ದೇಹಮೋಹಿ ರಣವೀರ್

7

ದೇಹಮೋಹಿ ರಣವೀರ್

Published:
Updated:
ದೇಹಮೋಹಿ ರಣವೀರ್

ಥಳುಕು ಬಳುಕು

ನಿಲುವುಗನ್ನಡಿ. ಎದುರಲ್ಲಿ ರಣವೀರ್ ಸಿಂಗ್. ತಮ್ಮ ದೇಹವನ್ನು ತಾವೇ ಇಂಚಿಂಚೂ ನೋಡಿಕೊಳ್ಳುತ್ತಾ ನಿಂತರು. ಮುಂಗೈನಿಂದ ಶುರುವಾಗಿ ವೈರ್‌ಗಳಂತೆ ದೇಹವನ್ನೆಲ್ಲಾ ಆವರಿಸಿದ್ದ ನರಗಳು ಉಬ್ಬಿನಿಂತಿದ್ದವು. ಅವುಗಳ ಪಥ ಸ್ಪಷ್ಟ. ಉಬ್ಬಿದೆದೆ. ತಲೆತುಂಬಾ ದಟ್ಟ ಕೂದಲು. ಕಣ್ಣಲ್ಲಿ ಆತ್ಮವಿಶ್ವಾಸದ ಪಸೆ. ಕುರುಚಲು ಗಡ್ಡವನ್ನೊಮ್ಮೆ ನೇವರಿಸಿಕೊಂಡು ಹಿಂದೆ ತಿರುಗುವಷ್ಟರಲ್ಲಿ ಸ್ಟೈಲಿಶ್ ನಿಂತಿದ್ದರು. `ಶೇವ್ ಮಾಡಬೇಡ' ಎಂಬ ಸಲಹೆ ಅವರಿಂದ ಬಂತು. ದಿನದ ವ್ಯಾಯಾಮದ ಎರಡನೇ ಕಂತು ಶುರುವಾಯಿತು.ರಣವೀರ್ ಸಿಂಗ್‌ಗೆ ತಮ್ಮ ದೇಹದ ಮೇಲೀಗ ವಿಪರೀತ ಪ್ರೀತಿ. “ಕನ್ನಡಿಗೆ ಏನಾದರೂ ಮಾತನಾಡಲು ಬಂದಿದ್ದರೆ, `ಅದೆಷ್ಟು ಸಲ ನಿನ್ನನ್ನು ನೀನೇ ನೋಡ್ಕೋತೀಯಾ ಹೋಗಯ್ಯಾ' ಎಂದು ಬಯ್ಯುತ್ತಿತ್ತೇನೋ” ಎಂಬ ರಣವೀರ್ ಮಾತೇ ಅವರ ದೇಹಮೋಹಕ್ಕೆ ಕನ್ನಡಿ.ಎಲ್ಲ ನಟರಂತೆ ಅವರು ಸಲೀಸಾಗಿ ವ್ಯಾಯಾಮ ಶಾಲೆಗೆ ಹೋಗಿ, ಸಾಮು ಮಾಡಿ, ದೇಹ ಬೆಳೆಸಿಕೊಂಡಿದ್ದಾರೆ ಎಂದು ಸರಳವಾಗಿ ಹೇಳಿದರೆ ತಪ್ಪಾಗುತ್ತದೆ. ವರ್ಷದ ಹಿಂದೆ ಅವರೊಂದು ಅಪಘಾತಕ್ಕೆ ಈಡಾಗಿದ್ದರು. ಬೆನ್ನಿನ ಮೂಳೆಗಳು ಅತ್ತಿತ್ತ ಆಗಿದ್ದವು. ಎರಡು ತಿಂಗಳು ಹಾಸಿಗೆ ಮೇಲೆ ವಿಶ್ರಾಂತಿ. ಮೊದಲ ತಿಂಗಳು ನಿತ್ಯ ಆರು ತಾಸು ಚಿಕಿತ್ಸೆ. ಒಮ್ಮೆ ಬೆನ್ನುಹುರಿಯಲ್ಲಿ ನೋವು ಕಾಣಿಸಿಕೊಂಡಿತೆಂದರೆ ಮತ್ತೆ ದೇಹವನ್ನು ಇಷ್ಟಬಂದಂತೆ ಬಾಗಿಸಿ ಬಳುಕುವಂತೆ ಮಾಡಿಕೊಳ್ಳುವುದು ಬಲು ಕಷ್ಟ. ರಣವೀರ್ ಅಂಥ ಕಷ್ಟಕ್ಕೆ ಎದೆಗೊಟ್ಟರು.ಹೃತಿಕ್ ರೋಷನ್ ಕೂಡ ಒಮ್ಮೆ ಬೆನ್ನುನೋವಿಗೆ ತುತ್ತಾದವರೇ. ಅವರಿಂದ ಸಲಹೆ ಪಡೆದರು. `ಕ್ರಿಶ್' ಚಿತ್ರಕ್ಕೆ ತಯಾರಾಗಿದ್ದ ರೀತಿಯನ್ನು ಕೇಳಿದ್ದೇ ರಣವೀರ್‌ಗೆ ಉತ್ಸಾಹ ಬಂತು. ವಿದೇಶಿ ತರಬೇತುದಾರ ಲಾಯ್ಡ ಸ್ಟೀವನ್ಸ್ ವ್ಯಾಯಾಮ ಶಾಲೆಗೆ ಬಂದರು. ಅಲ್ಲಿಂದಾಚೆಗೆ ರಣವೀರ್ ದೇಹ ರೂಪಿಸುವ ಕೆಲಸ ಅವರದ್ದೇ.ಬೆನ್ನುನೋವಿನ ಸಮಸ್ಯೆ ನೀಗಿಕೊಂಡ ಮೇಲೆ ರಣವೀರ್ ಕೆಲವು ದಿನಗಳು ಕನ್ನಡಿ ನೋಡಲು ಹಿಂದೇಟು ಹಾಕಿದರಂತೆ. ಒಂದು ದಿನ ಕುಳಿತಾಗ ಇದ್ದಕ್ಕಿದ್ದಂತೆ ತಮ್ಮ ಉದರಭಾಗದ ಚಪ್ಪಟೆಯಾಗಿದೆ ಎನಿಸಿತು. ಅದನ್ನು ನೋಡಿಕೊಳ್ಳಲು ನಿಲುಗನ್ನಡಿ ಮುಂದೆ ನಿಂತರು. ಇಡೀ ದೇಹ ಸ್ಪಷ್ಟ ಆಕಾರಕ್ಕೆ ಬರುತ್ತಿತ್ತು. ಅಲ್ಲಿಂದಾಚೆಗೆ ನಿಲುವುಗನ್ನಡಿ ಅವರ ಆಪ್ತಮಿತ್ರ. ಅದರ ಮುಂದೆ ನಿಂತು ಒಬ್ಬರೇ ಮಾತನಾಡಿಕೊಳ್ಳುತ್ತಾರೆ.ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ರಾಮ್ ಲೀಲಾ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸ್ಕ್ರಿಪ್ಟ್ ನೋಡಿದ ತಕ್ಷಣ ಕಿಂಚಿತ್ತೂ ಯೋಚಿಸದೆ ರಣವೀರ್ ಈ ಸಿನಿಮಾ ಅವಕಾಶವನ್ನು ಕಣ್ಣಿಗೊತ್ತಿಕೊಂಡರು. ವಿಕ್ರಮಾದಿತ್ಯ ಮೋಟ್ವಾನೆ ಕೈಗೆತ್ತಿಕೊಂಡಿರುವ `ಲೂಟೇರಾ' ರಣವೀರ್ ಅಭಿನಯಿಸುತ್ತಿರುವ ಇನ್ನೊಂದು ಕಮರ್ಷಿಯಲ್ ಅಲ್ಲದ ಚಿತ್ರ. ಯಶ್ ಚೋಪ್ರಾ ಅವರ ಬ್ಯಾನರ್ ನಿರ್ಮಿಸಲಿರುವ `ಗುಂಡೇ' ಚಿತ್ರದಲ್ಲಿ ನಟಿಸಲು ಕೂಡ ಅವರು ಸಹಿ ಹಾಕಿದ್ದಾರೆ.`ದೀರ್ಘ ಕಾಲ ಸಿನಿಮಾದಿಂದ ಹೊರಗುಳಿದ ಮೇಲೆ ಮತ್ತೆ ಅಭಿನಯಿಸುವ ಅವಕಾಶ ಸುಲಭವಾಗಿ ಸಿಗುವುದಿಲ್ಲ. ನನ್ನ ಅದೃಷ್ಟಕ್ಕೆ ಒಳ್ಳೊಳ್ಳೆಯ ಚಿತ್ರಗಳು ಹುಡುಕಿಕೊಂಡು ಬಂದವು. ದೈಹಿಕ ಕಸರತ್ತು ಮಾಡಲು ಆರಂಭಿಸಿದ ಮೇಲೆ ಇಷ್ಟೆಲ್ಲಾ ಅವಕಾಶ ಸಿಕ್ಕಿದ್ದು. ಹಾಗಾಗಿ ಅದಕ್ಕೂ ಸಿಗುತ್ತಿರುವ ಚಿತ್ರಗಳಿಗೂ ಏನೋ ಸಂಬಂಧ ಇದೆ ಎನ್ನಿಸಿ, ವ್ಯಾಯಾಮವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಿದೆ' ಅಂತಾರೆ ರಣವೀರ್.`ಬ್ಯಾಂಡ್ ಬಾಜಾ ಬಾರಾತ್' ಚಿತ್ರದಲ್ಲಿ ನಟಿಸುವಾಗ ಅನುಷ್ಕಾ ಶರ್ಮ ಹಾಗೂ ರಣವೀರ್ ನಡುವೆ ಪ್ರೇಮಾಂಕುರವಾಗಿತ್ತು. ಸರಸದ ನಂತರ ವಿರಸದ ದಿನಗಳು. ಈಗ ಇಬ್ಬರೂ ಸ್ನೇಹಿತರಷ್ಟೆ. `ಅನುಷ್ಕಾ ಹತ್ತಿರವಿದ್ದಾಗ ಪ್ರೀತಿ. ದೂರ ಇರುವಾಗ ವಿರಹ. ಅವಳು ತುಂಬಾ ಸ್ಪೆಷಲ್ ಹುಡುಗಿ. ನನ್ನ ಹೃದಯದಲ್ಲಿ ಅವಳಿಗೆ ಎಂದಿಗೂ ವಿಶೇಷ ಸ್ಥಾನ'- ಇದು ಹಳೆಯ ಪ್ರೀತಿಯ ಕುರಿತು ರಣವೀರ್ ನೀಡುವ ಪ್ರತಿಕ್ರಿಯೆ.ರಣವೀರ್‌ಗೆ ಕರೀನಾ ಕಪೂರ್ ಅಂದರೆ ಆರನೇ ಪ್ರಾಣ. ಆಕೆಯ ಪರಮ ಅಭಿಮಾನಿ. `ರಾಮ್ ಲೀಲಾ' ಚಿತ್ರಕ್ಕೆ ಮೊದಲು ಕರೀನಾ ನಾಯಕಿ ಎಂದಾಗಿತ್ತು. ಆಗ ಈ ಹುಡುಗನ ಸಂತಸಕ್ಕೆ ಪಾರವೇ ಇರಲಿಲ್ಲ. ಯುರೋಪ್‌ಗೆ ಹೋಗಿ ತನ್ನ ಹುಟ್ಟುಹಬ್ಬ ಹಾಗೂ ಮೆಚ್ಚಿನ ನಟಿಯೇ ನಾಯಕಿಯಾದ ಸಂಭ್ರಮವನ್ನು ಆಪ್ತೇಷ್ಟರ ಜೊತೆಗೆ ಆಚರಿಸಿಕೊಂಡು ಬಂದಿದ್ದರು. ಬರುವಷ್ಟರಲ್ಲಿ `ಠುಸ್'. ಕರೀನಾ ಚಿತ್ರದಿಂದ ಹೊರಗೆ ಹೋಗಿದ್ದರು. ಅವರ ಜಾಗಕ್ಕೆ ದೀಪಿಕಾ ಪಡುಕೋಣೆ ಬಂದರು.ದೀಪಿಕಾ ಹಾಗೂ ರಣವೀರ್ ನಡುವೆ ಅಭಿನಯದಲ್ಲಿ ಸೂಕ್ತ ಹೊಂದಾಣಿಕೆ ಮೂಡಲಿ ಎಂದೇ ಸಂಜಯ್ ಲೀಲಾ ಬನ್ಸಾಲಿ ಇಬ್ಬರಿಗೂ ಒಟ್ಟೊಟ್ಟಿಗೆ ಸುತ್ತಾಡುವಂತೆ ಆದೇಶಿಸಿದರು. ಇವರಿಬ್ಬರನ್ನೂ ಹೋಟೆಲ್, ಪಾರ್ಕ್ ಅಲ್ಲಿ ಇಲ್ಲಿ ನೋಡಿದವರು ಸಂಬಂಧದ ಪುಗ್ಗೆ ಹಾರಿಸಿದರು. ಚಿತ್ರೀಕರಣಕ್ಕೆ ಮೊದಲೇ ಸಿನಿಮಾ ಸುದ್ದಿಯಾದದ್ದು ಅವರಿಬ್ಬರ ಪ್ರೀತಿ ಕುರಿತ ವದಂತಿಯಿಂದ.`ನಮ್ಮಿಬ್ಬರದೂ ಸ್ನೇಹವಷ್ಟೆ' ಎನ್ನುವ ರಣವೀರ್ ಕಡೆದಿಟ್ಟ ದೇಹವನ್ನು ಹಾಗೆಯೇ ಪೋಷಿಸಿಕೊಂಡು ಹೋಗುವ ಉಮೇದಿನಲ್ಲಿದ್ದಾರೆ. `ನನ್ನದು ಪರ್ಫೆಕ್ಟ್ ಬಾಡಿ, ಅಲ್ಲವೇ' ಎಂದು ಎದುರಾದ ಎಲ್ಲರನ್ನೂ ಕೇಳುವುದು ಅವರಿಗೀಗ ಚಾಳಿಯಾಗಿಬಿಟ್ಟಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry