ದೇಸಿ ತಳಿಯಿಂದಲೇ ಅಧಿಕ ಇಳುವರಿ ಸಿಗುವಂತಾಗಲಿ

7

ದೇಸಿ ತಳಿಯಿಂದಲೇ ಅಧಿಕ ಇಳುವರಿ ಸಿಗುವಂತಾಗಲಿ

Published:
Updated:

ಮಂಗಳೂರು: ಅಮೆರಿಕದಲ್ಲಿ ಮನುಷ್ಯರೂ ದೈತ್ಯರು, ತರಕಾರಿಗಳೂ ಭಾರಿ ಗಾತ್ರದವು. ಆದರೆ ಅವುಗಳಲ್ಲಿ ಸತ್ವ ಇಲ್ಲ. ನಮ್ಮ ದೇಸಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ ರುಚಿಯ ಆಹಾರ ಬೆಳೆಯಬಹುದು. ಇದರಲ್ಲೇ ಹೆಚ್ಚಿನ ಇಳುವರಿ ಪಡೆಯುವತ್ತ ಇನ್ನಷ್ಟು ಪ್ರಯತ್ನ ನಡೆಸಿದರೆ ನಾವು ಬೇರೆ ಯಾರನ್ನೂ ಅವಲಂಬಿಸುವ ಅಗತ್ಯ ಇಲ್ಲ....ದೇಸಿ ಕೃಷಿ ವಿಚಾರದಲ್ಲಿ ಇಂತಹ ಅಭಿಪ್ರಾಯ ಮೂಡಿಬಂದುದು ನಂದಿನಿ ನದಿಯ ಮೇಲೆ ದೋಣಿ ಸಂಚಾರದ ವೇಳೆ. ಬಹುಭಾಷಾ ವಿದ್ವಾಂಸ ಪ್ರೊ.ಆರ್.ವಿ.ಎಸ್.ಸುಂದರಂ ತಮ್ಮ ಅಭಿಪ್ರಾಯ ಮಂಡಿಸುವುದಕ್ಕೆ ತಾವು ಎಂಟು ತಿಂಗಳ ಕಾಲ ಅಮೆರಿಕದಲ್ಲಿ ನೆಲೆಸಿ ಪಡೆದಿರುವ ಅನುಭವವೇ ಕಾರಣ ಎಂದರು.ಗ್ರಾಮೀಣರ ಕೃಷಿ ಜ್ಞಾನ ಅಪಾರ. ಆದರೆ ಕೃಷಿಯತ್ತ ಯುವಜನತೆ ಮನಸ್ಸು ಮಾಡುತ್ತಿಲ್ಲ. ಸಹಜವಾಗಿಯೇ ನಮ್ಮ ಕೃಷಿ ಜ್ಞಾನ ನಶಿಸಿ ಹೋಗುವ ಅಪಾಯದಲ್ಲಿದೆ. ಅದನ್ನು ಕನಿಷ್ಠ ಪಕ್ಷ ಪುಸ್ತಕ ರೂಪದಲ್ಲಾದರೂ ಸಂಗ್ರಹಿಸಿ ಇಡುವ ಪ್ರಯತ್ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ನಡೆಯುತ್ತಿದೆ ಎಂದು ಅವರು ಹೇಳಿದರು.ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸ.ಚಿ.ರಮೇಶ್ ಮಾತನಾಡಿ, ವರ್ಷದೊಳಗೆ ನಿರ್ಮಾಣವಾಗಲಿರುವ ದೇಸಿ ಕೃಷಿ ವಿಜ್ಞಾನ ವಿಶ್ವಕೋಶದಲ್ಲಿ ದಕ್ಷಿಣ ಭಾರತದ ಕೃಷಿ ಜ್ಞಾನ ಆರು ಭಾಷೆಗಳಲ್ಲಿ ಲೇಖನ ರೂಪದಲ್ಲಿ ನಮೂದಾಗಲಿದೆ. ಛಾಯಾಚಿತ್ರಗಳೂ ಜತೆಗೆ ಇರಲಿವೆ. ಇಂತಹ ದೇಸಿ ಕೃಷಿ ವಿಜ್ಞಾನವನ್ನು ವಿಡಿಯೊ ಚಿತ್ರೀಕರಣ ನಡೆಸಿ ಅದನ್ನೂ ಪ್ರತ್ಯೇಕ ವಿಭಾಗವಾಗಿ ಸಂಗ್ರಹಿಸಿ ಇಡುವ ವಿಚಾರ ಇದೆ ಎಂದರು.ಜಾನಪದ ವಿದ್ವಾಂಸ ಡಾ.ವಾಮನ ನಂದಾವರ, ತುಳುನಾಡಿನ ಹಲವು ವಿಶಿಷ್ಟ ಕೃಷಿ ಪದ್ಧತಿಗಳನ್ನು ತಜ್ಞರ ಮುಂದಿಟ್ಟರು. ಕೃಷಿಯತ್ತ ಯುವಕರ ನಿರಾಸಕ್ತಿ, ಕೂಲಿ ಕಾರ್ಮಿಕರ ಅಲಭ್ಯತೆಯಂತಹ ಬೆಳವಣಿಗೆಗಳು ಕೃಷಿಗೆ ಮಾರಕ ಎಂದರು.ಜಯಪ್ರಕಾಶ್ ಶೆಟ್ಟಿ, ಸಾಯಿ ಗೀತಾ, ಜಯಂತಿ ಸಂಕಮಾರ್ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಕೈಗಾರಿಕೆಗಳಿಂದ ಕೃಷಿಭೂಮಿ ನಾಶವಾಗುತ್ತಿರುವ ವಿಚಾರವೂ ಪ್ರಸ್ತಾಪವಾಯಿತು.ಇದಕ್ಕೆ ಮೊದಲು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಅಭಯಚಂದ್ರ ಜೈನ್, ಹಿಂದೆ ಗೇಣಿ ಪದ್ಧತಿಯಿದ್ದಾಗ ಕೃಷಿಕ ಬಹಳ ಕಷ್ಟಕರ ಜೀವನ ಸಾಗಿಸುತ್ತಿದ್ದ, ಹೊಲದ ಯಜಮಾನ ಮಾತ್ರ ಸುಖದ ಜೀವನ ಸಾಗಿಸುತ್ತಿದ್ದ. ದೇವರಾಜ ಅರಸು ಅವರ ಜನಪರ ಕಾಳಜಿಯಿಂದ ಉಳುವವರ ಬದುಕು ತುಸು ಉತ್ತಮವಾಗಿದ್ದರೂ, ಕೃಷಿ ಕ್ಷೇತ್ರ ಇನ್ನೂ ತೊಂದರೆಗಳಿಂದ ಮುಕ್ತವಾಗಿಲ್ಲ ಎಂದರು.ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ತಾವು ಕಳೆದ ವಾರ ಕಾಶ್ಮೀರಕ್ಕೆ ಹೋದ ವಿಚಾರ ತಿಳಿಸಿ, ಅಲ್ಲಿ ವ್ಯಾಪಕ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದಾರೆ.  ನಮ್ಮಲ್ಲಿ ಕೂಡ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯುವ ಮನಸ್ಸು ಮಾಡಬೇಕು ಎಂದರು. ಕೃಷಿಕ ಬೋಲ ಚಿತ್ತರಂಜನದಾಸ್ ಶೆಟ್ಟಿ ಅವರು ತಾವು ಕೃಷಿಕರಾಗಿ ಅನುಭವಿಸಿದ ಕಷ್ಟಗಳನ್ನು ವಿವರಿಸಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ವಿ.ಕೋಟ್ಯಾನ್, ಉದ್ಯಮಿ ಗಣೇಶ್ ಬಂಗೇರ, ಸಂತ ಅಲೋಷಿಯಸ್ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ಜಾನ್ ಎಡ್ವರ್ಡ್ ಡಿಸಿಲ್ವ, ಕಡಂಬೋಡಿ ಮಹಾಬಲ ಪೂಜಾರಿ, ಪ್ರೊ.ತುಕಾರಾಮ ಪೂಜಾರಿ, ಕುಸುಮಾ ಕಡಂಬೋಡಿ, ಚಂದ್ರಶೇಖರ ಸಾನಿಲ್ ಇತರರು ಇದ್ದರು.ಮಿಂಚಿದ ಸಂಕಮಾರ್: ಜಾನಪದ ವಿದ್ವಾಂಸ ಪ್ರೊ.ಗಣೇಶ್ ಅಮೀನ್ ಸಂಕಮಾರ್ ಅವರು ಒಬ್ಬ ಕೃಷಿಕ, ನಾವಿಕ, ಸಂಘಟಕ ಎಂಬಿತ್ಯಾದಿ ಹಲವು ವೈವಿಧ್ಯಗಳು ಈ ಕಾರ್ಯಕ್ರಮದ ಮೂಲಕ ಪ್ರಕಟವಾದವು. ಅವರು ಭತ್ತದ ಮುಡಿ ಕಟ್ಟುವ ರೀತಿಯನ್ನು ತದೇಕಚಿತ್ತದಿಂದ ಗಮನಿಸಿದ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅವರು ತಾವು ಪಾವಂಜೆಗೆ ಬಂದುದು ಸಾರ್ಥಕವಾಯಿತು ಎಂದುಬಿಟ್ಟರು. ಇಂತಹ ಪ್ರಾತ್ಯಕ್ಷಿಕೆಗಳ ಮೂಲಕವೇ ದೇಸಿ ಕೃಷಿ ವಿಜ್ಞಾನದ ವಿಶ್ವಕೋಶ ಸಿದ್ಧವಾಗಬೇಕು ಎಂಬ ತಮ್ಮ ಪರಿಕಲ್ಪನೆಗೆ ನಿಜವಾದ ಅರ್ಥ ಬಂದಿದೆ ಎಂದರು.ನೀರಿನ ಮೇಲೆ ಸಂವಾದ:  ಸಣ್ಣ ಮೂರು ದೋಣಿಗಳನ್ನು ಒಟ್ಟು ಸೇರಿಸಿ ವಿದ್ವಾಂಸರು, ಸಂವಾದಕಾರರು ಕುಳಿತಿದ್ದರೆ, ಎರಡು ದೋಣಿಗಳನ್ನು ಸೇರಿಸಿ ಸಿದ್ಧಪಡಿಸಿದ ದೋಣಿಯಲ್ಲಿ ಮಾಧ್ಯಮದವರು ಇದ್ದರು. ಮತ್ತೂ ಒಂದು ಜತೆ ದೋಣಿಯಲ್ಲಿ ನಾಲ್ಕೈದು ಮಂದಿ ಇದ್ದರು. ಪಾವಂಜೆಯಿಂದ ಸಸಿಹಿತ್ಲುವರೆಗೆ ನಂದಿನಿ ನದಿಯಲ್ಲಿ ಒಂದೂವರೆ ಗಂಟೆ ಸಾಗಿದ್ದು ಒಂದು ಅವಿಸ್ಮರಣೀಯ ಅನುಭವವಾಯಿತು. ದೋಣಿಗಳು ಮುಕ್ಕ, ಕದಿಕೆ, ಹಳೆಯಂಗಡಿ, ಖಂಡಿಗೆ, ಅರಂದು ಮುಂತಾದ ಊರುಗಳನ್ನು ತೋರಿಸುತ್ತ ಸಸಿಹಿತ್ಲು ಕಡಲ ತೀರದತ್ತ ಸಾಗಿದವು.

 

ಸಮುದ್ರದಲ್ಲಿ ಭರತ ಇದ್ದುದರಿಂದ ನದಿಯ ಹಿನ್ನೀರು ಹಿಮ್ಮುಖವಾಗಿ ಚಲಿಸುತ್ತಿತ್ತು. ಹೀಗಾಗಿ ದೋಣಿಗೆ ಹುಟ್ಟು ಹಾಕುವುದು ತುಸು ಕಷ್ಟದ ಕೆಲಸವಾಗಿತ್ತು. ಬಳಿಕ ಕಡಲ ತಡಿಯಲ್ಲಿ `ಕಡಲ ಮತ್ತು ಕೃಷಿ ಬದುಕು~ ಸಂವಾದ ನಡೆಯಿತು.ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ, ಜಾನಪದ ವಿಶ್ವವಿದ್ಯಾಲಯ, ತುಳು ಸಾಹಿತ್ಯ ಅಕಾಡೆಮಿ, ಹಳೆಯಂಗಡಿ ಲಯನ್ಸ್ ಕ್ಲಬ್, ಸಸಿಹಿತ್ಲಿನ ಯುವವಾಹಿನಿಗಳು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಸೋಮವಾರ ಬೆಳಿಗ್ಗೆ 9ರಿಂದ `ಮೂರು ಊರಿಗೊಂದು ಸುತ್ತು~ ಎಂಬ ವಿಶಿಷ್ಟ ಪಾದಯಾತ್ರೆ, ಬಳಿಕ ಅವಲೋಕನದ ಸಮಾರೋಪ ನಡೆಯಲಿದೆ.ಕೃಷಿ ವಿವಿ ಮರೆತ ಕಾರ್ಯ

ದೇಸಿ ಕೃಷಿ ವಿಜ್ಞಾನ ಸಂಶೋಧನೆಯನ್ನು ನಿಜವಾಗಿ ಮಾಡಬೇಕಿದ್ದವರು ರಾಜ್ಯದ ಎರಡು ಕೃಷಿ ವಿಶ್ವವಿದ್ಯಾಲಯಗಳು. ಆದರೆ ಅವುಗಳು ಮರೆತೇಬಿಟ್ಟ ಈ ಕಾರ್ಯವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry