ದೇಶಭಕ್ತಿಯ ಶಬ್ದಮಣಿ ಪ್ರಸಂಗ

7

ದೇಶಭಕ್ತಿಯ ಶಬ್ದಮಣಿ ಪ್ರಸಂಗ

Published:
Updated:
ದೇಶಭಕ್ತಿಯ ಶಬ್ದಮಣಿ ಪ್ರಸಂಗ

ಅವರ ಹೆಸರು ಕುಮಾರೇಗೌಡ. ಅವರ ಪುತ್ರನ ಹೆಸರು ಸಾಗರ್. ಇದೀಗ ಸಾಗರ್ ಅವರಿಗೆ ನೆನಪು ಮಾತ್ರ. ಭಾರತೀಯ ಸೇನೆಯಲ್ಲಿ ಸಿಪಾಯಿಯಾಗಿದ್ದ ಸಾಗರ್ ದೇಶಕ್ಕಾಗಿ ಜೀವ ತೆತ್ತವರು.

ಮಗನನ್ನು ನೆನಪಿಸಿಕೊಳ್ಳುತ್ತ, ಗಂಟಲು ಕಟ್ಟಿದಂಗಾಗಿ ಕುಮಾರೇಗೌಡ ಬಿಕ್ಕಳಿಸಿದರು. ಜಿನುಗುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಾ,  ದೇಶಕ್ಕಾಗಿ ಜೀವ ತೆತ್ತ ತಮ್ಮ ಮಗನ ಬಗ್ಗೆ ಮಾತನಾಡಿದರು. ಗಡಿಯಲ್ಲಿ ದೇಶ ಕಾಯುವ ಯೋಧರ ಬಗ್ಗೆ ರಾಜಕಾರಣಿಗಳಿಗೆ ಕಿಂಚಿತ್ತೂ ಕರುಣೆ ಇಲ್ಲ ಎಂದು ಬಿಕ್ಕಿದರು. ಅಂದಹಾಗೆ ಅವರ ಮಗನ ಜೀವನದ ಘಟನೆಗಳೇ `ಶಬ್ದಮಣಿ~ ಚಿತ್ರಕ್ಕೆ ಆಧಾರ.

ಅದು `ಶಬ್ದಮಣಿ~ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. `ಅಣ್ಣಾ ಆಡಿಯೋ~ ಸಂಸ್ಥೆಯ ಆರಂಭೋತ್ಸವ ಕೂಡ. ವೇದಿಕೆಯ ಹಿನ್ನೆಲೆಯಲ್ಲಿ ರಾಜ್‌ಕುಮಾರ್ ಮತ್ತು ಅಣ್ಣಾ ಹಜಾರೆ ಭಾವಚಿತ್ರಗಳು ಮಿಂಚುತ್ತಿದ್ದವು.

ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು `ಶಬ್ದಮಣಿ~ಯನ್ನು ನಿರ್ದೇಶಿಸಿ, ನಿರ್ಮಿಸಿರುವ ರೇಣುಕುಮಾರ್ ಅವರ ಮುಖದಲ್ಲಿ ಸಂತಸ ತುಂಬಿಕೊಂಡಿತ್ತು. `ವಂದೇ ಮಾತರಂ.. ಒಂದೇ ಮಾನವಂ..~ ಹಾಡನ್ನು ಬರೆದು, ಅದನ್ನು ಆಲ್ಬಂ ಮಾಡಬೇಕು ಎಂದು ಹೊರಟ ಅವರಿಗೆ ಎದುರಾದದ್ದು ಕುಮಾರೇಗೌಡರ ಮಗ ಸಾಗರ್ ಶವಯಾತ್ರೆ. ಅವನ ಬದುಕನ್ನು ಕೆದಕಿದಾಗ ರೇಣುಕುಮಾರ್‌ಗೆ ಚಿತ್ರಕತೆಯೇ ದಕ್ಕಿ ಹೋಯಿತು. ತಕ್ಷಣವೇ ಆಲ್ಬಂ ಯೋಚನೆ ಕೈಬಿಟ್ಟ ಅವರು ಸಿನಿಮಾ ಮಾಡಲು ಮುಂದಾದರು. ಪ್ರಮುಖ ಪಾತ್ರಗಳಿಗೆ ಗಿರೀಶ್ ಕಾರ್ನಾಡ್, ಶ್ರುತಿ ಒಪ್ಪಿಕೊಂಡಿದ್ದು ಅವರ ಖುಷಿಯನ್ನು ಇಮ್ಮಡಿಸಿತು.

ಜನವರಿಯಿಂದ ಚಿತ್ರೀಕರಣ ಆರಂಭಿಸಿ ಮಾರ್ಚ್‌ನಲ್ಲಿ ಮುಗಿಸಿರುವ ರೇಣುಕುಮಾರ್ ಚಿತ್ರವನ್ನು ಸೆನ್ಸಾರ್ ಮಾಡಿಸಿ, ರಾಜ್ಯ-ರಾಷ್ಟ್ರ ಪ್ರಶಸ್ತಿಗಳಿಗೆ ಕಳುಹಿಸಿದ್ದಾರೆ. ಮುಂದಿನ ತಿಂಗಳು ತೆರೆಗೆ ತರುವ ಸಿದ್ಧತೆಯಲ್ಲಿಯೂ ಇದ್ದಾರೆ. ವಾದ್ಯಗೋಷ್ಠಿಯೊಂದಿಗೆ ವೃತ್ತಿ ಬದುಕು ಆರಂಭಿಸಿದ ರೇಣುಕುಮಾರ್, ನಟ, ಸಂಗೀತ ನಿರ್ದೇಶಕ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡವರು. ಇದೀಗ ಅವರು ಕೊಡಗು ಜಿಲ್ಲೆಯವರ ದೇಶಭಕ್ತಿ ಮತ್ತು ಯೋಧರು ಎದುರಿಸುತ್ತಿರುವ ಸವಾಲುಗಳನ್ನು ತೆರೆಗೆ ತಂದಿದ್ದಾರೆ. `ಹಗಲು- ಇರುಳು ಶಬ್ದಗಳ ನಡುವೆ ಜೀವಿಸುವ ಯೋಧರಿಗೆ ತಮ್ಮ ಚಿತ್ರದ ಶೀರ್ಷಿಕೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ~ ಎನ್ನುತ್ತಾರೆ ರೇಣು.

ಸೈನಿಕ ಕುಟುಂಬದಲ್ಲಿ ಜನಿಸಿದ ರೇಣುಕುಮಾರ್ ಪತ್ನಿ ಚಂದ್ರಾವತಿ ಅವರೇ ಚಿತ್ರಕ್ಕೆ ಶೀರ್ಷಿಕೆ ಸೂಚಿಸಿದರಂತೆ. ಭಾವುಕರಾಗಿದ್ದ ಚಂದ್ರಾವತಿ ತಮ್ಮ ಚಿತ್ರ ಎಲ್ಲರ ಕಣ್ಣಲ್ಲೂ ನೀರು ತರಿಸುವುದು ಖಂಡಿತ ಎಂದರು.

ಹಿರಿಯ ನಟಿ ಶ್ರುತಿ- `ರೌಡಿಗಳಿಗೆ ತಾಯಿಯಾಗುವ ಬದಲು ಯೋಧನಿಗೆ ಅಜ್ಜಿಯಾಗುವುದು ಮೇಲು. ಈ ಚಿತ್ರದ ನಾಯಕ ನಿಜವಾದ ನಾಯಕ. ಒಂದು ಒಳ್ಳೆಯ ಕಾರಣಕ್ಕೆ ಕೈಯಲ್ಲಿ ಗನ್ ಹಿಡಿಯುವ ಇಂಥ ನಾಯಕನಿಗೆ ಪ್ರಚಾರದ ಅಗತ್ಯ ಇದೆ. ಚಿತ್ರದಲ್ಲಿ ನಾನು ವೀರಯೋಧನ ತಾಯಿಪಾತ್ರ ಮಾಡಿರುವ ಬಗ್ಗೆ ಹೆಮ್ಮೆ ಇದೆ. ಸಮಾಜಕ್ಕೆ ಇದೊಂದು ಒಳ್ಳೆಯ ಚಿತ್ರವಾಗಲಿದೆ~ ಎಂದರು.

ಚಿತ್ರದಲ್ಲಿ ನಟಿಸಿರುವ ಮೇಜರ್ ಸಂತೋಷ್ ದೇಶಭಕ್ತಿಯ ಬಗ್ಗೆ ಮಾತನಾಡಿ, ಚಿತ್ರದಲ್ಲಿ ತಮ್ಮದು ಯೋಧರನ್ನು ತರಬೇತುಗೊಳಿಸುವ ಪಾತ್ರ ಎಂದರು. ನಿರ್ಮಾಪಕ ರಘುನಾಥ ರೈ, ಕೃಷ್ಣಕುಮಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry