ಶನಿವಾರ, ಮೇ 15, 2021
22 °C

ದೇಶದ ಪ್ರಗತಿಗೆ ಶಿಕ್ಷಣವೇ ಅಸ್ತ್ರ: ಮಹಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಸುಭದ್ರವಾದ ದೇಶ ನಿರ್ಮಾಣಕ್ಕೆ ಶಿಕ್ಷಣವೇ ಅಸ್ತ್ರ. ಈ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ~ ಎಂದು ಮಾಜಿ ಶಾಸಕ ಮಹಿಮ ಪಟೇಲ್ ಹೇಳಿದರು.ನಗರದ ಸೇವಾಭಾರತಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೇದಿಕೆಯ ಸಮಾರೋಪದಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ವಿದ್ಯಾದಾನವೇ ಶ್ರೇಷ್ಠವಾದುದು. ಉತ್ತಮ ಶಿಕ್ಷಣ ಪಡೆದರೆ ವಿಶ್ವದ ಎಲ್ಲೆಡೆ ನೆಮ್ಮದಿಯಿಂದ ಬದುಕಬಹುದು. ಹೀಗಾಗಿ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಪೋಷಕರು ವಿಶೇಷ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು.ಛಲವಾದಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಬಸವರಾಜು ಮಾತನಾಡಿ, `ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತರಲ್ಲ. ಅವರು ರಚಿಸಿದ ಸಂವಿಧಾನದ ಮೂಲಕ ಲಕ್ಷಾಂತರ ಮಂದಿ ಮೀಸಲಾತಿಯಡಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ~ ಎಂದು ಹೇಳಿದರು.ಭಾರತೀಯ ಸಹಕಾರ ಬ್ಯಾಂಕ್ ಅಧ್ಯಕ್ಷ ಉಡಿಗಾಲ ಕುಮಾರಸ್ವಾಮಿ ಮಾತನಾಡಿ, `ಪ್ರಸ್ತುತ ಸರ್ಕಾರಗಳು ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿವೆ. ಉಚಿತ ಊಟದ ವ್ಯವಸ್ಥೆಯೂ ಇದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಅಕ್ಕಿ ಪೂರೈಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ~ ಎಂದು ಒತ್ತಾಯಿಸಿದರು.ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಂ. ಮಹದೇವು ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಆಲಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ. ಜತೆಗೆ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುವುದು ಮುಖ್ಯ~ ಎಂದು ಹೇಳಿದರು.ಅಖಿಲ ಭಾರತ ಕುಟುಂಬ ಪ್ರಭೋದನ್ ಪ್ರಮುಖ್ ಸು. ರಾಮಣ್ಣ ಮಾತನಾಡಿದರು. ಪ್ರಾಂಶುಪಾಲ ಟಿ.ಎ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು.ಸೇವಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾ. ವೆಂಕಟರಾಮು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಆರ್. ಅಶೋಕ್, ಸಂಸ್ಥೆಯ ಉಪಾಧ್ಯಕ್ಷ ಸುಬ್ಬಣ್ಣ, ಕಾರ್ಯದರ್ಶಿ ವಾಸುದೇವ್‌ರಾವ್, ಆಡಳಿತಾಧಿಕಾರಿ ರಮೇಶ್ ಇತರರು ಹಾಜರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.