ಶನಿವಾರ, ಮೇ 15, 2021
25 °C

ದೇಶ ಕಾಯಲು ಯುವಕರ ದಂಡು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಸೇನೆಯ ವಿವಿಧ ಹುದ್ದೆಗಳ ಭರ್ತಿಗಾಗಿ ಆಯೋಜಿಸಿದ `ಸೇನಾ ನೇಮಕಾತಿ ರಾಲಿ' ನಗರದ ಚಂದ್ರಶೇಖರ್ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿದ್ದು, ಜೂನ್ 13 ರ ವರೆಗೂ ಮುಂದುವರಿಯಲಿದೆ.

ಸೇನೆಗೆ ಸೇರಿಕೊಳ್ಳುವ ಆಕಾಂಕ್ಷೆಯಿಂದ ಬೆಳಗಾವಿ, ಗುಲ್ಬರ್ಗ, ಬೀದರ್, ಕೊಪ್ಪಳ, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಬುಧವಾರ ರಾತ್ರಿಯಿಂದಲೇ ಯುವಕರು ಆಗಮಿಸುತ್ತಿದ್ದಾರೆ. ಇಡೀ ಕ್ರೀಡಾಂಗಣ ಸುತ್ತಲೂ ಯುವಕರು ಮುಗಿಬಿದ್ದಿದ್ದು, ಅವಕಾಶಕ್ಕಾಗಿ ಸರದಿ ಸಾಲಿನಲ್ಲಿ  ಕಾಯುತ್ತಿರುವುದು ಕಂಡುಬಂತು.ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಯುವಕರ ದಾಖಲಾತಿ ಪರಿಶೀಲನೆ ಮೊದಲ ದಿನ ಬೆಳಿಗ್ಗೆ ನಡೆಸಲಾಯಿತು. ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹಾಗೂ ಎತ್ತರಗಳನ್ನು ಪರೀಕ್ಷಿಸಿ, ಇದರಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ದೈಹಿಕ ಪರೀಕ್ಷೆಗೆ ಆಯ್ಕೆಗೊಳಿಸಲಾಯಿತು. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮೂರು ಸುತ್ತಿನಲ್ಲಿ ಅರ್ಹತೆ ಹೊಂದಿದವರಿಗೆ ಲಿಖಿತ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.ಒಟ್ಟು ಒಂಬತ್ತು ವಿಭಾಗದ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ಬೆಳಗಾವಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಈ ಸೇನಾ  ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಸೊಲ್ಜರ್ ಟೆಕ್ನಿಕಲ್, ಸೊಲ್ಜರ್ ನರ್ಸಿಂಗ್ ಅಸಿಸ್ಟಂಟ್, ಸೊಲ್ಜರ್ ಕ್ಲರ್ಕ್/ಸ್ಟೋರ್ ಕಿಪರ್ ಹುದ್ದೆಗಳಿಗೆ ಮಾತ್ರ ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿದೆ.ನೇಮಕಾತಿ ಪ್ರಕ್ರಿಯೆ: ವಿವಿಧ ಹುದ್ದೆಗಳ ಆಕಾಂಕ್ಷಿತ ಅಭ್ಯರ್ಥಿಗಳನ್ನು ಸರದಿ ಮೂಲಕ ಆಹ್ವಾನಿಸಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹಾಗೂ ಎತ್ತರವನ್ನು ನೋಡಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ನಿಗದಿತ ಸಂಖ್ಯೆ ನೀಡಿ ಮರುದಿನ ನಡೆಯುವ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗುತ್ತದೆ.

ದೈಹಿಕ ಪರೀಕ್ಷೆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಈ ಮೂರು ಸುತ್ತುಗಳಲ್ಲಿ ಅರ್ಹರಾದವರನ್ನು ಬೆಳಗಾವಿಯಲ್ಲಿ ಜುಲೈ 27ರಂದು ನಡೆಯುವ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.ಸೇನಾ ನೇಮಕಾತಿ ರ‌್ಯಾಲಿ ಪ್ರಕ್ರಿಯೆ ನಡೆಸಲು 6 ಸೇನಾ ವೈದ್ಯರು, 9 ಸೇನಾಧಿಕಾರಿಗಳು ಹಾಗೂ 44 ಸೈನಿಕರಿದ್ದಾರೆ. ಅಲ್ಲದೆ ಸ್ಥಳೀಯ 50 ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.