ಶನಿವಾರ, ಮೇ 8, 2021
27 °C

ದೇಶಪ್ರೇಮಿಗಳನ್ನು ಹುರಿದುಂಬಿಸಿದ ಆದರ್ಶ ಶಿಕ್ಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಸೆಪ್ಟೆಂಬರ್ 5. ಇಡೀ ಶಿಕ್ಷಕ ಸಮುದಾಯಕ್ಕೆ ಸಂಭ್ರಮದ ದಿನ. ಶಿಕ್ಷಕರ ಘನತೆ, ಗೌರವವನ್ನು ಹೆಚ್ಚಿಸುವುದಲ್ಲದೇ, ಅವರ ಮೇಲಿರುವ ಮಹೋನ್ನತ ಜವಾಬ್ದಾರಿಯ ಅರಿವನ್ನು ಮೂಡಿಸುವ ದಿನವಿದು.ಈ ದಿನದಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ 1888ರಲ್ಲಿ ಆಂಧ್ರಪ್ರದೇಶದ ತಿರುತ್ತಣಿ ಗ್ರಾಮದ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಯ ಎರಡನೇ ಮಗನಾಗಿ ಜನಿಸಿದರು. ರಾಧಾಕೃಷ್ಣನ್ ಆದರ್ಶ ಶಿಕ್ಷಕರಾಗಿದ್ದರು. ಪ್ರತಿಭಾವಂತ ತತ್ವಜ್ಞಾನಿಯಾಗಿದ್ದರು. ಸರಳ ವ್ಯಕ್ತಿತ್ವ ರೂಢಿಸಿಕೊಂಡಿದ್ದ ಇವರು ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ದೇಶಾಭಿಮಾನ ಬೆಳೆಸುತ್ತಿದ್ದರು. ಇವರಿಗೆ ಬೋಧನೆಯ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ ಆಳವಾದ ಗೌರವ, ಪ್ರೀತಿ ಇತ್ತು. ಹೀಗಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇವರ ಬೋಧನೆ ಪರಿಣಾಮದಿಂದಾಗಿ ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಮತ್ತು ಖ್ಯಾತ ಸಾಹಿತಿ ದಿವಂಗತ ವಿ.ಸೀತಾರಾಮಯ್ಯ ಅವರೂ ರಾಧಾಕೃಷ್ಣನ್ ಅವರ ವಿದ್ಯಾರ್ಥಿಗಳಾಗಿದ್ದರು.  ಮೈಸೂರು ವಿಶ್ವವಿದ್ಯಾಲಯದ ಬೋಧಕರಾಗಿ, ಆಂಧ್ರಪ್ರದೇಶ ವಿ.ವಿ. ಕುಲಪತಿಗಳಾಗಿ, ಕೇಂದ್ರ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ, ಇದೆಲ್ಲಕ್ಕೂ ಮಿಗಿಲಾಗಿ ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ದೇಶ-ವಿದೇಶಗಳ ಗಮನ ಸೆಳೆದರು. ಅವರ ಸೇವೆಯನ್ನು ನೆನೆದು ಅವರ ಜನ್ಮದಿನವಾದ ಸೆ.5ನ್ನು ಆಚರಿಸಲು ನಿರ್ಧರಿಸಿದಾಗ, `ಈ ದಿನ ಸರ್ವಶಿಕ್ಷಕರ ದಿನಾಚರಣೆಯಾಗಲಿ. ನನ್ನಂತೆ ಅದೆಷ್ಟೋ ಶಿಕ್ಷಕರು ತಮ್ಮ ಅಮೂಲ್ಯವಾದ ಬೋಧನೆಯಿಂದ ವಿದ್ಯಾರ್ಥಿಗಳನ್ನು ಬೆಳೆಸುತ್ತಿದ್ದಾರೆ. ಅವರೆಲ್ಲರನ್ನು ಈ ಮೂಲಕ ಗೌರವಿಸುವಂತಾಗಲಿ~ ಎಂದು ಹೃದಯ ತುಂಬಿ ಹೇಳಿದರು.ಸಮರ್ಥ ಜ್ಞಾನವುಳ್ಳ ಶಿಕ್ಷಕರು ದೇಶ ದ ಆಧಾರ ಸ್ಥಂಬವಿದ್ದಂತೆ. ಏನೂ ಅರಿಯದ ವಿದ್ಯಾರ್ಥಿಗಳನ್ನು ಗಮ್ಯಜ್ಞಾನದತ್ತ ಕರೆದೊಯ್ದು ಪ್ರಬುದ್ಧ ವ್ಯಕ್ತಿಗಳಾಗುವಂತೆ ಪರಿವರ್ತಿಸುವ, ವ್ಯಕ್ತಿತ್ವ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರದ್ದು.ವಿವೇಕಾನಂದರು  ‘Education means man making and char -acter building’ ಎನ್ನುವ ಮೂಲಕ ಶಿಕ್ಷಣದ ಮಹತ್ವವನ್ನು ಸರಿಯಾಗಿಯೇ ಗುರುತಿಸಿದ್ದಾರೆ.

ಪೋಷಕರು ಮಗುವನ್ನು ದೈಹಿಕವಾಗಿ ಬೆಳೆಸಿದರೆ, ಶಿಕ್ಷಕರು ಮಕ್ಕಳನ್ನು ಮಾನಸಿಕವಾಗಿ, ಬೌದ್ಧಿಕವಾಗಿ ಬೆಳೆಸಿ ಅವರ ಜ್ಞಾನದಿಂದ ಮಕ್ಕಳ ಜ್ಞಾನೇಂದ್ರಿಯಗಳು ಅರಳುವಂತೆ ಮಾಡುವರು. ಸತ್ಪ್ರಜೆಗಳಾಗುವಂತೆ ವಿದ್ಯಾರ್ಥಿಗಳಲ್ಲಿ ಜ್ಞಾನದ ಅರಿವು ಹೊತ್ತಿಸಿ, ಛಲ, ಧೈರ್ಯ, ಸ್ಥೈರ್ಯ, ಶಿಸ್ತು, ಸರಳತೆ, ವಿಧೆಯತೆ, ಪ್ರಾಮಾಣಿಕ, ಸೂಕ್ಷ್ಮ ಸಂವೇದನೆಗಳನ್ನು ಬೆಳೆಸಿ, ಸ್ವತಂತ್ರವಾಗಿ ವಿಚಾರಿಸುವಂತೆ, ಕ್ರಿಯಾಶೀಲರಾಗುವಂತೆ, ಅಕ್ಷರ ಕಲಿಸುವ ಹೊಣೆಗಾರಿಕೆ ಶಿಕ್ಷಕರದ್ದು.`ನೈಜ ಇತಿಹಾಸ ರೂಪಿಸುವವರೇ ಶಿಕ್ಷಕರು~ ಎಂಬ ಶಿಕ್ಷಣ ತಜ್ಞ ವಲ್ಗರವರ ಹೇಳಿಕೆ ಈ ಸಂದರ್ಭದಲ್ಲಿ ಪ್ರಸ್ತುತ. ಆದರೆ ಪ್ರಸಕ್ತ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದಾಗ ಹೊಟ್ಟೆ ತುಂಬಿಕೊಳ್ಳುವುದೇ ಶಿಕ್ಷಣದ ಉದ್ದೇಶವೇ ಎಂದೆನಿಸುವುದು. ಪದವಿ, ಹಣ, ಅಂತಸ್ತುಗಳೇ ಶಿಕ್ಷಣದ ಧ್ಯೇಯವಾಗಿರುವುದು ಅತ್ಯಂತ ಖೇದಕರ. ಶಿಕ್ಷಣದ ಉದ್ದೇಶ ಇಷ್ಟೇ ಆಗಿದ್ದರೆ ನಾವಿಂದು ಸಮಾಜದಲ್ಲಿ ಬಾಳುತ್ತಿರಲಿಲ್ಲ. ಕಾಡಿನಲ್ಲಿ ಬೇಟೆಯಾಡಿಕೊಂಡು ಹಣ್ಣು, ಹಂಪಲುಗಳನ್ನು, ಗಡ್ಡೆ-ಗೆಣಸುಗಳನ್ನು ತಿಂದುಕೊಂಡು ಗವಿ-ಪೊದೆಗಳಲ್ಲಿ ಜೀವಿಸುವ ಮಾನವನ ಪರಿಸ್ಥಿತಿ ಬದಲಾಗುತ್ತಿರಲಿಲ್ಲ.ಇಂದು ಬಹುಪಾಲು ಶಿಕ್ಷಕರು ಕೇವಲ ಸಂಬಳಕ್ಕಾಗಿ ದುಡಿಯುತ್ತಾರೆ. ಗಿಂಬಳಕ್ಕೆ ಆಸೆ ಪಡುವವರೂ ಇದ್ದಾರೆ. ಗಬ್ಬೆದ್ದಿರುವ ಇಂಥ ವಾತಾವರಣದಲ್ಲಿ ನಕ್ಷತ್ರಗಳಂತೆ, ಧೃವತಾರೆಗಳಂತೆ ಪ್ರಜ್ವಲಿಸುವ ಶಿಕ್ಷಕರೂ ಇದ್ದಾರೆ. ಅವರು ಎಲೆ-ಮರೆಯ ಕಾಯಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ ಬೆಂಬಲಿಸಿ ಬೀದಿಗಿಳಿದವರು ವಿದ್ಯಾರ್ಥಿಗಳೇ. ಇಂಥ ಅದಮ್ಯಚೇತನಗಳ ಹಿಂದಿರುವ ರೂವಾರಿಗಳು ಶಿಕ್ಷಕರು.

ಕೆಚ್ಚೆದೆಯ ಸ್ವಾಭಿಮಾನ, ತ್ಯಾಗ-ಬಲಿದಾನದ ಮಹತ್ವವನ್ನು ಮನವರಿಕೆ ಮಾಡಿಸಿ, ಬ್ರಿಟಿಷರ ವಿರುದ್ಧ ಜೀವಭಯ ಬಿಟ್ಟು ಹೋರಾಡುವಂತೆ ಸ್ಫೂರ್ತಿ ತುಂಬಿದ ಕೀರ್ತಿಯೂ ಶಿಕ್ಷಕರಿಗೆ ಸಲ್ಲುತ್ತದೆ. ಕೇವಲ 24 ವರ್ಷದ ಭಗತ್‌ಸಿಂಗ್, 19 ವರ್ಷದ ಖುದಿರಾಮ್, 14 ವರ್ಷದ ಮಹಾದೇವ ರಾನಡೆ, ಪ್ರೀತಿಲತಾ ವದ್ದೆದಾರ್, ಮಾತಂಗಿನಿ ಹಝ್ರಾ, ಸುಭಾಷಚಂದ್ರ ಬೋಸ್, ಮಹರ್ಷಿ ಅರವಿಂದರಂಥ ಮಹಾನ್ ಚೇತನಗಳನ್ನು ದೇಶಪ್ರೇಮವನ್ನು ಬೆಳೆಸಲು ಕಾರಣರಾದ ಶಿಕ್ಷಕರನ್ನು ಈ ದೇಶ ಮರೆಯಲು ಸಾಧ್ಯವೇ?ನಮ್ಮ ಮಧ್ಯೆ ಇರುವ ಶಿಕ್ಷಕರನ್ನು ಗೌರವಿಸುವುದು ಮತ್ತು ಶೈಕ್ಷಣಿಕ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.