ಶನಿವಾರ, ನವೆಂಬರ್ 23, 2019
18 °C

`ದೇಶದ ಋಣ ತೀರಿಸುವೆ'

Published:
Updated:

ಅಹಮದಾಬಾದ್: ದೇಶದ ಸಮಗ್ರ ಅಭ್ಯುದಯ ಪ್ರತಿಪಾದಿಸಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಗುರುವಾರ ಮಾತನಾಡಿರುವ ದಿನವೇ ಬಿಜೆಪಿ ಪಾಳಯದಲ್ಲಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ಗುಜರಾತ್ ಮುಖ್ಯಮಂತ್ರಿ  ನರೇಂದ್ರ ಮೋದಿ, `ದೇಶದ ಋಣ ತೀರಿಸಲು ಉತ್ಸುಕನಾಗಿದ್ದೇನೆ' ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಆಕಾಂಕ್ಷೆಯನ್ನು ಬಿಚ್ಚಿಟ್ಟಿದ್ದಾರೆ.ಮಾಜಿ ಅಧಿಕಾರಿ ಆರ್.ಪಿ. ಗುಪ್ತಾ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, `ನಾನೂ ಸೇರಿದಂತೆ ಪ್ರತಿಯೊಬ್ಬರು ದೇಶದ ಋಣ ತೀರಿಸಬೇಕಿದೆ' ಎಂದರು.ಮೋದಿ ಅವರಿಗಿಂತ ಮುನ್ನ ಮಾತನಾಡಿದ್ದ ಗುಪ್ತಾ `ಮೋದಿ, ಗುಜರಾತ್ ಋಣ ತೀರಿಸಿದ್ದಾಗಿದೆ. ಈಗ ದೇಶದ ಋಣ ತೀರಿಸುವ ಸಮಯ ಬಂದಿದೆ' ಎಂದಿದ್ದರು.ಗುಪ್ತಾ ಮಾತಿಗೆ ಮಾರ್ಮಿಕವಾಗಿ ಉತ್ತರಿಸಿದ ಮೊದಿ `ನಾನು ದೇಶದ ಋಣ ತೀರಿಸಲೇಬೇಕಾಗಿದೆ ಎಂದು ಈಗಷ್ಟೆ ಗುಪ್ತಾಜಿ ಹೇಳಿದ್ದಾರೆ. ಆದರೆ ನಾನು ಅವರಿಗೆ ಹೇಳುವುದಿಷ್ಟೆ, ಈ ಜವಾಬ್ದಾರಿ ನನ್ನದಷ್ಟೇ ಅಲ್ಲ. ದೇಶದ ಎಲ್ಲರೂ ಋಣ ತೀರಿಸಬೇಕಿದೆ' ಎಂದರು. ರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಪಾತ್ರ ವಹಿಸುವ ತಮ್ಮ ಇಚ್ಛೆಯನ್ನು ಈ ಮೂಲಕ ಮೋದಿ ವ್ಯಕ್ತಪಡಿಸಿದರು.`ರಾಷ್ಟ್ರಮಟ್ಟದಲ್ಲಿ ಪ್ರಧಾನ ಪಾತ್ರವಹಿಸುವ ಮುಖ್ಯಮಂತ್ರಿಯೊಬ್ಬರ ಮಹದಾಸೆಯ ಜತೆಗೆ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಸೂಚಿಯೂ ಇದೇ ಆಗಿದೆ' ಎಂದು ರಾಜಕೀಯ ವಿಶ್ಲೇಷಕ ವಿಷ್ಣು ಪಾಂಡ್ಯ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)