ದೇಶಪಾಂಡೆ ಪ್ರತಿಷ್ಠಾನದಿಂದ ಅಭಿವೃದ್ಧಿ ಸಂವಾದ

7

ದೇಶಪಾಂಡೆ ಪ್ರತಿಷ್ಠಾನದಿಂದ ಅಭಿವೃದ್ಧಿ ಸಂವಾದ

Published:
Updated:

ಹುಬ್ಬಳ್ಳಿ: ದೇಶಪಾಂಡೆ ಪ್ರತಿಷ್ಠಾನ ನಗರದಲ್ಲಿ ಸ್ಥಾಪಿಸಿರುವ ‘ದೇಶಪಾಂಡೆ ಸೆಂಟರ್ ಫಾರ್ ಸೋಷಿಯಲ್ ಎಂಟರ್‌ಪ್ರ್ಯುನರ್‌ಶಿಪ್’ (ಸಾಮಾಜಿಕ ಉದ್ಯಮಶೀಲತೆ ಕೇಂದ್ರ) ವತಿಯಿಂದ ಜ. 27ರಿಂದ ನಾಲ್ಕು ದಿನಗಳ ‘ಅಭಿವೃದ್ಧಿಯ ಸಂವಾದ’ (ಡೆವಲೆಪ್‌ಮೆಂಟ್ ಡೈಲಾಗ್) ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ. ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತೆ ಕೇಂದ್ರದಲ್ಲೇ ಈ ಕಾರ್ಯಕ್ರಮ ನಡೆಯಲಿದೆ.ವಿಶ್ವಪ್ರಸಿದ್ಧ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ, ಶೈಕ್ಷಣಿಕ ಹಾಗೂ ಖಾಸಗಿ ಕ್ಷೇತ್ರಗಳ ನಾಯಕರು, ವಿವಿಧ ಭಾಗಗಳ ವೃತ್ತಿಪರರು ಸೇರಿದಂತೆ ಸುಮಾರು 500 ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 28ರ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ವಾತ್ಸಲ್ಯ ಹೆಲ್ತ್‌ಕೇರ್‌ನ ಡಾ. ಅಶ್ವಿನ್ ನಾಯಕ, ಸುಲಭ ಇಂಟರ್‌ನ್ಯಾಶನಲ್‌ನ ಡಾ. ಬಿಂದೇಶ್ವರ ಪಾಠಕ, ಫ್ಯಾಬ್ ಇಂಡಿಯಾದ ಸ್ಮಿತಾ ಮಂಕಡ್, ದೇಸಿಯ ಪ್ರಸನ್ನ, ಪ್ರದಾನ ಸಂಸ್ಥೆಯ ಸೌಮೇನ್ ಬಿಸ್ವಾಸ್, ಎಸ್‌ಕೆಡಿಆರ್‌ಡಿಪಿಯ ಡಾ. ಎಲ್.ಎಚ್.ಮಂಜುನಾಥ ಅವರೂ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇಶಪಾಂಡೆ ಪ್ರತಿಷ್ಠಾನದ ಟ್ರಸ್ಟಿ ಗುರುರಾಜ ದೇಶಪಾಂಡೆ ಈ ವಿವರಗಳನ್ನು ನೀಡಿದರು. ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷವೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ‘ಸದವಕಾಶಗಳ ಸದುಪಯೋಗ’ ಈ ಬಾರಿಯ ಧ್ಯೇಯವಾಗಿದೆ ಎಂದರು. ಜ. 27ರಂದು ಯುವ ಶೃಂಗಸಭೆ ನಡೆಯಲಿದೆ. ಚಿತ್ರನಟ, ನಿರ್ದೇಶಕ ರಾಹುಲ್ ಬೋಸ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ್, ಎಂಐಟಿಯ ಹಿರಿಯ ಉಪನ್ಯಾಸಕ ಪ್ರೊ. ಕೆನ್ ಜೊಲೊಟ್, ಪ್ರವಾಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನು ವೆಂಕಟೇಶ್ವರನ್, ಡ್ರಿಮ್ ಎ ಡ್ರಿಮ್ ಸಂಸ್ಥೆಯ ವಿಶಾಲ ತಲ್ರೇಜಾ ಹಾಗೂ ತಾವು ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದೇವೆ ಎಂದು ಅವರು ತಿಳಿಸಿದರು.ಸ್ಥಳೀಯ ನಾಯಕತ್ವ ಸೃಷ್ಟಿಸುವುದು ಈ ದೇಶಪಾಂಡೆ ಪ್ರತಿಷ್ಠಾನದ ಮುಖ್ಯ ಧ್ಯೇಯವಾಗಿದೆ. ವಿನೂತನ ಕಲ್ಪನೆಗಳನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಸ್ಥಾಪನೆಗೊಳ್ಳುವ ಸರ್ಕಾರೇತರ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ದೇಶಪಾಂಡೆ ಪ್ರತಿಷ್ಠಾನ ನೀಡುತ್ತದೆ. ನಂತರ ಈ ಸರ್ಕಾರೇತರ ಸಂಸ್ಥೆಯು ತನ್ನ ಸ್ವಂತ ಕಾಲ ಮೇಲೆ ಬೆಳೆದು ನಿಂತು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸೂಕ್ತ ನೆರವನ್ನೂ ಒದಗಿಸುತ್ತದೆ. ಈ ಕಲ್ಪನೆ ಯಶಸ್ವಿಯಾದರೆ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.ನಾವು ಹಣಕಾಸು ನೆರವು ನೀಡುತ್ತಿರುವ ಆಗಸ್ತ್ಯ ಎಂಬ ಸರ್ಕಾರೇತರ ಸಂಸ್ಥೆ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ಧಾರವಾಡ ಜಿಲ್ಲೆಯಲ್ಲಿ ಯಶಸ್ವಿಯಾಗಿರುವ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಸರ್ಕಾರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದರು. ದೇಶಪಾಂಡೆ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ದೇಶಪಾಂಡೆ, ನಿರ್ದೇಶಕ ನವೀನ ಝಾ, ಕಾರ್ಯಕ್ರಮ ಅಧಿಕಾರಿ ರವೀಂದ್ರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry