ಕೂಟ, ಗಾಂಧಿ ಸ್ಮಾರಕ ನಿಧಿಯ ಆಶ್ರಯದಲ್ಲಿ ಗಾಂಧಿ ಭವನದಲ್ಲಿ ಬುಧವಾರ ನಡೆದ ಮದ್ಯಪಾನದ ವಿರುದ್ಧ ಮಾಧ್ಯಮ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, `ಒಂದು ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಿದರೆ ಸಾಲದು. ಇಡೀ ದೇಶದಾದ್ಯಂತ ನಿಷೇಧ ಆಗಬೇಕು. ಪಿಡುಗುಗಳ ವಿರುದ್ಧ ಮಾಧ್ಯಮಗಳು ಜಾಗೃತಿ ಮೂಡಿಸಬೇಕು~ ಎಂದರು.`ಯುವಜನತೆಯ ಪಾಶ್ಚಾತ್ಯ ಅನುಕರಣೆ ಕುಡಿತಕ್ಕೆ ಮುಖ್ಯ ಕಾರಣ. ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮದ್ಯಪಾನ ಪ್ರೇರಣೆ ನೀಡುತ್ತದೆ~ ಎಂದರು.ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡಿ, `ರಾಜ್ಯದಲ್ಲಿ 1.45 ಕೋಟಿ ಮದ್ಯವ್ಯಸನಿಗಳಿದ್ದು, ಪ್ರತಿವರ್ಷ 25 ಲಕ್ಷ ಮದ್ಯವ್ಯಸನಿಗಳು ಸೇರ್ಪಡೆಯಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಮಂಡಳಿ ವತಿಯಿಂದ ಜೂನ್ 19ರಿಂದ 26ರ ವರೆಗೆ ರಾಜ್ಯದಾದ್ಯಂತ ಮದ್ಯಪಾನ ವಿರೋಧಿ ಸಪ್ತಾಹ ನಡೆಸಲಾಗುವುದು~ ಎಂದು ತಿಳಿಸಿದರು.ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೋ. ಶ್ರೀನಿವಾಸಯ್ಯ, `ಮಯೂರ~ ಸಹಾಯಕ ಸಂಪಾದಕಿ ಡಾ.ಆರ್. ಪೂರ್ಣಿಮಾ, ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎಚ್.ಬಿ. ದಿನೇಶ್, ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ. ಪ್ರಭಾಕರ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಬಿ.ಆರ್. ಮಮತಾ ಮತ್ತಿತರರು ಉಪಸ್ಥಿತರಿದ್ದರು.ಶೇ 50 ಆತಂಕಿತ ಮದ್ಯವ್ಯಸನಿಗಳು: `ಮದ್ಯವ್ಯಸನಿಗಳಲ್ಲಿ ಶೇ 50 ಮಂದಿ ಆತಂಕಕಾರಿ ಮದ್ಯವ್ಯಸನಿಗಳು. ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಪ್ರತಿ ಐದು ರೋಗಿಗಳಲ್ಲಿ ಒಬ್ಬರು ಮದ್ಯಪಾನ ಸಂಬಂಧಿತ ಕಾಯಿಲೆ ಪೀಡಿತರು~ ಎಂದು ಉಡುಪಿಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಬಹಿರಂಗಪಡಿಸಿದರು.ಕಾರ್ಯಾಗಾರದಲ್ಲಿ ಅವರು ಮಾತನಾಡಿ, `ಅಪಘಾತ ನಡೆಸಿ ತುರ್ತು ನಿಗಾ ಘಟಕಕ್ಕೆ ದಾಖಲಾಗುವವರಲ್ಲಿ ಶೇ 70 ಮಂದಿ ಮದ್ಯವ್ಯಸನಿಗಳು. ಆತ್ಮಹತ್ಯೆ ಮಾಡಿಕೊಳ್ಳುವ ಮೂವರಲ್ಲಿ ಒಬ್ಬರು ಕುಡುಕರು. ಪ್ರತಿವರ್ಷ ಮದ್ಯ ಮಾರಾಟ ಪ್ರಮಾಣ ಶೇ 7ರಷ್ಟು ಜಾಸ್ತಿ ಆಗುತ್ತಿದೆ. ಅಬಕಾರಿ ಆದಾಯದಿಂದ ಬರುವ ಶೇ 10ರಷ್ಟನ್ನು ಸಂಶೋಧನಾ ಚಟುವಟಿಕೆಗೆ ಮೀಸಲು ಇಡಬೇಕು~ ಎಂದು ಅವರು ಆಗ್ರಹಿಸಿದರು.`ಮದ್ಯದ ಮಾರಾಟ ಹೆಚ್ಚಾದಷ್ಟು ಸರ್ಕಾರ ಬೊಕ್ಕಸಕ್ಕೆ ನಷ್ಟ ಆಗುತ್ತದೆ ಎಂದು ಬೆಂಗಳೂರಿನ ನಿಮ್ಹಾನ್ಸ್ ಆರೋಗ್ಯ ಸಂಸ್ಥೆಯ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಮದ್ಯ ಮಾರಾಟ ಹೆಚ್ಚಳದಿಂದ ಹೆಚ್ಚಿನ ಜನರು ಮದ್ಯವ್ಯಸನಿಗಳಾಗುತ್ತಾರೆ. ಆರೋಗ್ಯ ತೊಂದರೆ ಹೆಚ್ಚಿ ಆರ್ಥಿಕ ಸಂಪನ್ಮೂಲ ಹದಗೆಡುತ್ತದೆ.ಆಗ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗುತ್ತದೆ. ಅಬಕಾರಿ ಸುಂಕದಿಂದ ಬಂದ ಶೇ 60ರಷ್ಟನ್ನು ಮದ್ಯವ್ಯಸನ ಸಂಬಂಧಿತ ಕಾಯಿಲೆಗೆ ವೆಚ್ಚ ಮಾಡಲಾಗುತ್ತಿದೆ~ ಎಂದರು.

ಕಾನೂನು ಸಚಿವ ಆರ್. ಸುರೇಶ್ ಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry