ಗುರುವಾರ , ನವೆಂಬರ್ 21, 2019
26 °C
ನಗರದ `ಮಿಫ್ಟ್' ಕಾಲೇಜಿನ ಮತ್ತೊಂದು ಮೈಲಿಗಲ್ಲು

ದೇಶದ ಪ್ರಥಮ ಪತ್ತೇದಾರಿ ವಿಜ್ಞಾನ ಪದವಿ ತಂಡ ಸಜ್ಜು

Published:
Updated:

ಮಂಗಳೂರು: ಅಪರಾಧಗಳನ್ನು ಪತ್ತೆಹಚ್ಚುವುದು ಸಹ ಒಂದು ಪದವಿ ಶಿಕ್ಷಣ, ಇಂತಹ ಶಿಕ್ಷಣ ಪಡೆದವರಿಗೆ ಉತ್ತಮ ಉದ್ಯೋಗ ಅವಕಾಶ ಇದೆ, ಪೊಲೀಸ್ ವೃತ್ತಿಗೆ ತೆರಳುವವರು ಈ ಕೋರ್ಸ್ ಮಾಡಿದ್ದೇ ಆದರೆ ಅವರ ಕಾರ್ಯಕ್ಷಮತೆ ಹೆಚ್ಚುವುದು ನಿಶ್ಚಿತ... ಇಂತಹ ವಿಶಿಷ್ಟ ಸಂದೇಶ ಸಾರಿದ ಎಂಟು ವಿದ್ಯಾರ್ಥಿಗಳ ದೇಶದ ಪ್ರಥಮ ತಂಡ ಪದವಿ ಗಳಿಸಿಕೊಳ್ಳಲು ತುದಿಗಾಲಲ್ಲಿ ನಿಂತುಕೊಂಡಿದೆ.ನಗರದ ಅತ್ತಾವರದಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಮಿಫ್ಟ್) ಕಾಲೇಜಿನಲ್ಲಿ ಮೂರು ವರ್ಷಗಳ ಹಿಂದೆ ಆರಂಭಿಸಲಾದ ಭದ್ರತೆ ಮತ್ತು ಪತ್ತೇದಾರಿ ವಿಜ್ಞಾನದ (ಸೆಕ್ಯುರಿಟಿ ಅಂಡ್ ಡಿಕೆಕ್ಟೀವ್ ಸೈನ್ಸ್) ಬಿ.ಎ. ಪದವಿಯ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಂಗಳವಾರ ಇಟ್ಟುಕೊಳ್ಳಲಾಗಿತ್ತು. ಆ ಹಿನ್ನೆಲೆಯಲ್ಲಿ ಕಾಲೇಜಿನ ನಿರ್ದೇಶಕ ಎಂ.ಜಿ.ಹೆಗಡೆ ಅವರು ಪತ್ರಕರ್ತರಿಗೆ ಈ ಪದವಿ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.`ಪತ್ತೇದಾರಿ ವಿಜ್ಞಾನ ವ್ಯಾಸಂಗಕ್ಕೆ ಇದುವರೆಗೆ ಇದ್ದುದು ಡಿಪ್ಲೊಮಾದಂತಹ ಅಲ್ಪಾವಧಿಯ ಕೋರ್ಸ್‌ಗಳು ಮಾತ್ರ. ಆದರೆ ಏನಾದರೂ ಒಂದು ವಿಶಿಷ್ಟವಾದುದನ್ನು ಮಾಡಬೇಕು, ಯುವಜನತೆಗೆ ಎಂಜಿನಿಯರಿಂಗ್‌ಗೆ ಹೊರತಾದ ಜಗತ್ತು ಕೂಡ ಇದೆ ಎಂಬುದನ್ನು ತೋರಿಸಿಕೊಡಬೇಕು ಎಂಬ ಉದ್ದೇಶದೊಂದಿಗೆ ಮಂಗಳೂರು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಪತ್ತೇದಾರಿ ವಿಜ್ಞಾನದಲ್ಲಿ ಪದವಿ ಆರಂಭಿಸುವ ವಿಚಾರ ಮಂಡಿಸಿದೆ.ವಿಶ್ವವಿದ್ಯಾಲಯ ಸೂಚಿಸಿದಂತೆ 30 ಬಗೆಯ ವಿಷಯಗಳನ್ನು ಕಲೆ ಹಾಕಿಕೊಂಡು ಪಠ್ಯಕ್ರಮ ರಚಿಸಿ, ವಿಶ್ವವಿದ್ಯಾಲಯದ ಅನುಮತಿ ಪಡೆದು ಇದೀಗ ಪ್ರಥಮ ತಂಡ ಅಂತಿಮ ಪರೀಕ್ಷೆಗೆ ಸಜ್ಜಾಗಿದೆ. ಇವರೆಲ್ಲರಿಗೆ ಕೈತುಂಬ ಸಂಬಳದ ಕೆಲಸ ನಿಶ್ಚಿತ' ಎಂದು ಅವರು ಹೇಳಿದರು.`ಅಪರಾಧ ಕೃತ್ಯಗಳ ಪತ್ತೆ ಹಚ್ಚುವಿಕೆಗೆ ಪೊಲೀಸರಿಗೆ ಹಲವಾರು ವರ್ಷಗಳ ತರಬೇತಿ ನೀಡಲಾಗಿರುತ್ತದೆ. ಇದು ಒಂದು ರೀತಿಯಲ್ಲಿ ಮಾನವ ಸಂಪನ್ಮೂಲದ ವ್ಯರ್ಥ ಎನ್ನಬೇಕು. ಆದರೆ ಇಲ್ಲಿ ಇದನ್ನೇ ಕಲಿತ ವಿದ್ಯಾರ್ಥಿಗಳು ಪೊಲೀಸರಿಗೆ ನೆರವಾಗುತ್ತಾರೆ.ದೇಶದಲ್ಲಿ 300ಕ್ಕೂ ಅಧಿಕ ಖಾಸಗಿ ಭದ್ರತಾ ಕಂಪೆನಿಗಳಿದ್ದು, ಅಲ್ಲಿಗೆಲ್ಲ ತಜ್ಞರು ಬೇಕಾಗಿರುತ್ತಾರೆ. ಕಾನೂನು, ಮನಃಶಾಸ್ತ್ರ, ದೇಹರಚನಾ ಶಾಸ್ತ್ರ ಸಹಿತ ವಿಜ್ಞಾನ, ಕಲೆಗೆ ಸಂಬಂಧಿಸಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ. ವಿಜ್ಞಾನದ ವಿಚಾರಗಳು ಕಡಿಮೆ ಇರುವುದರಿಂದ ಮಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಬಿ.ಎ. ಪದವಿ ಒದಗಿಸಿದೆ' ಎಂದು ಅವರು ಹೇಳಿದರು.ಕಾಲೇಜಿನ ಪ್ರಾಚಾರ್ಯೆ ಚಂದ್ರಲೇಖಾ ಗೌಡ ಇದ್ದರು. ಹಲವು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. `ಮಿಫ್ಟ್' ಕಾಲೇಜು ಫ್ಯಾಷನ್ ಡಿಸೈನಿಂಗ್ ವಿಷಯದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಪದವಿ ಶಿಕ್ಷಣ ಆರಂಭಿಸಿದ ಹೆಗ್ಗಳಿಕೆಯನ್ನು ಈಗಾಗಲೇ ಗಳಿಸಿಕೊಂಡಿದೆ.ಪ್ರಾತ್ಯಕ್ಷಿಕೆ: ಪತ್ತೇದಾರಿಯ ಮೂಲಗಳು ಏನೇನು, ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳು ನಾಶವಾಗದಂತೆ ಮೊದಲಾಗಿ ಎಂತಹ ಎಚ್ಚರಿಕೆ ವಹಿಸಬೇಕು, ಅಗ್ನಿ ಆಕಸ್ಮಿಕಗಳಲ್ಲಿ ಹೇಗೆ ಪ್ರಥಮ ಚಿಕಿತ್ಸೆ ಒದಗಿಸಬೇಕು? ಕೊಳೆತುಹೋದ ಅಪರಿಚಿತ ಶವ ಗಂಡಸಿನದೋ, ಹೆಂಗಸಿನದೋ ಎಂದು ತಿಳಿಯುವುದು ಹೇಗೆ ಮೊದಲಾದ ಹತ್ತಾರು ಅಂಶಗಳನ್ನು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟದ್ದು ವಿಶಿಷ್ಟವಾಗಿತ್ತು.ಪೊಲೀಸ್ ಪರೀಕ್ಷೆ: ಪತ್ತೇದಾರಿ ವಿದ್ಯಾರ್ಥಿಗಳಿಂದ ಒತ್ತಡ

ದೇಶದಲ್ಲಿ ಇದೇ ಪ್ರಥಮ ಬಾರಿಗೆ ಪತ್ತೇದಾರಿ ಪದವಿಯ ಮೂಲಕ ವಿದ್ಯಾರ್ಥಿಗಳು ಹೊರಬರತೊಡಗಿದ್ದಾರೆ. ಇವರಲ್ಲಿ ಹೆಚ್ಚಿನವರು ಪೊಲೀಸ್ ಪರೀಕ್ಷೆ ಬರೆದು ಮುಂದೆ ಪೊಲೀಸ್ ಆಧಿಕಾರಿಗಳಾಗುವ ಕನಸು ಕಟ್ಟಿಕೊಂಡಿದ್ದಾರೆ.ಶಾಸ್ತ್ರೀಯ ಶಿಕ್ಷಣ ಪೂರೈಸಿರುವ ಇವರ ಅರ್ಹತೆ, ಪ್ರಾಯೋಗಿಕ ಅನುಭವ ಕಂಡರೆ ಮುಂದಿನ ದಿನಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ `ಕೃಪಾಂಕ' ಅಥವಾ ಇನ್ಯಾವುದಾದರೂ ರೀತಿಯಲ್ಲಿ ಪೊಲೀಸ್ ಪರೀಕ್ಷೆಯಲ್ಲಿ ನೆರವಾಗುವ ದಾರಿ ಸಿಗುವ ಸಾಧ್ಯತೆ ಇದೆ. ಹೊರಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದರೆ ಒತ್ತಡ ತನ್ನಿಂದ ತಾನೇ ಸೃಷ್ಟಿಯಾಗುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿ (+)