ಶುಕ್ರವಾರ, ಡಿಸೆಂಬರ್ 6, 2019
17 °C

ದೇಶದ ಗಡಿಗಳು ಸುರಕ್ಷಿತವಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಗಡಿಗಳು ಸುರಕ್ಷಿತವಾಗಿಲ್ಲ

ಬೀದರ್: `ಭಾರತದ ನಕಾಶೆಯಲ್ಲಿ ಮುಕುಟ ಮಣಿಯಂತಿರುವ ಕಾಶ್ಮೀರವೇ ಕಾಣೆಯಾಗಿದೆ. ಕೈಗಳಂತಿರುವ ಅರುಣಾಚಲ-ಸಿಕ್ಕಿಂ ಕತ್ತರಿಸಿ ಬಿದ್ದಿವೆ. ದೇಶದ ಗಡಿಗಳು ಸುರಕ್ಷಿತವಾಗಿಲ್ಲ~ ಹೀಗೆಂದು ಆತಂಕ ವ್ಯಕ್ತಪಡಿಸಿದವರು ಇಂಧನ ಸಚಿವೆ ಶೋಭಾ ಕರಂದ್ಲಾಜೆ.ರಾಮಕೃಷ್ಣ ವಿವೇಕಾನಂದ ಆಶ್ರಮ ಗುರುವಾರ ಏರ್ಪಡಿಸಿದ್ದ ವಿವೇಕಾನಂದರ 150ನೇ ಜಯಂತಿ ವರ್ಷಾಚರಣೆ ಉದ್ಘಾಟಿಸಿ ಮಾತನಾಡಿದರು.ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ನಕ್ಸಲಿಸಂನ ಪಾಠ ಹೇಳುತ್ತಿರುವ ವರದಿಗಳು ಬರುತ್ತಿವೆ. ಸ್ಲಮ್ಮುಗಳಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಕೆಎಫ್‌ಡಿಯಂತಹ ಸಂಸ್ಥೆಗಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ನಿರತವಾಗಿವೆ. ಲಕ್ಷಾಂತರ ಯುವತಿಯರು ಕಣ್ಮರೆ ಆಗುತ್ತಿದ್ದಾರೆ. ಅವರೆಲ್ಲ ಎಲ್ಲಿಗೆ ಹೋಗುತ್ತಿದ್ದಾರೆ? ಏನಾಗುತ್ತಿದ್ದಾರೆ? ಎಂದು ಯಾರಿಗೂ ಗೊತ್ತಿಲ್ಲ. ಇಂತಹ ಭಯಾನಕ ದಿನಗಳಲ್ಲಿ ಸಮಾಜ ಮತ್ತು ದೇಶ ಕಟ್ಟುವ ಸವಾಲು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.ದೇಶದ ಚಿತ್ರಣವನ್ನೇ ಬದಲಿಸಬಲ್ಲ ಆದರ್ಶ ವ್ಯಕ್ತಿತ್ವ ನಿರ್ಮಾಣ ಅಗತ್ಯವಾಗಿದೆ. ಯುವಕರು ತಮ್ಮ ಜೀವನದಲ್ಲಿ ಅಗಾಧವಾದುದ್ದನ್ನು ಸಾಧಿಸಬೇಕು. ಅದ್ಭುತ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಸ್ವಾಮಿ ವಿವೇಕಾನಂದ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಗದಗ- ವಿಜಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.ದೇಶದಲ್ಲಿ ಶೇ. 60 ರಷ್ಟು ಯುವಕರಿದ್ದಾರೆ. ಆದರೆ, ಅವರಿಗೆ ರಾಜಕೀಯದಲ್ಲಿ ಸಿಗುತ್ತಿರುವ ಪ್ರಾತಿನಿಧ್ಯ ಶೇ. 2 ರಷ್ಟು ಮಾತ್ರವಾಗಿದೆ ಎಂದು ಶಾಸಕ ರಹೀಮ್‌ಖಾನ್ ಬೇಸರ ವ್ಯಕ್ತಪಡಿಸಿದರು.ಯುವಕರು ರಾಜಕೀಯ ಹಾಗೂ ರಾಜಕಾರಣಿಗಳ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಬೆಳೆಸಿಕೊಳ್ಳಬೇಕು ಎಂದು ನೇತೃತ್ವ ವಹಿಸಿದ್ದ ಹಾರಕೂಡದ ಚನ್ನವೀರ ಶಿವಾಚಾರ್ಯರು ನುಡಿದರು. ದೇಶದ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹೊಣೆ ಯುವಕರ ಮೇಲಿದೆ ಎಂದರು.ವಿವೇಕಾನಂದರ ವಿಚಾರಗಳು ಅದ್ಭುತವಾಗಿವೆ. ಯುವಕರ ಭವಿಷ್ಯ ಅಂಗೈಯಲ್ಲಿಲ್ಲ, ಮುಂಗೈಯಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು. ಸಮಸ್ಯೆಯ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳದೇ, ಆತ್ಮಸ್ಥೈರ್ಯದಿಂದ ಯಶಸ್ಸು ಸಾಧಿಸಬೇಕು ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಹೇಳಿದರು.ತುಮಕೂರಿನ ವೀರೇಶಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬೀದರ್ ರಾಮಕೃಷ್ಣ - ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಯೋಗೇಶ್ವರಾನಂದ ಸ್ವಾಮೀಜಿ, ವಿಜಯಾನಂದ ಸ್ವಾಮೀಜಿ, ವಿನಯಾನಂದ ಸ್ವಾಮೀಜಿ ಸಂಕೀರ್ತನೆ ನಡೆಸಿಕೊಟ್ಟರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಭೀಮರಾಯನಗುಡಿ ಕಾಡಾ ನಿರ್ದೇಶಕ ಮುನಿಷ್ ಮೌದ್ಗಿಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾರಾಯಣರಾವ ಮನ್ನಳ್ಳಿ, ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ ಕಲ್ಲೂರು, ಪ್ರಮುಖರಾದ ಕಾಶಿನಾಥರಾವ ವಿಶ್ವಕರ್ಮ, ರೇವಣಸಿದ್ದಪ್ಪ ಜಲಾದೆ, ಉಪೇಂದ್ರ ದೇಶಪಾಂಡೆ, ಪೂರ್ಣಿಮಾ ಜಾರ್ಜ್, ಗುರುನಾಥ ಕೊಳ್ಳುರು, ಬಿ.ಎಸ್. ಕುದರೆ, ಅಬ್ದುಲ್ ಖದೀರ್ ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ. ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಸ್ವಾಗತಿಸಿದರು. ಸ್ವರೂಪರಾಣಿ ಮತ್ತು ಧನಂಜಯ ನಿರೂಪಿಸಿದರು. ಚನ್ನಬಸಪ್ಪ ಹಾಲಹಳ್ಳಿ ವಂದಿಸಿದರು.

ಪ್ರತಿಕ್ರಿಯಿಸಿ (+)