ಭಾನುವಾರ, ಏಪ್ರಿಲ್ 11, 2021
30 °C

ದೇಶ ಪ್ರತಿನಿಧಿಸುವ ದೊಡ್ಡ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್): `ಮೊದಲ ಬಾರಿ ನಾನು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ. ಸಹಜವಾಗಿಯೇ ಇದು ನನ್ನಲ್ಲಿ ತುಂಬಾ ಖುಷಿಗೆ ಕಾರಣವಾಗಿದೆ. ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಪ್ರತಿಯೊಬ್ಬರ ಕನಸು~ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ನುಡಿದಿದ್ದಾರೆ.ಕರ್ನಾಟಕದ ಅಶ್ವಿನಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಅವರ ಜೊತೆಗೂಡಿ ಆಡಲಿದ್ದಾರೆ. ಅವರೀಗ ಹೈದರಾಬಾದ್‌ನ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣ ಹಾಗೂ ಗಚ್ಚಿಬೌಲಿಯಲ್ಲಿರುವ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ನಿರತರಾಗಿದ್ದಾರೆ. ರಾಷ್ಟ್ರೀಯ ಕೋಚ್ ಗೋಪಿಚಂದ್, ಮೊಹಮ್ಮದ್ ಆರಿಫ್ ಹಾಗೂ ಎಡ್ವಿನ್ ಇರಿಯವಾನ್ ಮಾರ್ಗದರ್ಶನ ನೀಡುತ್ತಿದ್ದಾರೆ.`ದೇಶವನ್ನು ಪ್ರತಿನಿಧಿಸಲು ನನಗೆ ಅತಿದೊಡ್ಡ ಅವಕಾಶ ಲಭಿಸಿದೆ. ನಾನು ಹಾಗೂ ಜ್ವಾಲಾ ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸುತ್ತಿದ್ದೇವೆ.   ಒಲಿಂಪಿಕ್ಸ್‌ಗೆ ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದೇವೆ~ ಎಂದು ಪೊನ್ನಪ್ಪ ಹೇಳಿದರು.ಅಶ್ವಿನಿ ಹಾಗೂ ಜ್ವಾಲಾ 2011ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ನವದೆಹಲಿಯಲ್ಲಿ ನಡೆದ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಹಾಗಾಗಿ ಈ ಜೋಡಿ ಮೇಲೆ ಪದಕದ ಭರವಸೆ ಇಡಲಾಗಿದೆ. ಅವರೀಗ ವಿಶ್ವ ರ‌್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದ್ದಾರೆ.

`ಪದಕ ಗೆಲ್ಲುವ ಭರವಸೆ ಇದೆ. ಆದರೆ ಅತಿಯಾದ ಭರವಸೆಯೇನೂ ಇಟ್ಟುಕೊಂಡಿಲ್ಲ. ಆ ದಿನ ನೀವು ಯಾವ ರೀತಿ ಪ್ರದರ್ಶನ ನೀಡುತ್ತೀರಿ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿದೆ. ನಾವಿಬ್ಬರು ನಿಗದಿತ ಅವಧಿಗಿಂತ ಮುನ್ನವೇ ಲಂಡನ್‌ಗೆ ತೆರಳಿ ಅಭ್ಯಾಸ ನಡೆಸಲಿದ್ದೇವೆ~ ಎಂದು 24 ವರ್ಷ ವಯಸ್ಸಿನ ಅಶ್ವಿನಿ ವಿವರಿಸಿದರು.ಅಶ್ವಿನಿ ಹಾಗೂ ಜ್ವಾಲಾ ಜುಲೈ 24ರಂದು ಲಂಡನ್‌ಗೆ ತೆರಳಲಿದ್ದಾರೆ. `ಲಂಡನ್‌ನಲ್ಲಿ ನಾವು ಆಡುತ್ತಿರುವುದು ಇದೇ ಮೊದಲೇನಲ್ಲ. ಅಲ್ಲಿನ ಕೋರ್ಟ್‌ಗಳು ನಮಗೆ ಚಿರಪರಿಚಿತ. ಏಕೆಂದರೆ 2011ರಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಅನುಭವವಿದೆ. ಆಗ ಕಂಚಿನ ಪದಕ ಲಭಿಸಿತ್ತು. ಈ ಬಾರಿ ಅದಕ್ಕಿಂತ ಉತ್ತಮ ಪದಕ ಜಯಿಸುವ ವಿಶ್ವಾಸದಲ್ಲಿ ನಾವಿದ್ದೇವೆ~ ಎಂದು ಹೇಳಿದರು.ಪದಕ ನಿರೀಕ್ಷೆಯ ಒತ್ತಡವಿದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ, `ಒತ್ತಡವಿರುವುದು ಸಹಜ. ಏಕೆಂದರೆ ಉತ್ತಮ ಪ್ರದರ್ಶನ ನೀಡಬೇಕೆಂದು ಪ್ರತಿಯೊಬ್ಬರೂ ನಿರೀಕ್ಷಿಸುತ್ತಾರೆ. ಆದರೆ ಅದನ್ನು ಯೋಚಿಸಲು ನಮಗೆ ಸಮಯವಿಲ್ಲ. ಯಾರೇ ಎದುರಾಳಿ ಇರಲಿ, ನಮ್ಮ ಆಟವನ್ನು ನಾವು ಆಡಬೇಕು ಅಷ್ಟೆ. ಜೊತೆಗೆ ಉತ್ತಮಡ್ರಾ ಹಾಗೂ ಉತ್ತಮ ಆರಂಭ ಸಿಗಬೇಕು~ ಎಂದರು.ಆದರೆ ಚೀನಾದ ಆಟಗಾರ್ತಿಯರಿಂದ ಕಠಿಣ ಪೈಪೋಟಿ ಎದುರಾಗಲಿದೆ ಎಂಬುದನ್ನು ಅಶ್ವಿನಿ ಒಪ್ಪಿಕೊಂಡರು. `ಚೀನಾದ ಆಟಗಾರ್ತಿಯರು ಕಠಿಣ ಸವಾಲು ನೀಡಲಿದ್ದಾರೆ. ಹಾಗಂತ ಅವರನ್ನು ಸೋಲಿಸುವುದು ಅಸಾಧ್ಯ ಎಂದು ನಾನು ಹೇಳಲಾರೆ. ನೀವು ಯಾವ ರೀತಿ ಆಡುತ್ತೀರಿ ಎಂಬುದರ ಮೇಲೆ ಅದು ಅವಲಂಬಿಸಿದೆ~ ಎಂದು ನುಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.