ಶುಕ್ರವಾರ, ನವೆಂಬರ್ 22, 2019
26 °C

ದೇಹದಾರ್ಢ್ಯದ ದುನಿಯಾ!

Published:
Updated:

ಖಾಸಗಿ ಬದುಕಿನ ವಿವಾದಗಳ ಬಳಿಕ ಒಂದಷ್ಟು ಸಮಯ ತಣ್ಣಗಿದ್ದ ನಟ ದುನಿಯಾ ವಿಜಯ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮನ್ನು ಸಿನಿಮಾರಂಗಕ್ಕೆ ಪರಿಚಯಿಸುವಂತೆ ಮಾಡಿದ ದೇಹದಾರ್ಢ್ಯ ಸ್ಪರ್ಧೆಯನ್ನು ಬೆಳೆಸುವ ಇರಾದೆ ಅವರದು. ಅದಕ್ಕಾಗಿ ಕರ್ನಾಟಕ ಅಮೆಚ್ಯೂರ್ ಬಾಡಿಬಿಲ್ಡರ್ಸ್‌ ಅಸೋಸಿಯೇಷನ್ ಜೊತೆ ಕೈಜೋಡಿಸಿರುವ ವಿಜಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಿದ್ದಾರೆ.



ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು ನಡೆಯುವುದೇ ವಿರಳ. ನಡೆದಾಗಲೂ ಬಹುಮಾನದ ಮೊತ್ತ ಅತಿಕಡಿಮೆ ಇರುತ್ತದೆ. ಆದರೆ ವಿಜಯ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ `ಮಿ. ದುನಿಯಾ ವಿಜಿ ಕ್ಲಾಸಿಕ್-2013'ನ ವಿಜೇತ ಪಟು ಎರಡು ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ. ಬೆಸ್ಟ್ ಪೋಸರ್ ಮತ್ತು ಮೋಸ್ಟ್ ಮಸ್ಕ್ಯುಲರ್ ವಿಭಾಗಕ್ಕೆ ತಲಾ ರೂ. 50 ಸಾವಿರ ಬಹುಮಾನ ನೀಡಲಾಗುವುದು ಎಂದು ಬಾಡಿಬಿಲ್ಡರ್ಸ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಮೌಳಿ ತಿಳಿಸಿದರು.



ಸ್ಪರ್ಧೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಮೇ 10ರಂದು ನಡೆಯಲಿದ್ದು, 80-100 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.



ಈ ಸ್ಪರ್ಧೆಯ ಮೂಲಕ ವಿಜಯ್ ತಮ್ಮ ನಿರ್ಮಾಣದ `ಜಯಮ್ಮನ ಮಗ' ಚಿತ್ರದ ಪ್ರಚಾರವನ್ನೂ ನಡೆಸಲಿದ್ದಾರೆ. ಸದ್ಯ ರೀರೆಕಾರ್ಡಿಂಗ್‌ನಲ್ಲಿರುವ ಚಿತ್ರವನ್ನು ಜೂನ್ ಎರಡನೇ ವಾರದಲ್ಲಿ ತೆರೆಗಾಣಿಸುವುದು ಅವರ ಉದ್ದೇಶ.



ನಾರಾಯಣ ನೇತ್ರಾಲಯದ ವೀರೇಶ್, ಜಿಮ್ ತರಬೇತುದಾರರಾದ ಮಲ್ಲೇಶ್, ಪಾನಿಪುರಿ ಕಿಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

 

ಪ್ರತಿಕ್ರಿಯಿಸಿ (+)