ದೇಸಿ ಸೊಗಡಿನ ‘ಗ್ರಾಮೀಣ ಅಂಗಡಿ’

7

ದೇಸಿ ಸೊಗಡಿನ ‘ಗ್ರಾಮೀಣ ಅಂಗಡಿ’

Published:
Updated:

ಹಸಿರಿನ ನಡುವೆ ಬಿಳಿ ಬಣ್ಣದ ಹಸೆ ಚಿತ್ತಾರ, ಬಾಗಿಲಿಗೆ ಭತ್ತದ ತೆನೆ ತೋರಣದ ಸ್ವಾಗತ. ಒಳಗೆ ಕಾಲಿಡುತ್ತಿದ್ದಂತೆ ಲಾವಂಚದ ಘಮಲು, ಎತ್ತ ನೋಡಿದರತ್ತ ಶುದ್ಧ ದೇಸಿ ವಸ್ತುಗಳ ಮಾಲು!‘ಗ್ರಾಮೀಣ ಅಂಗಡಿ’ ಹೆಸರಿಗೆ ತಕ್ಕಂತೆ ಅಪ್ಪಟ ಗ್ರಾಮಜನ್ಯ ಕರಕುಶಲಿಗಳ ಕೈಯಲ್ಲರಳಿದ ದೇಸಿ ಸೊಗಡಿನ ಬಟ್ಟೆ, ಕಲಾತ್ಮಕ ವಸ್ತುಗಳ ಭಂಡಾರ. ಜಾಗತೀಕರಣದ ನಡುವೆ ‘ದೇಸಿತನ’ ಕಳೆದುಹೋಯ್ತು ಎನ್ನುವವರಿಗೊಂದು ತುಸು ಸಮಾಧಾನ ನೀಡುವ ತಾಣ ಅದುವೇ ಜಯನಗರದಲ್ಲಿರುವ `ಗ್ರಾಮೀಣ ಅಂಗಡಿ'.ಸ್ವಾವಲಂಬಿ- ಸ್ವದೇಶಿ

ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ಕರಕುಶಲಕರ್ಮಿಗಳು ಕಟ್ಟಿಕೊಂಡಿರುವ ‘ಗ್ರಾಮೀಣ ಕರಕುಶಲ ಉದ್ಯಮ ಘಟಕ’ ಸಂಪೂರ್ಣ ಸ್ವಾವಲಂಬಿ ಉದ್ಯಮ. ಸರ್ಕಾರದ ಸಹಾಯಧನಕ್ಕೆ ಕೈಚಾಚದೇ ಕರಕುಶಲಗಾರರೇ ಬಂಡವಾಳ ಹೂಡಿ ಸ್ವಾಭಿಮಾನದಿಂದ ಕಟ್ಟಿಕೊಂಡಿರುವ ಸ್ವದೇಶಿ ಸ್ವಾಭಿಮಾನದ ಅಂಗಡಿ, ಈ ಗ್ರಾಮೀಣ ಅಂಗಡಿ.ಎಲ್ಲರೂ ಮಾಲೀಕರೇ!

ಜನರಿಗೆ ಬೇಕಾದ ದೈನಂದಿನ ಉಪಯುಕ್ತ ಉತ್ಪನ್ನಗಳನ್ನು ನೈಜ ಬೆಲೆಗೆ ಹಾಗೂ ಕರಕುಶಲ ಕರ್ಮಿಗಳಿಂದ ನೇರವಾಗಿ ಗ್ರಾಹಕರಿಗೇ ತಲುಪುವುದು ಈ ಅಂಗಡಿಯ ಉದ್ದೇಶ. ಮಧ್ಯವರ್ತಿಗಳ ಹಾವಳಿಯಿಲ್ಲದೇ ಕರಕುಶಲಕರ್ಮಿ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಸಾಧಿಸಿ, ಗ್ರಾಹಕರ ಅಗತ್ಯ-ಅಭಿರುಚಿಗೆ ತಕ್ಕಂತೆ ಉತ್ಪನ್ನ ರೂಪಿಸುವ ಈ ಅಂಗಡಿಗೆ ಮಾಲೀಕರು, ಬಂಡವಾಳಗಾರರು, ಲಾಭದಾರರು ಎಲ್ಲವೂ ಕರಕುಶಲಕರ್ಮಿಗಳೇ!. ಇಲ್ಲಿ ಎಲ್ಲರೂ ಮಾಲೀಕರೇ!. ಅಂಗಡಿಯ ಖರ್ಚು-ವೆಚ್ಚ ತೆಗೆದು ಬಂದ ಲಾಭದಲ್ಲಿ ಎಲ್ಲರೂ ಸಮಾನ ಪಾಲುದಾರರು.ಗ್ರಾಮೀಣ ಹಿನ್ನೆಲೆಯ, ಕರಕುಶಲ ಕುಟಂಬದಿಂದ ಬಂದ

ಬಿ. ಗಂಗಾಧರ ಮೂರ್ತಿ ಗ್ರಾಮೀಣ ಕರಕುಶಲ ಉದ್ಯಮದ ಘಟಕದ ಟ್ರಸ್ಟಿ. ಗಂಗಾಧರ ಅವರ ನೇತೃತ್ವದಲ್ಲಿ ಇಂದು 200ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಸಂಘಟಿತರಾಗಿದ್ದಾರೆ. 1 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಉದ್ಯಮದ ಮೇಲೆ ಅವಲಂಬಿತವಾಗಿವೆ.  25ಲಕ್ಷ ರೂಪಾಯಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಈ ಅಂಗಡಿಯಲ್ಲಿರುವ ವಸ್ತುಗಳೆಲ್ಲವೂ ಪ್ರಕೃತಿ ಮೂಲದವು.

ಏನೇನಿದೆ?ಲಾವಂಚ ಬೇರಿನ ಕಲಾತ್ಮಕ ಮುಖವಾಡಗಳು, ಬೀಸಣಿಕೆ, ಪಾದರಕ್ಷೆ, ಬಿದಿರಿನ ಹಸ್ತೆಚಿತ್ತಾರದ ಹೂದಾನಿಗಳು, ಪೆನ್‌ಸ್ಟ್ಯಾಂಡ್, ಆಭರಣಗಳು, ಚನ್ನಪಟ್ಟಣದ ಚೆಂದದ ಗೊಂಬೆಗಳು, ಸುಟ್ಟಾವೆ ಮಣ್ಣಿನ ತರಾವರಿ ದೀಪಗಳು, ಅಲಂಕಾರಿಕ ವಸ್ತುಗಳು, ನೈಸರ್ಗಿಕ ಬಣ್ಣದ ಮಣ್ಣಿನ ಆಭರಣಗಳು, ಅಪ್ಪಟ ಹತ್ತಿಯ ಕೈಮಗ್ಗದ ಬಟ್ಟೆಗಳ ಅಪೂರ್ವ ಸಂಗ್ರಹವೇ ಇಲ್ಲಿ ಮೇಳೈಸಿದೆ.ಅಷ್ಟೇ ಅಲ್ಲ, ಸಾವಯವ ಸಾಬೂನು, ಸುಗಂಧದ್ರವ್ಯ, ಪರಿಶುದ್ಧ ನೈಸರ್ಗಿಕ ಪೇಯಗಳು, ಶುದ್ಧ ಜೇನುತುಪ್ಪ, ಮಲೆನಾಡಿನ ಹಪ್ಪಳ, ಬಾಯಲ್ಲಿ ನೀರೂರಿಸುವ ಬಗೆಬಗೆ ಉಪ್ಪಿನಕಾಯಿಗಳು, ವಿವಿಧ ಕಷಾಯಪುಡಿಗಳು ‘ಗ್ರಾಮೀಣ ಅಂಗಡಿ’ಯ ಒಂದೇ ಸೂರಿನಡಿ ಲಭ್ಯ. ಜಾಗತೀಕರಣದ ನಡುವೆ ಕಳೆದುಹೋಗುತ್ತಿರುವ ‘ದೇಸಿ ಸಂಸ್ಕೃತಿ’ ಉಳಿಸಲು, ಮುಂದಿನ ಪೀಳಿಗೆಗೆ ಇದರ ಮಹತ್ವ ಮನಗಾಣಿಸಲು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಗ್ರಾಮೀಣ ಕರಕುಶಲ ಕರ್ಮಿಗಳ ಸ್ವಾವಲಂಬಿ ಬದುಕಿಗಾಗಿ ಈ ಉದ್ಯಮ ಸ್ಥಾಪಿಸಲಾಗಿದೆ. ಇಲ್ಲಿ ಹೆಸರಿಗಷ್ಟೇ ನಾನು ಟ್ರಸ್ಟಿ. ಆದರೆ, ಎಲ್ಲಾ ವ್ಯವಹಾರಗಳನ್ನು ನೇರವಾಗಿ ಕರಕುಶಲಕರ್ಮಿಗಳೇ ನಿರ್ವಹಿಸುತ್ತಾರೆ ಎನ್ನುತ್ತಾರೆ ಗಂಗಾಧರ ಮೂರ್ತಿ.‘ರಾಜ್ಯ ಸರ್ಕಾರ ಈ ಮೊದಲು ಶೇಕಡಾ 25ರಷ್ಟು ಸಬ್ಸಿಡಿಯನ್ನು ಖಾದಿ ಉದ್ಯಮದಾರರಿಗೆ ನೀಡುತ್ತಿತ್ತು. ಆದರೆ, ಈಗ ಅದು ಸ್ವಯಂಸೇವಾ ಸಂಸ್ಥೆಗಳ ಪಾಲಾಗಿದೆ. ಖಾದಿ ಮತ್ತು ಕರಕುಶಲ ಉದ್ಯಮಕ್ಕೆ ಸರ್ಕಾರದಿಂದ ಪ್ರೋತ್ಸಾಹ ದೊರೆಯಬೇಕು’ ಎನ್ನುತ್ತಾರೆ ಕರಕುಶಲಕರ್ಮಿಗಳಾದ ಪರಮೇಶ್ವರ ಮತ್ತು ಅಪರ್ಣಾ.ಕರ್ನಾಟಕದ ಸೀರೆ ಖರೀದಿಸಿ

‘ಕರ್ನಾಟಕ ಕುಶಲ ಕಲೆ ಉಳಿಸಿ, ಕರ್ನಾಟಕ ಸೀರೆಗಳನ್ನು ಖರೀದಿಸಿ’ ಅಭಿಯಾನಕ್ಕೆ ಚಾಲನೆ ನೀಡಿರುವ ಅರುಂಧತಿ ನಾಗ್, ‘ಮಧ್ಯಮ ವರ್ಗದಲ್ಲಿ ಖಾದಿಯ ಬಗ್ಗೆ ಜಾಗೃತಿ ಮೂಡಬೇಕು. ಸೀರೆ ಕೇವಲ ಮೈ ಮುಚ್ಚುವ ಸಾಧನವಲ್ಲ. ಈ ನೆಲದ ಸಂಸ್ಕೃತಿ. ನೈಲಾನ್ ಸೀರೆಯಿಂದ ಚರ್ಮದ ಕಾಯಿಲೆ ಹೆಚ್ಚುತ್ತಿದೆ. ವಿಶೇಷವಾಗಿ ಮಧ್ಯಮವರ್ಗದವರಲ್ಲಿ ಖಾದಿ ಮತ್ತು ಹತ್ತಿ ಬಟ್ಟೆಗಳತ್ತ ಆಕರ್ಷಣೆ ಹೆಚ್ಚಿದರೆ ‘ಗ್ರಾಮೀಣ ಅಂಗಡಿ’ಯ ಉದ್ಧಾರ ಸಾಧ್ಯ’ ಎಂದು ಅಭಿಪ್ರಾಯಪಡುತ್ತಾರೆ.ಖ್ಯಾತ ಚಲನಚಿತ್ರ ತಾರೆ ಭಾರತಿ, ರಂಗಕರ್ಮಿ ಅರುಂಧತಿ ನಾಗ್, ಲೇಖಕಿ ಡಾ.ವಸುಂಧರಾ ಭೂಪತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ‘ಗ್ರಾಮೀಣ ಅಂಗಡಿ’ಯ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಹಬ್ಬ–ಹರಿದಿನ, ಶುಭ ಸಮಯದಲ್ಲಿ ಗ್ರಾಮೀಣ ಸೊಗಡಿನ ದಿರಿಸು, ವಸ್ತು ಬಳಸಿದಲ್ಲಿ ಹಬ್ಬಕ್ಕೆ ಮತ್ತಷ್ಟು ಕಳೆ ಬಂದೀತು, ಕರಕುಶಲಕರ್ಮಿಗಳ ಹೊಟ್ಟೆಯೂ ತುಂಬೀತು.ವಿಳಾಸ: ಗ್ರಾಮೀಣ ಅಂಗಡಿ, ನಂ. 8, 11ನೇ ಮುಖ್ಯರಸ್ತೆ, 39ನೇ `ಎ' ಕ್ರಾಸ್, 4ನೇ `ಟಿ'ಬ್ಲಾಕ್, ಜಯನಗರ (ಶಾಲಿನಿ ಮೈದಾನದ ಹತ್ತಿರ), ಬೆಂಗಳೂರು-41. ಮೊಬೈಲ್: 97311 05526, 94483 24727.-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry