ದೇಶದ ಮೆಟ್ರೊ ಇತಿಹಾಸದಲ್ಲೇ ದೊಡ್ಡದು

7

ದೇಶದ ಮೆಟ್ರೊ ಇತಿಹಾಸದಲ್ಲೇ ದೊಡ್ಡದು

Published:
Updated:

ಬೆಂಗಳೂರು: `ಗೊಟ್ಟಿಗೆರೆ ಹಾಗೂ ನಾಗವಾರದ ನಡುವೆ ಹಾದು ಹೋಗಲಿರುವ 12 ಕಿ.ಮೀ. ದೂರದ ಸುರಂಗ ಮಾರ್ಗ ದೇಶದ ಮೆಟ್ರೊ ಇತಿಹಾಸದಲ್ಲೇ ದೊಡ್ಡ ಸುರಂಗ ಮಾರ್ಗ ಎನಿಸಲಿದೆ. ನಮ್ಮ ಮೆಟ್ರೊದ ಎರಡನೇ ಹಂತದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ~ ಎಂದು `ನಮ್ಮ ಮೆಟ್ರೊ~ದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ತಿಳಿಸಿದರು.ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ಲ್ಯಾವೆಲ್ಲೆ ರಸ್ತೆಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ `ನಮ್ಮ ಮೆಟ್ರೊ~ ಕುರಿತು ಅವರು ಉಪನ್ಯಾಸ ನೀಡಿ, `ಗೊಟ್ಟಿಗೆರೆ ಹಾಗೂ ನಾಗವಾರ ನಡುವೆ 5 ಕಿ.ಮೀ ಮಾರ್ಗ ಮಾತ್ರ ನೆಲದ ಮೇಲೆ ಇರುತ್ತದೆ. ಮೆಟ್ರೊಗೆ ಇದೊಂದು ಮಹತ್ವದ ಹಾಗೂ ಸವಾಲಿನ ಕೆಲಸ~ ಎಂದರು.`ನಮ್ಮ ಮೆಟ್ರೊದ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿದ್ದು, ಈ ವರ್ಷದ ಕೊನೆಯೊಳಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಎರಡನೇ ಹಂತದಲ್ಲಿ ಮೈಸೂರು ರಸ್ತೆ- ಕೆಂಗೇರಿ ನಡುವೆ, ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ನಡುವೆ, ಪುಟ್ಟೇನಹಳ್ಳಿ- ಅಂಜನಾಪುರದ ನಡುವೆ, ಆರ್.ವಿ. ರಸ್ತೆ- ಬೊಮ್ಮಸಂದ್ರ- ಎಲೆಕ್ಟ್ರಾನಿಕ್ ಸಿಟಿ ನಡುವೆ, ಗೊಟ್ಟಿಗೆರೆ- ನಾಗವಾರ ನಡುವೆ ಸೇರಿದಂತೆ ಆರು ಕಡೆಗಳಲ್ಲಿ ಕಾಮಗಾರಿ ನಡೆಯಲಿದೆ. ಕಾಮಗಾರಿಯ ಒಟ್ಟು ವೆಚ್ಚ ರೂ 26,405 ಕೋಟಿ~ ಎಂದು ಅವರು ಮಾಹಿತಿ ನೀಡಿದರು.`ಕೆಂಗೇರಿಯಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗುವುದರಿಂದ ಮೈಸೂರಿಗೆ ಸಂಪರ್ಕ ಸುಲಭವಾಗಲಿದೆ. ಪ್ರಯಾಣಿಕರಿಗೆ 45 ನಿಮಿಷ ಉಳಿತಾಯವಾಗಲಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ~ ಎಂದರು.`ನಮ್ಮ ಮೆಟ್ರೊ ಮೊದಲ ಹಂತದ ಕಾಮಗಾರಿ ರೂ 11,609 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಮೆಜೆಸ್ಟಿಕ್ ನಿಲ್ದಾಣ ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳು 2013ರ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ.ವಿಧಾನಸೌಧದ ಬಳಿಯ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿವಾದ ಇನ್ನೂ ಬಗೆಹರಿದಿಲ್ಲ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಸಾಗಿದೆ~ ಎಂದರು.`ದೇಶದ ಯಾವ ಮೆಟ್ರೊ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಸೌಲಭ್ಯ ಕಲ್ಪಿಸುತ್ತಿಲ್ಲ. ಆದರೂ ಬೆಂಗಳೂರು ಮೆಟ್ರೊ ರೈಲು ನಿಗಮವು ಬೈಯಪ್ಪನಹಳ್ಳಿ, ಅಲಸೂರು ನಿಲ್ದಾಣಗಳಲ್ಲಿ ಕಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿತು.ಆದರೆ ಅಲ್ಲಿ ಕಾರು ನಿಲ್ಲಿಸುವವರು ಬೆರಳೆಣಿಕೆಯಷ್ಟು. ಇಲ್ಲಿನ ನಿಲ್ದಾಣಗಳಲ್ಲಿ ಐದು ಗಂಟೆಗೆ ರೂ 100 ಶುಲ್ಕ ವಿಧಿಸಲಾಗುತ್ತದೆ. ಮೆಟ್ರೊದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಬೇಕು ಎಂಬುದು ಸಂಸ್ಥೆಯ ಉದ್ದೇಶ. ಪುನಃ ಕಾರು ಪಾರ್ಕಿಂಗ್‌ಗೆ ಸ್ಥಳ ಮೀಸಲಿಡುವ ಅಗತ್ಯ ಏನಿದೆ~ ಎಂದು ಅವರು ಪ್ರಶ್ನಿಸಿದರು.`ನಮ್ಮ ಮೆಟ್ರೊ ಸೇವೆ ಆರಂಭವಾಗಿ ಆರು ತಿಂಗಳು ಕಳೆದಿದೆ. ಮೆಟ್ರೊ ನಿರ್ವಹಣಾ ವೆಚ್ಚ ಕಳೆದು ಆರು ತಿಂಗಳಲ್ಲಿ ಸಂಸ್ಥೆ ರೂ 4 ಲಕ್ಷ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಲಾಭ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ~ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry