ಮಂಗಳವಾರ, ಮೇ 11, 2021
24 °C

ದೇಶದ ಮೊದಲ ದಲಿತ ಬ್ಯಾಂಕ್?

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

`ರಾಷ್ಟ್ರೀಕರಣ ನಂತರ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸಮಗ್ರವಾಗಿ ಬದಲಾಯಿತು. ಬ್ಯಾಂಕುಗಳಿರುವುದು ಉದ್ಯಮಿಗಳಿಗೆ ಸಾಲ ನೀಡಲು ಮಾತ್ರ ಎನ್ನುವ ಕಲ್ಪನೆ ಬದಲಾಗಿ, ಜನಸಾಮಾನ್ಯರಿಗೂ ಬ್ಯಾಂಕಿಂಗ್ ಫಲಗಳು ಲಭಿಸತೊಡಗಿದವು. ಜಾಗತೀಕರಣದ ಬೆನ್ನಿಗಂಟಿಕೊಂಡೇ ಬಂದ ಉದಾರೀಕರಣ, ಬ್ಯಾಂಕುಗಳ ಅಸ್ತಿತ್ವವನ್ನು ಗಟ್ಟಿಗೊಳಿಸಿ, ಹರವು ವಿಸ್ತರಿಸಿದವು.ಆದರೆ, ವಾಣಿಜ್ಯ ವಿಸ್ತರಣೆಯ ನಾಗಾಲೋಟದಲ್ಲಿ ಬ್ಯಾಂಕುಗಳು ಜನರಿಗೆ ಸಾಲ ಪಡೆದುಕೊಳ್ಳುವುದನ್ನು ಮಾತ್ರ ಕಲಿಸಿದವು. ಸಾಲ ಮರು ಪಾವತಿಸುವುದನ್ನು ಕಲಿಸಲಿಲ್ಲ. ಬಡವರು ಇನ್ನಷ್ಟು ಬಡವರಾಗುವ ಈ ಅಭಿವೃದ್ಧಿಯ ಪ್ರಕ್ರಿಯೆಯು ಇಂದು ಬಹು ದೊಡ್ಡ ಆರ್ಥಿಕ ಅಸಮತೋಲನಕ್ಕೂ ಕಾರಣವಾಗಿದೆ~ ಎನ್ನುತ್ತಾರೆ ಕೆನರಾ ಬ್ಯಾಂಕ್ ಎಸ್‌ಸಿ-ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪುರುಷೋತ್ತಮ್ ದಾಸ್.37 ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಅವರು, ಇದೀಗ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗಾಗಿಯೇ ಪ್ರತ್ಯೇಕ ಬ್ಯಾಂಕ್ ಆರಂಭಿಸುವ ಚಿಂತನೆ ನಡೆಸಿದ್ದಾರೆ. ದಲಿತರಿಗಾಗಿಯೇ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆಯೇ? ಎಂಬ ಪ್ರಶ್ನೆ ಮುಂದಿಟ್ಟರೆ ಅವರು ಈ ಮೇಲಿನ ವಿವರಣೆ ನೀಡುತ್ತಾರೆ.`ಬ್ಯಾಂಕುಗಳ ಮೂಲ ಉದ್ದೇಶ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ~ ಎನ್ನುವ ದಾಸ್, ಬಡವರಿಗಾಗಿ ಈಗಿರುವ ಯೋಜನೆಗಳನ್ನೇ ಬ್ಯಾಂಕುಗಳು ಸಮರ್ಥವಾಗಿ ಜಾರಿಗೊಳಿಸಿದರೆ, ಅದರಿಂದಲೇ ಸಾಕಷ್ಟು ಬದಲಾವಣೆಗಳನ್ನು ತರಬಹುದು. ಆದರೆ, ವಾಣಿಜ್ಯ ಬ್ಯಾಂಕುಗಳು ಆ ಕಾಳಜಿ ಮತ್ತು ಬದ್ಧತೆಯನ್ನು ತೋರಿಸುತ್ತಲೇ ಇಲ್ಲ ಎಂದು ಆಕ್ಷೇಪಿಸುತ್ತಾರೆ.ಎಸ್‌ಸಿ-ಎಸ್‌ಟಿ ಮಕ್ಕಳಿಗೆ ಸಾಲ ಲಭಿಸುತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ತಾವು ಬ್ಯಾಂಕ್ ಸ್ಥಾಪಿಸುತ್ತಿಲ್ಲ ಎನ್ನುವುದನ್ನೂ ಸ್ಪಷ್ಟಪಡಿಸುವ ಅವರು, ಈ ಬ್ಯಾಂಕ್ ಮೂಲಕ ಮುಂದೊಂದು ದಿನ ದೊಡ್ಡ ಮಟ್ಟದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರಬಹುದು ಎಂಬ ಆಶಯವನ್ನೂ ಹೊಂದಿದ್ದಾರೆ. ಸಮಾಜದ ತೀರಾ ಕೆಳಸ್ತರದಲ್ಲಿರುವ ಜನರಿಗೋಸ್ಕರ ಈ `ದಲಿತ ಬ್ಯಾಂಕ್~ ಕಾರ್ಯನಿರ್ವಹಿಸಲಿದ್ದು,  ಬಂಡವಾಳವನ್ನು ಎಸ್‌ಸಿ-ಎಸ್‌ಟಿ ಸಮುದಾಯದವರಿಂದಲೇ ಸಂಗ್ರಹಿಸಲಾಗುತ್ತದೆ. ಆದರೆ, ಬ್ಯಾಂಕಿಂಗ್ ಸೌಲಭ್ಯಗಳು ಸಮಾಜದ ಎಲ್ಲಾ ವರ್ಗದ ಜನರಿಗೂ ಲಭಿಸಲಿವೆ ಎಂಬುದು ಅವರ ವಿವರಣೆ. ಬ್ಯಾಂಕ್ ಸ್ಥಾಪನೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಇನ್ನೂ ಪರವಾನಗಿ ಪಡೆದಿಲ್ಲ. ಮೂಲಸೌಕರ್ಯ ವ್ಯವಸ್ಥೆ ಎಲ್ಲವೂ ಇದೆ. ಸೌಹಾರ್ದ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಆಗಿರಬೇಕೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಸದ್ಯ ಈ ಮಾದರಿಯ ಬ್ಯಾಂಕ್ ದೇಶದಲ್ಲಿ ಎಲ್ಲೂ ಇಲ್ಲ. ಆ ನಿಟ್ಟಿನಲ್ಲಿ ಇದೊಂದು ವಿಶೇಷ ಪ್ರಯತ್ನ ಎನಿಸಿಕೊಳ್ಳಲಿದೆ ಎನ್ನುವುದು ದಾಸ್ ಅವರ ವಿಶ್ವಾಸದ ನುಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.