ದೇಹದಾರ್ಢ್ಯ ಕ್ರೀಡೆಯ ಅಪ್ರತಿಮ ಸಾಧಕ

7
‘ಮಿಸ್ಟರ್ ಯುನಿವರ್ಸ್’ ಪ್ರಶಸ್ತಿ ಗೆದ್ದಿದ್ದ ಮೊದಲ ಭಾರತೀಯ

ದೇಹದಾರ್ಢ್ಯ ಕ್ರೀಡೆಯ ಅಪ್ರತಿಮ ಸಾಧಕ

Published:
Updated:
ದೇಹದಾರ್ಢ್ಯ ಕ್ರೀಡೆಯ ಅಪ್ರತಿಮ ಸಾಧಕ

ಕೋಲ್ಕತ್ತ (ಪಿಟಿಐ): ‘ಪ್ರತಿದಿನ ವ್ಯಾಯಾಮ ಮಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಸರಳತೆ ಮತ್ತು ಆರೋಗ್ಯವಂತ ಜೀವನ ರೂಪಿಸಿಕೊಳ್ಳುವುದೇ ಗುರಿಯಾಗಬೇಕು. ಆದ್ದರಿಂದ ವ್ಯಾಯಾಮ ಮತ್ತು ಆರೋಗ್ಯ ಉತ್ತಮವಾದ ಆಹಾರವನ್ನು ಸೇವಿಸಿ’.ಭಾನುವಾರ ನಿಧನರಾದ ಮಾಜಿ ‘ಮಿಸ್ಟರ್ ಯುನಿವರ್ಸ್’ ಮನೋಹರ್ ಐಚ್ ಅವರು ಎಲ್ಲರಿಗೂ ನೀಡುತ್ತಿದ್ದ ಸಲಹೆ ಇದು. ಆದರೆ ಅದು ಬರೀ ಉಪದೇಶವಾಗಿರಲಿಲ್ಲ. ಅವರು ಜೀವನವಿಡೀ ಅನುಸರಿಸಿದ್ಧ ಶೈಲಿಯೂ ಅದೇ ಆಗಿತ್ತು. ಅದು ಅವರ ದೀರ್ಘಾಯುಷ್ಯದ ಗುಟ್ಟು ಕೂಡ ಆಗಿತ್ತು.ಸವಾಲಾಗದ ಕಡಿಮೆ ಎತ್ತರ

ವಿಭಜನಾಪೂರ್ವ ಬಾಂಗ್ಲಾದೇಶದ ಕುಗ್ರಾಮ ಕೊಮಿಲ್ಲಾದಲ್ಲಿ ಜನಿಸಿದ್ದ  (ಜನ್ಮದಿನ: 17-03-1913)  ಮನೋಹರ್ ಐಚ್ ಕಷ್ಟಗಳ ಹಾದಿ ಸವೆಸೆ ಬೆಳೆದವರು. ಅವರು ಕೇವಲ 4.11 ಅಡಿ ಎತ್ತರವಿದ್ದರೂ ವಿಶ್ವಮಟ್ಟದ ದೇಹ ದಾರ್ಢ್ಯಪಟುವಾಗಿ ಬೆಳೆದದ್ದು ಯಶೋಗಾಥೆ. ದೈಹಿಕವಾಗಿ ಬಲಶಾಲಿಯಾಗಬೇಕು, ಎತ್ತರವಾಗಿ ಬೆಳೆಯಬೇಕು ಎಂದು ಹಂಬಲಿಸುತ್ತಿದ್ದ ಯುವಕನಿಗೆ ಬ್ರಿಟಿಷ್ ಅಧಿಕಾರಿ ರಿಯಾಬ್ ಮಾರ್ಟಿನ್ ಅವರು ದೇಹದಾರ್ಢ್ಯ ಪಟುವಾಗಲು ಸಲಹೆ ನೀಡಿದರು. ರಾಯಲ್ ಏರ್‌ಫೋರ್ಸ್‌ ನಲ್ಲಿ ಅವರು ತಮ್ಮ ಅಭ್ಯಾಸ ಆರಂಭಿಸಿದರು. ಆದರೆ ಸ್ವಾತಂತ್ರ್ಯ ಹೋರಾಟ ದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಜೈಲು ಕೂಡ ಸೇರಿದ್ದರು. ಆದರೆ ದೇಹದಾರ್ಢ್ಯ ಕ್ರೀಡೆಯ ಅಭ್ಯಾಸದಿಂದ ಹಿಂದೆ ಸರಿಯಲಿಲ್ಲ.‘ಜೈಲಿನಲ್ಲಿ ಇದ್ದಾಗ ಅವರು ಪ್ರತಿದಿನ 12 ತಾಸು ವ್ಯಾಯಾಮ ಮಾಡುತ್ತಿದ್ದರಂತೆ.  ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಜೈಲಿನಿಂದ ಬಿಡುಗಡೆ ಗೊಂಡ ಅವರು ತಮ್ಮ ಹವ್ಯಾಸವನ್ನು ಗಂಭೀರವಾಗಿ ತೆಗೆದುಕೊಂಡಿದ್ದನ್ನು ಅವರು ಹೇಳುತ್ತಿದ್ದರು’ ಎಂದು ಪುತ್ರ ಕೊಕನ್ ಐಚ್ ಸ್ಮರಿಸುತ್ತಾರೆ. 1950ರಲ್ಲಿ ಮಿಸ್ಟರ್ ಹರ್ಕ್ಯುಲಸ್ ಚಾಂಪಿಯನ್‌ಷಿಪ್ ಗೆದ್ದು `ಪಾಕೆಟ್ ಹರ್ಕ್ಯುಲಸ್’ ಎಂದು  ಜನಪ್ರಿಯ ರಾದರು. 1952ರಲ್ಲಿ ಲಂಡನ್‌ನಲ್ಲಿ `ಮಿಸ್ಟರ್ ಯುನಿವರ್ಸ್’ ಆದಾಗ ಅವ ರಿಗೆ 39 ವರ್ಷ ವಯಸ್ಸಾಗಿತ್ತು. ಅದೇ ವರ್ಷ ಸ್ಕಾಟ್ಲೆಂಡ್‌ನಲ್ಲಿ ವಿಶ್ವ ಸ್ಪ್ರಿಂಗ್ ಪುಲ್ಲಿಂಗ್ (ಸ್ಪ್ರಿಂಗ್‌ನಿಂದ ಮಾಡಿದ ವ್ಯಾಯಾಮ ಸಲಕರಣೆ) ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಯುರೋಪ್‌  ದೇಶಗಳ ಕ್ರೀಡಾಪಟು ಗಳದ್ದೇ ಪ್ರಾಬಲ್ಯವಿದ್ದ ಕ್ರೀಡೆಯಲ್ಲಿ  ಭಾರತದ ಹೆಜ್ಜೆಗುರುತು ಮೂಡಿಸಿದ್ದರು.ಒಟ್ಟು ನಾಲ್ಕು ಬಾರಿ ಮಿಸ್ಟರ್ ಯುನಿವರ್ಸ್ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದರು. ಏಷ್ಯನ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 1960ರಲ್ಲಿ ಇಂಡಿಯನ್ ಕ್ಲಾಸ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಜೀವನದುದ್ದುಕ್ಕೂ ಹಲವು ಯುವಕರಿಗೆ ತರಬೇತಿ ನೀಡಿದರು. ದೊಡ್ಡ ಮಗ ಬಿಷ್ಣು ಕೂಡ ಅಪ್ಪನಂತೆ ದೇಹದಾರ್ಢ್ಯ ಪಟು ಆದರೆ, ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ. ಎಲ್ಎಂಡ್‌ಟಿ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದಾರೆ.‘ನಮ್ಮ ತಂದೆಯವರಿಗೆ ಹಾಲಿವುಡ್ ನಟ, ಮಿಸ್ಟರ್ ಯುನಿವರ್ಸ್ ಅರ್ನಾಲ್ಡ್‌ ಶ್ವಾರ್ನೆಗರ್ ಅವರನ್ನು ಭೇಟಿಯಾಗುವ ಆಸೆ ಬಹಳ ಕಾಲದಿಂದಲೂ ಇತ್ತು. ಆದರೆ ಅದು ಕೊನೆಗೂ ಈಡೇರಲಿಲ್ಲ’ ಎಂದು ಕೊಕನ್ ಐಚ್ ಬೇಸರ ವ್ಯಕ್ತಪಡಿಸಿದರು.ಶತಾಯುಷಿ ಮನೋಹರ್ ಐಚ್ ನಿಧನ

ಕೋಲ್ಕತ್ತ (ಪಿಟಿಐ): ‘ಮಿಸ್ಟರ್ ಯುನಿವರ್ಸ್’ ಪ್ರಶಸ್ತಿ ಗಳಿಸಿದ್ದ ಭಾರತದ ಪ್ರಥಮ ದೇಹದಾರ್ಢ್ಯಪಟು ಮನೋಹರ್ ಐಚ್ (104) ಭಾನುವಾರ ಮಧ್ಯಾಹ್ನ ನಿಧನರಾದರು. 1952ರಲ್ಲಿ ಅವರು ಲಂಡನ್‌ನಲ್ಲಿ ನಡೆದಿದ್ದ ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಮಿಸ್ಟರ್ ಯುನಿವರ್ಸ್’ ಪ್ರಶಸ್ತಿ  ಗೆದ್ದಿದ್ದರು. 4.11 ಅಡಿ ಇದ್ದ ಅವರನ್ನು ಅಭಿಮಾನಿಗಳು ‘ಪಾಕೆಟ್ ಹರ್ಕ್ಯುಲಸ್’ ಎಂದು ಕರೆಯುತ್ತಿದ್ದರು. 

‘ಕಳೆದ 15 ದಿನಗಳಿಂದ ಅವರು ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಿದ್ದರು. ಮಾತನಾಡುವುದನ್ನೂ ನಿಲ್ಲಿಸಿದ್ದರು. ಭಾನುವಾರ ಮಧ್ಯಾಹ್ನ 3.50ಕ್ಕೆ ಅವರು ನಿಧನರಾದರು’ ಎಂದು ಅವರ ಮಗ ಕೊಕನ್ ಐಚ್ ತಿಳಿಸಿದ್ದಾರೆ. ಮನೋಹರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry